ಅಮೆರಿಕಕ್ಕೆ ಇರಾನ್ 3 ಷರತ್ತುಗಳು 
ವಿದೇಶ

ಟ್ರಂಪ್​ಗೆ ಇರಾನ್ 3 ಷರತ್ತಿನ ಚೆಕ್​ಮೇಟ್​! ವೈರಿ ರಾಷ್ಟ್ರದ ಎದುರು ತಲೆ ಬಗ್ಗಿಸದ ಅಮೆರಿಕ ಅಧ್ಯಕ್ಷ; ಇಲ್ಲಿದೆ ಯುದ್ಧದ ಕಂಪ್ಲೀಟ್​ ಚಿತ್ರಣ ​

ಪ್ರಮುಖ ಮುಖ್ಯಾಂಶಗಳು

  • ಸಂಧಾನದ ಎರಡನೇ ಮಾತುಕತೆಯೂ ವಿಫಲ
  • ಮಾತುಕತೆ ವಿಫಲಗೊಳ್ಳುತ್ತಿದ್ದಂತೆ ಅಮೆರಿಕ ಅಧ್ಯಕ್ಷನಿಗೆ ಇರಾನ್ ಚೆಕ್​ಮೇಟ್​
  • ಇರಾನ್​ ಮುಂದಿಟ್ಟಿರುವ ಮೂರು ಷರತ್ತುಗಳೇನು? ಏನಿದೆ ಅದರಲ್ಲಿ?
ವಾಷಿಂಗ್ಟನ್​​: ಫೆ.28ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲಿ ಮಿಲಿಟರಿ ಜಂಟಿ ಕ್ಷಿಪಣಿ ದಾಳಿ ನಡೆಸುವ ಮೂಲಕ ಇರಾನಿನ ಹಲವಾರು ಪ್ರಮುಖ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ಮಾಡಿತು. 169ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದ ಶಾಲೆಯ ಮೇಲೆ ಅಟ್ಯಾಕ್​ ಮಾಡಿದ ಅಮೆರಿಕ, ಅಮಾಯಕ ಮಕ್ಕಳನ್ನು ಬಲಿ ಪಡೆದ ಮರುಕ್ಷಣವೇ ಯುದ್ಧವು ತಾರಕಕ್ಕೇರಿತು. ಇರಾನ್‌ನ ಸರ್ವೋಚ್ಚ ನಾಯಕ ಅಯೊತಲ್ಲಾ ಅಲಿ ಖಮೇನಿ ಅವರ ಹತ್ಯೆಗೈದ ಟ್ರಂಪ್​ ನಡೆಯನ್ನು ತೀವ್ರವಾಗಿ ಖಂಡಿಸಿದ ಇರಾನ್​, ಹೊರ್ಮುಜ್​ ಜಲಸಂಧಿಯನ್ನು ಮುಚ್ಚುವ ಮೂಲಕ ಇದೀಗ ಇಡೀ ಜಗತ್ತಿಗೆ ದೊಡ್ಡ ಸಂಕಷ್ಟ ತಂದೊಡ್ಡಿದೆ. 
ತನ್ನ ಬಹುಪಾಲು ಅಂಗವನ್ನು ಹೊಡೆದುರುಳಿಸಿರುವ ಟ್ರಂಪ್​ ಮತ್ತು ಇಸ್ರೇಲ್​ ವಿರುದ್ಧ ತಕ್ಕ ಪ್ರತೀಕಾರ ತೀರಿಸಿಕೊಳ್ಳಲು ಸಿಡಿದೆದ್ದಿರುವ ಇರಾನ್, ಇಸ್ರೇಲ್ ಮತ್ತು ಕೊಲ್ಲಿಯಲ್ಲಿರುವ ಯುಎಸ್ ಮಿಲಿಟರಿ ನೆಲೆಗಳು ಸೇರಿದಂತೆ ಅಮೆರಿಕದ ಮಿತ್ರ ರಾಷ್ಟ್ರಗಳ ಮೇಲೆ ಸರಣಿ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸುತ್ತಲೇ ಇವೆ. ತೈಲ ಮತ್ತು ಅನಿಲ ಬಿಕ್ಕಟ್ಟು ಕಾಡುವಂತೆ ಮಾಡಿರುವ ಇರಾನ್​ ಸೇನೆ, ಹೊರ್ಮುಜ್​ ಜಲಸಂಧಿಯಲ್ಲಿ ಒಂದೇ ಒಂದು ವೈರಿ ರಾಷ್ಟ್ರದ ಹಡಗುಗಳು ಕಣ್ಣಿಗೆ ಬೀಳದಂತೆ ಕೆಟ್ಟೆಚ್ಚರ ವಹಿಸಿರುವುದು ಸದ್ಯ ಯುದ್ಧದ ಕಾವು ಜೋರಾಗಲು ಮೂಲ ಕಾರಣ.  
ಟ್ರಂಪ್​ 10 ದಿನಗಳ ಕಾಲ ತಾತ್ಕಾಲಿಕ ಕದನ ವಿರಾಮಕ್ಕೆ ಘೋಷಿಸಿದ್ದೇ ಆದರೂ ತನ್ನ ರಾಷ್ಟ್ರದ ಮೇಲೆ ನಡೆದ ದಾಳಿಗಳನ್ನು ಇರಾನ್​ ಖಂಡಿಸಿ, ಸೀಜ್​ ಫೈರ್​ ಮಧ್ಯೆಯೂ ಸರಣಿ ದಾಳಿಯನ್ನು ಮುಂದುವರಿಸಿತು. ನೇರವಾಗಿ ಅಮೆರಿಕೆ ಜೊತೆ ಮುಖಾಮುಖಿಯಾಗಿ ಕೂತು ಸಂಧಾನದ ಬಗ್ಗೆ ಮಾತನಾಡಲು ಬಯಸದ ಇರಾನ್​, ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆಸಿದ ಮೊದಲ ಮಾತುಕತೆ ವಿಫಲವಾಯಿತು. ಇದರಿಂದ ಟ್ರಂಪ್​ ಸಿಡಿಮಿಡಿಗೊಂಡರು. ಆದರೆ, ಇತ್ತೀಚೆಗೆ ನಡೆದ ಎರಡನೇ ಬಾರಿಯ ಮಾತುಕತೆ ಕೂಡ ಫಲ ನೀಡದಿರುವುದು ಸದ್ಯ ಮುಂದೆ ದೊಡ್ಡದೇನೋ ಸಂಭವಿಸಲಿದೆ ಎಂಬ ಮುನ್ಸೂಚನೆಯನ್ನು ನೀಡಿದೆ.     

