Strait of Hormuz 
ವಿದೇಶ

Strait of Hormuz: ಅಮೆರಿಕದ ದಿಗ್ಬಂಧನ ಮೀರಿ ಹಾರ್ಮುಜ್‌ ಜಲಸಂಧಿಯಲ್ಲಿ ಸಂಚರಿಸಿದ ಚೀನಾದ ಹಡಗು: ಇರಾನ್ ವ್ಯಂಗ್ಯ

ಪ್ರಮುಖ ಮುಖ್ಯಾಂಶಗಳು

  • ಅಮೆರಿಕದ ದಿಗ್ಬಂಧನ ಮೀರಿ ಸಂಚರಿಸಿದ ಚೀನಾ ಮೂಲದ 'ರಿಚ್ ಸ್ಟಾರಿ' ಹಡಗು
  • ಹಡಗಿನಲ್ಲಿ ಚೀನಾ ಸಿಬ್ಬಂದಿ ಇದ್ದ ಕಾರಣ ಸುಮ್ಮನಾಯಿತೇ ಅಮೆರಿಕ ನೌಕಾಪಡೆ?
  • ಇರಾನ್‌ನಿಂದ ಅಮೆರಿಕಕ್ಕೆ ಜಾಗತಿಕ ಮಟ್ಟದಲ್ಲಿ ಲೇವಡಿ
  • ಚೀನಾ-ಅಮೆರಿಕ ನಡುವೆ ಶುರುವಾದ ಸಮುದ್ರ ಯುದ್ಧದ ಭೀತಿ
ಟೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರ್ಮುಜ್ ಜಲಸಂಧಿಯಲ್ಲಿ ವಿಧಿಸಿರುವ ಕಠಿಣ ನೌಕಾ ದಿಗ್ಬಂಧನವನ್ನು (Strait of Hormuz) ಚೀನಾ ಮೂಲದ ಹಡಗೊಂದು ಯಶಸ್ವಿಯಾಗಿ ದಾಟುವ ಮೂಲಕ ಶ್ವೇತಭವನಕ್ಕೆ ನೇರ ಸವಾಲು ಹಾಕಿದೆ. ಅಮೆರಿಕದ ಎಚ್ಚರಿಕೆಯ ನಡುವೆಯೂ ಚೀನಾ ಲಿಂಕ್ ಇರುವ ಹಡಗು ಸುರಕ್ಷಿತವಾಗಿ ಸಂಚರಿಸಿರುವುದು ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ನಡೆದಿದ್ದೇನು? ಚೀನಾ ಹಡಗಿನ ಚಾಣಾಕ್ಷತನ!

ಅಮೆರಿಕದ ದಿಗ್ಬಂಧನ ಜಾರಿಗೆ ಬಂದ ಬೆನ್ನಲ್ಲೇ, ಅಮೆರಿಕದಿಂದ ಈಗಾಗಲೇ ನಿರ್ಬಂಧಕ್ಕೊಳಗಾಗಿದ್ದ (Sanctioned) 'ರಿಚ್ ಸ್ಟಾರಿ' (Rich Starry) ಎಂಬ ತೈಲ ಟ್ಯಾಂಕರ್ ಹಾರ್ಮುಜ್ ಜಲಸಂಧಿಯನ್ನು ಪ್ರವೇಶಿಸಿತ್ತು. ಆರಂಭದಲ್ಲಿ ಈ ಹಡಗು ಸೋಮವಾರ ಹಿಂದಕ್ಕೆ ಸರಿದಿತ್ತಾದರೂ, ಮಂಗಳವಾರ ಹಡಗಿನಲ್ಲಿ 'ಚೀನಾ ಸಿಬ್ಬಂದಿ ಇದ್ದಾರೆ' ಎಂಬ ಸಂದೇಶವನ್ನು ರವಾನಿಸುತ್ತಲೇ ಜಲಸಂಧಿಯನ್ನು ದಾಟಿ ಒಮಾನ್ ಕೊಲ್ಲಿಗೆ ಪ್ರವೇಶಿಸಿದೆ. ಇದು ಅಮೆರಿಕ ನೌಕಾಪಡೆಗೆ ಎದುರಾದ ಮೊದಲ ದೊಡ್ಡ ಸವಾಲಾಗಿದೆ.

ಇರಾನ್ ವ್ಯಂಗ್ಯ: "ಪ್ರೀಮಿಯಂ ವರ್ಷನ್ ತಗೊಂಡಿದ್ದಾರೆ!"

