ದೋಹಾ: ಗಲ್ಫ್ ವಲಯದಲ್ಲಿ ಯುದ್ಧದ ಜ್ವಾಲೆ ಭುಗಿಲೆದ್ದಿದೆ. ವಿಶ್ವದ ಅತಿದೊಡ್ಡ(Qatar Energy ) ದ್ರವೀಕೃತ ನೈಸರ್ಗಿಕ ಅನಿಲ (LNG) ಉತ್ಪಾದನಾ ಕೇಂದ್ರವಾದ ಕತಾರ್‌ನ 'ರಾಸ್ ಲಫ್ಫಾನ್' (Ras Laffan) ಮೇಲೆ ಇರಾನ್ ನಡೆಸಿದ ಭೀಕರ ಕ್ಷಿಪಣಿ ದಾಳಿಯು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಈ ದಾಳಿಯಿಂದ ಜಾಗತಿಕ ಇಂಧನ ಸರಬರಾಜಿನಲ್ಲಿ ಏರುಪೇರಾಗುವ ಭೀತಿ ಎದುರಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ನೇರ ಯುದ್ಧದ ಎಚ್ಚರಿಕೆ ನೀಡಿದ್ದಾರೆ.
ಕತಾರ್‌ನ ಸರ್ಕಾರಿ ಇಂಧನ ಸಂಸ್ಥೆ 'ಕತಾರ್ ಎನರ್ಜಿ' ನೀಡಿರುವ ಮಾಹಿತಿಯಂತೆ, ಇರಾನ್‌ನ ಮಿಸೈಲ್‌ಗಳು ರಾಸ್ ಲಫ್ಫಾನ್‌ನ ಪ್ರಮುಖ ಎಲ್‌ಎನ್‌ಜಿ ಸಂಸ್ಕರಣಾ ಘಟಕಗಳಿಗೆ ಅಪ್ಪಳಿಸಿವೆ. ವಿಶ್ವದ ಬೃಹತ್ ಗ್ಯಾಸ್-ಟು-ಲಿಕ್ವಿಡ್ ಪ್ಲಾಂಟ್ ಆದ 'ಪರ್ಲ್' ತೀವ್ರವಾಗಿ ಜರ್ಜರಿತಗೊಂಡಿದೆ. ಅಂತರಾಷ್ಟ್ರೀಯ ಇಂಧನ ದೈತ್ಯ ಶೆಲ್ ಸಂಸ್ಥೆಯ ಹೂಡಿಕೆಯಿರುವ ಘಟಕಗಳು ಬೆಂಕಿಗೆ ಆಹುತಿಯಾಗಿವೆ. ಕತಾರ್ ಮಾತ್ರವಲ್ಲದೆ, ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಮೇಲೆಯೂ ಇರಾನ್ ದಾಳಿ ನಡೆಸಿದ್ದು, ಹಬಶಾನ್ ಗ್ಯಾಸ್ ಘಟಕಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚಲಾಗಿದೆ.
ಇರಾನ್ ನೀಡಿದ ಕಾರಣವೇನು?
ಇರಾನ್‌ನ ತನ್ನದೇ ಆದ 'ಸೌತ್ ಪಾರ್ಸ್' ಮತ್ತು 'ಅಸಲುಯೆಹ್' ಇಂಧನ ಮೂಲಸೌಕರ್ಯಗಳ ಮೇಲೆ ಈ ಹಿಂದೆ ನಡೆದಿದ್ದ ದಾಳಿಗೆ ಪ್ರತಿಕಾರವಾಗಿ ಈ ಕ್ರಮ ಕೈಗೊಂಡಿರುವುದಾಗಿ ಸಮರ್ಥಿಸಿಕೊಂಡಿದೆ. ದಾಳಿಗೂ ಮುನ್ನ ಇರಾನ್ ಸೌದಿ ಅರೇಬಿಯಾ, ಯುಎಇ ಮತ್ತು ಕತಾರ್‌ನ ಇಂಧನ ಘಟಕಗಳನ್ನು ಖಾಲಿ ಮಾಡುವಂತೆ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ.