ಸಂಧಾನಕ್ಕೆ 3 ಹಂತದ ಷರತ್ತಿನ ಚೆಕ್​ಮೇಟ್​

ಕೊಲ್ಲಿಯಲ್ಲಿ ಶಾಂತಿ ಮರುಸ್ಥಾಪಿಸುವ ಉದ್ದೇಶದಿಂದ ಅಮೆರಿಕ ಹಾಗೂ ಇರಾನ್ ನಡುವೆ ಪಾಕಿಸ್ತಾನದಲ್ಲಿ ಆಯೋಜನೆಗೊಂಡಿದ್ದ 2ನೇ ಹಂತದ ಶಾಂತಿ ಮಾತುಕತೆಯೂ ಮುರಿದುಬಿದ್ದ ಬೆನ್ನಲ್ಲೇ, ಇರಾನ್ 3 ಹೊಸ ಷರತ್ತುಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎದುರಿಗಿಟ್ಟಿದೆ. ದಾಳಿ ನಿಲ್ಲಬೇಕು, ಹೊರ್ಮುಜ್ ಜಲಸಂಧಿ ಮುಕ್ತವಾಗಬೇಕು ಆನಂತರವಷ್ಟೇ ಅಮೆರಿಕದ ಜತೆ ಮಾತುಕತೆ ಎಂದು ಇರಾನ್​ ಅಮೆರಿಕ ಅಧ್ಯಕ್ಷನಿಗೆ ಚೆಕ್​ಮೇಟ್​ ಇಟ್ಟಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.

ಏನು ಆ 3 ಷರತ್ತುಗಳು? 

