ಇರಾನ್ 10 ಮಿಲಿಯನ್ ರಿಯಾಲ್ ನೋಟು
- ಇರಾನ್ ಹೊಸ ಕರೆನ್ಸಿ ನೋಟು ಬಿಡುಗಡೆಯ ಉದ್ದೇಶವೇನು?
- ಭಾರತೀಯ ಕರೆನ್ಸಿಯಲ್ಲಿ ಈ ನೋಟಿನ ಮೌಲ್ಯ ಎಷ್ಟು?
- ಈ ಸಮಯದಲ್ಲಿ ಹೊಸ ನೋಟು ಜಾರಿಯ ಉದ್ದೇಶವೇನು?
ಟೆಹ್ರಾನ್: ಪ್ರಸ್ತುತ ಅಮೆರಿಕ-ಇಸ್ರೇಲ್ ಜೊತೆಗೆ ಭೀಕರ ಯುದ್ಧದಲ್ಲಿ ತೊಡಗಿರುವ ಇರಾನ್, ಯಾವುದೇ ಕಾರಣಕ್ಕೂ ಹಾರ್ಮುಜ್ ಜಲಸಂಧಿಯನ್ನು ಬಿಡುವುದಿಲ್ಲ. ವೈರಿಗಳ ಹಡಗುಗಳನ್ನು ಛಿದ್ರಗೊಳಿಸುವುದು ಶತಸಿದ್ಧ ಎಂದು ಎಚ್ಚರಿಕೆ ನೀಡಿದೆ. ಮುಂದಿನ 48 ಗಂಟೆಗಳೊಳಗೆ ಹಾರ್ಮುಜ್ ತೆರೆಯದಿದ್ದರೆ ನಿಮ್ಮ ವಿದ್ಯುತ್ ಸ್ಥಾವರಗಳನ್ನು ಉಡೀಸ್ ಮಾಡುವುದಾಗಿ ಟ್ರಂಪ್ ಬೆದರಿಕೆ ಹಾಕಿರುವುದು ಮತ್ತೊಂದೆಡೆ. ಈ ಮಧ್ಯೆ, ಸಾಮಾಜಿಕ ಜಾಲತಾಣಗಳಲ್ಲಿ ಇರಾನ್ನ 10 ಮಿಲಿಯನ್ ರಿಯಾಲ್ ನೋಟು ಭಾರೀ ಚರ್ಚೆಗೆ ಗ್ರಾಸವಾಗಿದೆ.
ತನ್ನ ಇತಿಹಾಸದಲ್ಲಿಯೇ ಅತ್ಯಧಿಕ ಮೌಲ್ಯದ 10 ಮಿಲಿಯನ್ ರಿಯಾಲ್ ಬ್ಯಾಂಕ್ ನೋಟನ್ನು ಇರಾನ್ ಇತರರಿಗೂ ಪರಿಚಯಿಸಿದೆ. ಇದು ಕೇಳಲು ದೊಡ್ಡ ಮೊತ್ತದಂತೆ ಅನಿಸಿದರೂ, ಅದರ ನಿಜವಾದ ಮೌಲ್ಯ ತಿಳಿದರೆ ಖಂಡಿತ ನೀವು ಆಶ್ಚರ್ಯಚಕಿತರಾಗ್ತೀರಿ. ನಮ್ಮ ಭಾರತೀಯ ಕರೆನ್ಸಿಯಲ್ಲಿ, ಈ ನೋಟಿನ ಬೆಲೆ ಕೇವಲ 650 ರೂ.! ಅದೇ, ಯುಎಸ್ ಡಾಲರ್‌ಗಳಿಗೆ ಹೋಲಿಸಿದರೆ, ಇದರ ಮೌಲ್ಯ ಕೇವಲ 7 ಡಾಲರ್‌ಗಳು ಅಷ್ಟೇ. ಇದರ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ವಿವರ.
ಏನಿದು ಪರಿಸ್ಥಿತಿ?