ಟ್ರಂಪ್ ನೀಡಿದ 'ಮಾಸ್ಸಿವ್' ಎಚ್ಚರಿಕೆ!
ಈ ದಾಳಿಯ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಇನ್ನೊಮ್ಮೆ ಕತಾರ್ ಘಟಕಗಳ ಮೇಲೆ ದಾಳಿ ನಡೆದರೆ, ಇಡೀ ಇರಾನ್‌ನ 'ಸೌತ್ ಪಾರ್ಸ್ ಗ್ಯಾಸ್ ಫೀಲ್ಡ್' ಅನ್ನು ನಾವು ಬಾಂಬ್ ಹಾಕಿ ಉಡಾಯಿಸುತ್ತೇವೆ" ಎಂದು ಎಚ್ಚರಿಸಿದ್ದಾರೆ. ಇಸ್ರೇಲ್ ನಡೆಸಿದ ದಾಳಿಯು ಅಮೆರಿಕ ಅಥವಾ ಕತಾರ್‌ಗೆ ತಿಳಿಯದಂತೆ ನಡೆದಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಇರಾನ್ ಅಧಿಕಾರಿಗಳ ಉಚ್ಚಾಟನೆ
ತನ್ನ ರಾಷ್ಟ್ರೀಯ ಭದ್ರತೆಗೆ ನೇರ ಬೆದರಿಕೆ ಒಡ್ಡಿದ ಇರಾನ್ ವಿರುದ್ಧ ಕತಾರ್ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಇರಾನ್‌ನ ಭದ್ರತಾ ಮತ್ತು ಮಿಲಿಟರಿ ಅಧಿಕಾರಿಗಳನ್ನು 24 ಗಂಟೆಗಳ ಒಳಗೆ ದೇಶ ಬಿಟ್ಟು ತೊರೆಯುವಂತೆ ಆದೇಶಿಸಲಾಗಿದೆ. ಇರಾನ್ ಅಧಿಕಾರಿಗಳನ್ನು 'ಪರ್ಸೋನಾ ನಾನ್ ಗ್ರಾಟಾ' (ಅನಪೇಕ್ಷಿತ ವ್ಯಕ್ತಿಗಳು) ಎಂದು ಘೋಷಿಸಿ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಳ್ಳುವ ಸೂಚನೆ ನೀಡಿದೆ.
ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ
ಕತಾರ್ ವಾರ್ಷಿಕ 77 ಮಿಲಿಯನ್ ಮೆಟ್ರಿಕ್ ಟನ್ ಎಲ್‌ಎನ್‌ಜಿ ಉತ್ಪಾದಿಸುತ್ತದೆ. ಈ ಘಟಕಗಳ ಮೇಲೆ ದಾಳಿಯಾಗಿರುವುದು ಜಗತ್ತಿನಾದ್ಯಂತ ಅನಿಲದ ತೀವ್ರ ಅಭಾವಕ್ಕೆ ಕಾರಣವಾಗಬಹುದು. ತಜ್ಞರ ಪ್ರಕಾರ, ಇದರಿಂದ ಗ್ಯಾಸ್ ಬೆಲೆಗಳು ಗಗನಕ್ಕೇರಲಿವೆ. ವಿಪರ್ಯಾಸವೆಂದರೆ, ಜಾಗತಿಕವಾಗಿ ಗ್ಯಾಸ್ ಬೆಲೆ ಹೆಚ್ಚಾದರೆ ಅಮೆರಿಕಕ್ಕೆ ಆರ್ಥಿಕವಾಗಿ ಲಾಭವಾಗಲಿದೆ ಎಂಬ ವಿಶ್ಲೇಷಣೆಗಳೂ ಕೇಳಿಬರುತ್ತಿವೆ,(ಏಜೆನ್ಸೀಸ್).