ಇರಾನ್ ತನ್ನ ಈ ಪ್ರಸ್ತಾವನೆಯನ್ನು ಮಧ್ಯವರ್ತಿಗಳಾಗಿರುವ ಪಾಕಿಸ್ತಾನ, ಟರ್ಕಿ, ಈಜಿಪ್ಟ್ ಮತ್ತು ಕತಾರ್ ಮೂಲಕ ಅಮೆರಿಕಕ್ಕೆ ತಲುಪಿಸಿರುವುದು ಗಮನಾರ್ಹ. ಮೊದಲ ಷರತ್ತಿನ ಪ್ರಕಾರ, ಅಮೆರಿಕ ಯುದ್ಧವನ್ನು ಸಂಪೂರ್ಣವಾಗಿ ಕೊನೆಗೊಳಿಸುವ ಜತೆಗೆ ಇರಾನ್ ಮತ್ತು ಲೆಬನಾನ್ ಮೇಲೆ ಮತ್ತೆ ದಾಳಿ ಮಾಡುವುದಿಲ್ಲ ಎಂಬ ಖಾತರಿ ಕೊಡಬೇಕು. ಮೊದಲ ಷರತ್ತಿಗೆ ಒಪ್ಪಿಗೆ ಸೂಚಿಸಿದ ಬಳಿಕವೇ ಎರಡನೇ ಷರತ್ತಿನ ಕುರಿತು ಮಾತುಕತೆ ನಡೆಯಲಿದೆ ಎಂದು ಇರಾನ್​ ಗಟ್ಟಿಯಾಗಿ ಹೇಳಿದೆ.
ಹೊರ್ಮುಜ್ ನಿರ್ವಹಣೆ, ಅದರ ಆಡಳಿತದ ಕುರಿತ ಚರ್ಚೆಗಳ ಮೇಲೆ 2ನೇ ಷರತ್ತು ಷರತ್ತುಗಳು ಕೇಂದ್ರೀಕೃತವಾಗಿದೆ. ಈ ಸುತ್ತಿನ ಮಾತುಕತೆ ಫಲಪ್ರದವಾದರೆ ಮಾತ್ರ ಮೂರನೇ ಹಂತದ ಮಾತುಕತೆಯಲ್ಲಿ ಪರಮಾಣು ಕಾರ್ಯಕ್ರಮ ವಿಷಯ ಚರ್ಚಿಸುವುದಾಗಿ ಇರಾನ್ ಸ್ಪಷ್ಟಪಡಿಸಿದೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ನಿಲ್ಲಿಸಬೇಕು, ತನ್ನಲ್ಲಿರುವ ಪುಷ್ಟಿಕರಿಸಿದ ಯುರೇನಿಯಂ ಅನ್ನು ದೇಶದಿಂದ ಹೊರಗೆ ಸಾಗಿಸಬೇಕು ಎಂದು ಅಮೆರಿಕ ನಿರಂತರವಾಗಿ ಒತ್ತಾಯಿಸುತ್ತಿದೆ. ಹಾಗಾಗಿ ಮೂರನೇ ಹಂತದ ಮಾತುಕತೆ ಪ್ರಾಮುಖ್ಯ ಪಡೆದುಕೊಂಡಿದೆ. ಈ ಪ್ರಸ್ತಾಪದ ಅಡಿ ದಿಬ್ಬಂಧನ ತೆಗೆದುಹಾಕಿ ಯುದ್ಧ ಕೊನೆಗೊಂಡರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಥಾನ ದುರ್ಬಲಗೊಳ್ಳಬಹುದು ಎನ್ನಲಾಗುತ್ತಿದೆ.

ಪಾಕ್ ಬಗ್ಗೆ ಇರಾನ್ ಗುಮಾನಿ 

ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನ ರಾಜತಾಂತ್ರಿಕವಾಗಿ ತಟಸ್ಥವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಇರಾನ್ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. 'ಪಾಕಿಸ್ತಾನ ನಮ್ಮ ಒಳ್ಳೆಯ ಸ್ನೇಹಿತ. ಆದರೆ ಅದು ಮಾತುಕತೆಗೆ ಸೂಕ್ತವಾದ ಮಧ್ಯವರ್ತಿಯಲ್ಲ, ಮಧ್ಯಸ್ಥಿಕೆಗೆ ಅಗತ್ಯವಾದ ವಿಶ್ವಾಸಾರ್ಹತೆ ಹೊಂದಿಲ್ಲ. ಪಾಕ್​ ಅಮೆರಿಕದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರವೃತ್ತಿ ಹೊಂದಿದೆ. ಹಾಗಾಗಿ ಅದು ಅಮೆರಿಕದ ನಿಲುವುಗಳನ್ನು ಪ್ರಶ್ನಿಸುವುದಿಲ್ಲ ಎಂದಿದೆ. 
ಅಮೆರಿಕ ಮೊದಲು ಪಾಕಿಸ್ತಾನದ ಪ್ರಸ್ತಾಪ ಒಪ್ಪಿಕೊಂಡು ನಂತರ ಮಾತುಕತೆಯಿಂದ ಹಿಂದೆ ಸರಿಯಿತು ಎಂಬುದನ್ನು ಜಗತ್ತಿಗೆ ಹೇಳಲು ಅದು ಸಿದ್ಧವಿಲ್ಲ. ಇದು ಮಾತುಕತೆಯ ವೇಳೆ ಪಾಕಿಸ್ತಾನ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುವ ಸಾಧ್ಯತೆ ಕುರಿತು ಪ್ರಶ್ನೆ ಹುಟ್ಟುಹಾಕಿದೆ' ಎಂದು ಇರಾನ್ ವಕ್ತಾರ ಇಬ್ರಾಹಿಂ ರಜಾಯಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.