Iran-US War 2026 
ವಿದೇಶ

4,000 ಕಿ.ಮೀ ದೂರದದಲ್ಲಿನ ಹಿಂದೂ ಮಹಾಸಾಗರದ ಅಮೆರಿಕ-ಬ್ರಿಟನ್ ಸೇನಾ ನೆಲೆ ಮೇಲೆ ಇರಾನ್ ಕ್ಷಿಪಣಿ ದಾಳಿ! | Iran-US War 2026

ವಾಷಿಂಗ್ಟನ್/ಟೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ(Iran-US War 2026) ಸಂಘರ್ಷ ಈಗ ಊಹಿಸಲೂ ಸಾಧ್ಯವಾಗದ ಮಟ್ಟಕ್ಕೆ ತಲುಪಿದೆ. ಇರಾನ್ ಸೇನೆಯು ಹಿಂದೂ ಮಹಾಸಾಗರದಲ್ಲಿರುವ ಅಮೆರಿಕ ಮತ್ತು ಬ್ರಿಟನ್‌ನ ಅತ್ಯಂತ ಪ್ರಮುಖ ಮಿಲಿಟರಿ ನೆಲೆ 'ಡಿಯಾಗೋ ಗಾರ್ಸಿಯಾ' (Diego Garcia) ಮೇಲೆ ಎರಡು ಮಧ್ಯಂತರ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು (IRBM) ಉಡಾಯಿಸುವ ಮೂಲಕ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಇದು ಇರಾನ್‌ನ ಕ್ಷಿಪಣಿ ಸಾಮರ್ಥ್ಯವು ಜಗತ್ತು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಅಪಾಯಕಾರಿ ಎಂಬ ಮುನ್ಸೂಚನೆಯನ್ನು ನೀಡಿದೆ.

4,000 ಕಿ.ಮೀ ದೂರದ ಮೇಲೆ ಕಣ್ಣಿಟ್ಟ ಇರಾನ್!

ವಾಲ್ ಸ್ಟ್ರೀಟ್ ಜರ್ನಲ್ (WSJ) ವರದಿಯ ಪ್ರಕಾರ, ಇರಾನ್ ಮೊದಲ ಬಾರಿಗೆ ತನ್ನ ಗಡಿಯಿಂದ ಸುಮಾರು 4,000 ಕಿಲೋಮೀಟರ್ ದೂರದಲ್ಲಿರುವ ಗುರಿಯನ್ನು ತಲುಪಲು ಪ್ರಯತ್ನಿಸಿದೆ. ಎರಡು ಕ್ಷಿಪಣಿಗಳ ಪೈಕಿ ಒಂದು ಹಾರಾಟದ ಮಧ್ಯದಲ್ಲೇ ವಿಫಲವಾದರೆ, ಮತ್ತೊಂದನ್ನು ಅಮೆರಿಕದ ಯುದ್ಧನೌಕೆಯಿಂದ ಹಾರಿಸಲಾದ 'SM-3 ಇಂಟರ್ಸೆಪ್ಟರ್' ಮೂಲಕ ಹೊಡೆದುರುಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಡಿಯಾಗೋ ಗಾರ್ಸಿಯಾ ನೆಲೆ ಅಮೆರಿಕಕ್ಕೆ ಅತ್ಯಂತ ಆಯಕಟ್ಟಿನ ಪ್ರದೇಶವಾಗಿದೆ. ಅಫ್ಘಾನಿಸ್ತಾನ ಮತ್ತು ಇರಾಕ್ ಯುದ್ಧಗಳ ಸಮಯದಲ್ಲಿ ಅಮೆರಿಕ ಇಲ್ಲಿಂದಲೇ ಬಾಂಬರ್ ವಿಮಾನಗಳನ್ನು ಕಾರ್ಯಾಚರಣೆಗೆ ಇಳಿಸಿತ್ತು. ಈಗ ಈ ನೆಲೆಗೂ ಇರಾನ್ ಕ್ಷಿಪಣಿಗಳು ತಲುಪುತ್ತಿರುವುದು ಅಮೆರಿಕಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ವಿಶ್ವದಾದ್ಯಂತ ಪ್ರವಾಸಿ ತಾಣಗಳ ಮೇಲೆ ದಾಳಿಯ ಎಚ್ಚರಿಕೆ!