ಇರಾನ್ ಪ್ರಸ್ತುತ ತೀವ್ರ ಆರ್ಥಿಕ ಬಿಕ್ಕಟ್ಟಿನ ಸುಳಿಯಲ್ಲಿದೆ. ಯುಎಸ್ ಮತ್ತು ಇಸ್ರೇಲ್‌ನೊಂದಿಗಿನ ಉದ್ವಿಗ್ನತೆ ಮತ್ತು ದೀರ್ಘಾವಧಿಯ ನಿರ್ಬಂಧಗಳು ದೇಶದ ಆರ್ಥಿಕ ಬೆನ್ನೆಲುಬನ್ನು ಮುರಿದಿವೆ. ಹಣದುಬ್ಬರ ದುಪ್ಪಟ್ಟಾಗಿದ್ದು, ಸಾಮಾನ್ಯ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಕ್ಯಾಶ್ಗಾಗಿ ಹೆಣಗಾಡುತ್ತಿದ್ದಾರೆ. ಇದಕ್ಕಾಗಿ ಬ್ಯಾಂಕುಗಳಲ್ಲಿ ಕ್ಯೂ ನಿಲ್ಲುತ್ತಿದ್ದಾರೆ. ಈ ಸಂಕಷ್ಟವನ್ನು ನಿವಾರಿಸಲು ಮತ್ತು ಕಡಿಮೆ ನೋಟುಗಳೊಂದಿಗೆ ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಅವಕಾಶ ನೀಡಲು, ಸರ್ಕಾರವು ಈ 10 ಮಿಲಿಯನ್ ನೋಟನ್ನು ಜಾರಿಗೊಳಿಸಿದೆ.
ಬ್ಯಾಂಕ್‌ಗಳಲ್ಲಿ ಸಾಲುಗಟ್ಟಿ ನಿಂತ ಜನರು
ಪ್ರಸ್ತುತ, ಯುದ್ಧದ ವಾತಾವರಣದಲ್ಲಿ, ಮುಂದೆ ಏನಾಗುತ್ತದೆ ಎಂಬ ಭಯದಿಂದ ಇರಾನಿಯನ್ನರು ಡಿಜಿಟಲ್ ಪಾವತಿಗಳಿಗಿಂತ ತಮ್ಮ ಕೈಯಲ್ಲಿ ಹಣವನ್ನು ಇಟ್ಟುಕೊಳ್ಳಲು ಆದ್ಯತೆ ನೀಡಲಾಗಿದೆ. ಬ್ಯಾಂಕಿಂಗ್ ವ್ಯವಸ್ಥೆಯು ಮುರಿದು ಬೀಳಲಿದೆ ಎಂಬ ಆತಂಕದಿಂದ, ಜನರು ತಮ್ಮ ಉಳಿತಾಯವನ್ನು ಹಿಂಪಡೆಯಲು ಎಟಿಎಂಗಳಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದಾರೆ. ಹೆಚ್ಚುತ್ತಿರುವ ನಗದು ಬೇಡಿಕೆಯೂ ಈ ಹೊಸ ನೋಟಿನ ಬಿಡುಗಡೆಗೆ ಒಂದು ಪ್ರಮುಖ ಕಾರಣ ಎಂದೇ ಹೇಳಬಹುದು.
10 ಮಿಲಿಯನ್‌ನಂತೆ ಕಂಡರೂ, ಈ ನೋಟನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ, ಬರುವ ಸರಕುಗಳು ತೀರ ಕಡಿಮೆ. ಇದರಿಂದ ಸಾಮಾನ್ಯ ಜನರ ಖರೀದಿ ಶಕ್ತಿ ಕೂಡ ಕುಸಿದಿದೆ. ಒಂದು ಕಾಲದಲ್ಲಿ ಲಕ್ಷಗಳಲ್ಲಿದ್ದ ಸರಕುಗಳ ಬೆಲೆಗಳು ಈಗ ಕೋಟಿ ರೂ.ಗಳನ್ನು ತಲುಪಿವೆ. ಇದು ಕೇವಲ ಹೊಸ ನೋಟು ಬಿಡುಗಡೆಯಲ್ಲ. ದೇಶದ ಆರ್ಥಿಕತೆಯು ಎಷ್ಟು ಕಠಿಣ ಪರಿಸ್ಥಿತಿಯಲ್ಲಿದೆ ಎಂಬುದಕ್ಕೆ ಜ್ವಲಂತ ಸಾಕ್ಷಿ,(ಏಜೆನ್ಸೀಸ್).