ಚೀನಾ ಹಡಗು ಅಮೆರಿಕದ ದಿಗ್ಬಂಧನವನ್ನು ಮೀರಿ ಸಂಚರಿಸಿದ್ದನ್ನೇ ಅಸ್ತ್ರವಾಗಿಸಿಕೊಂಡಿರುವ ಇರಾನ್, ಅಮೆರಿಕವನ್ನು ಮನಬಂದಂತೆ ವ್ಯಂಗ್ಯ ಮಾಡಿದೆ. ಘಾನಾದಲ್ಲಿರುವ ಇರಾನ್ ರಾಯಭಾರ ಕಚೇರಿ ಟ್ವೀಟ್ ಮಾಡಿ, "ಅಮೆರಿಕದ ನೌಕಾಪಡೆ ತನ್ನ 'ದೊಡ್ಡ ಮತ್ತು ಸುಂದರ ಹಡಗುಗಳ' ಮೂಲಕ ಪದೇ ಪದೇ ಎಚ್ಚರಿಕೆ ನೀಡುತ್ತಲೇ ಇತ್ತು. ಆದರೆ ಹಡಗಿನ ಕ್ಯಾಪ್ಟನ್ ಜಾಹೀರಾತುಗಳನ್ನು ಸ್ಕಿಪ್ ಮಾಡಲು 'ಪ್ರೀಮಿಯಂ ವರ್ಷನ್'ಗೆ ಅಪ್‌ಗ್ರೇಡ್ ಆಗಿರಬೇಕು!" ಎಂದು ಟ್ರಂಪ್ ಅವರ ಶೈಲಿಯಲ್ಲೇ ಕಾಲೆಳೆದಿದೆ. ಅಲ್ಲದೆ, ಟ್ರಂಪ್ ದಿಗ್ಬಂಧನವು ಕೇವಲ ಅವರು ಯಾರಿಗೆ ಹೆದರುವುದಿಲ್ಲವೋ ಅಂತಹ ದೇಶಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಲೇವಡಿ ಮಾಡಿದೆ.

ಚೀನಾ-ಅಮೆರಿಕ ಮುಖಾಮುಖಿ?

ಹಾರ್ಮುಜ್ ಜಲಸಂಧಿಯು ಚೀನಾಕ್ಕೆ ಅತ್ಯಂತ ನಿರ್ಣಾಯಕ. ಚೀನಾದ ಶೇ. 38ರಷ್ಟು ತೈಲ ಮತ್ತು ಶೇ. 25ರಷ್ಟು ಅನಿಲ ಪೂರೈಕೆ ಈ ಮಾರ್ಗದ ಮೂಲಕವೇ ಆಗುತ್ತದೆ. ಅಮೆರಿಕದ ಈ ದಿಗ್ಬಂಧನವನ್ನು 'ಅಪಾಯಕಾರಿ ಮತ್ತು ಬೇಜವಾಬ್ದಾರಿ' ಎಂದು ಕರೆದಿರುವ ಚೀನಾ, ಜಗತ್ತು ಮತ್ತೆ 'ಕಾಡಿನ ಕಾನೂನಿಗೆ' (Law of the jungle) ಮರಳಲು ಬಿಡುವುದಿಲ್ಲ ಎಂದು ಗುಡುಗಿದೆ.
ಮುಂದಿನ ತಿಂಗಳು ಟ್ರಂಪ್ ಚೀನಾ ಪ್ರವಾಸ ಕೈಗೊಳ್ಳಲಿದ್ದು, ಅಧ್ಯಕ್ಷ ಷಿ ಜಿನ್‌ಪಿಂಗ್ ಭೇಟಿಗೂ ಮುನ್ನವೇ ಈ ಘಟನೆ ಸಂಭವಿಸಿರುವುದು ಉಭಯ ರಾಷ್ಟ್ರಗಳ ನಡುವೆ ಯುದ್ಧದ ಭೀತಿಯನ್ನು ಹೆಚ್ಚಿಸಿದೆ. ಚೀನಾವು ಇರಾನ್‌ಗೆ ವಾಯು ರಕ್ಷಣಾ ವ್ಯವಸ್ಥೆಯನ್ನು ಪೂರೈಸಲು ಸಿದ್ಧತೆ ನಡೆಸುತ್ತಿದೆ ಎಂಬ ಅಮೆರಿಕದ ಗುಪ್ತಚರ ವರದಿಯು ಬೆಂಕಿಗೆ ತುಪ್ಪ ಸುರಿದಂತಿದೆ,(ಏಜೆನ್ಸೀಸ್​).