ಇರಾನ್‌ನ ಸೇನಾ ವಕ್ತಾರ ಜನರಲ್ ಅಬೋಲ್ಫಾಜ್ಲ್ ಶೆಕರ್ಚಿ ಒಂದು ಹೆಜ್ಜೆ ಮುಂದೆ ಹೋಗಿ ಭೀಕರ ಎಚ್ಚರಿಕೆಯೊಂದನ್ನು ನೀಡಿದ್ದಾರೆ. "ನಮ್ಮ ಶತ್ರುಗಳಿಗೆ ಜಗತ್ತಿನ ಯಾವುದೇ ಪಾರ್ಕ್‌ಗಳು, ಮನರಂಜನಾ ಪ್ರದೇಶಗಳು ಮತ್ತು ಪ್ರವಾಸಿ ತಾಣಗಳು ಇನ್ನು ಮುಂದೆ ಸುರಕ್ಷಿತವಾಗಿರುವುದಿಲ್ಲ" ಎಂದು ಅವರು ಗುಡುಗಿದ್ದಾರೆ. ಇದು ಕೇವಲ ಮಧ್ಯಪ್ರಾಚ್ಯಕ್ಕೆ ಸೀಮಿತವಾಗಿದ್ದ ಯುದ್ಧವು ಈಗ ಜಾಗತಿಕ ಮಟ್ಟದಲ್ಲಿ ಭಯೋತ್ಪಾದಕ ದಾಳಿಗಳ ರೂಪ ಪಡೆಯಬಹುದೇ ಎಂಬ ಆತಂಕವನ್ನು ಮೂಡಿಸಿದೆ.

ಸರಣಿ ಹತ್ಯೆಗಳು ಮತ್ತು ಇರಾನ್ ತಿರುಗೇಟು

ಈ ವಾರ ಇರಾನ್ ನಾಯಕತ್ವಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಪ್ರಮುಖ ಮಿಲಿಟರಿ ನಾಯಕರುಗಳಾದ ಅಲಿ ಲಾರಿಜಾನಿ, ಬಸಿಜ್ ಕಮಾಂಡರ್ ಘೋಲಮ್ರೆಜಾ ಸೊಲೈಮಾನಿ ಮತ್ತು ಜನರಲ್ ಅಲಿ ಮೊಹಮ್ಮದ್ ನೈನಿ ಹತರಾಗಿದ್ದಾರೆ ಎಂದು ವರದಿಯಾಗಿದೆ. ತನ್ನ ನಾಯಕರ ಸಾವಿನಿಂದ ಕೆರಳಿರುವ ಇರಾನ್, ದಕ್ಷಿಣ ಪಾರ್ಸ್ ಅನಿಲ ಕೇಂದ್ರದ ಮೇಲಿನ ದಾಳಿಗೆ ಪ್ರತೀಕಾರವಾಗಿ ಕತಾರ್‌ನಲ್ಲಿರುವ ವಿಶ್ವದ ಅತಿದೊಡ್ಡ ಎಲ್‌ಎನ್‌ಜಿ (LNG) ಪ್ಲಾಂಟ್ ಅನ್ನು ಗುರಿಯಾಗಿಸಿಕೊಂಡಿದೆ.

ತೈಲ ಮಾರುಕಟ್ಟೆ ಮತ್ತು ಸಾಗರ ಮಾರ್ಗ ಸ್ತಬ್ಧ

ಫೆಬ್ರವರಿ 28 ರಿಂದ ಆರಂಭವಾದ ಈ ಸಂಘರ್ಷದಿಂದಾಗಿ 'ಹೊರ್ಮುಜ್ ಜಲಸಂಧಿ' (Strait of Hormuz) ಮೂಲಕ ನಡೆಯುವ ಹಡಗು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ವಿಶ್ವದ ಐದನೇ ಒಂದು ಭಾಗದಷ್ಟು ತೈಲ ಪೂರೈಕೆ ಈ ಮಾರ್ಗದ ಮೂಲಕವೇ ನಡೆಯುವುದರಿಂದ, ಜಾಗತಿಕವಾಗಿ ಇಂಧನ ದರ ಗಗನಕ್ಕೇರುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದರೂ, ಇರಾನ್ ಮಾತ್ರ ತನ್ನ ಕ್ಷಿಪಣಿ ಉತ್ಪಾದನೆಯನ್ನು ಮುಂದುವರಿಸುವುದಾಗಿ ಘೋಷಿಸಿದೆ,(ಏಜೆನ್ಸೀಸ್).