ಮೊಟ್ಟೆ  
ವಿದೇಶ

ಮೊಟ್ಟೆಗೂ ತಟ್ಟಿದ ಯುದ್ಧದ ಕಾವು! ಮಾ.1ರಿಂದ ಪೂರೈಕೆ ಸಂಪೂರ್ಣ ಬಂದ್​; ಸಂಕಷ್ಟದಲ್ಲಿ ರೈತರು

ಪ್ರಮುಖ ಮುಖ್ಯಾಂಶಗಳು

  • ಸುಮಾರು 1 ಕೋಟಿಗೂ ಅಧಿಕ ಮೊಟ್ಟೆಗಳ ಮೇಲೆ ಯುದ್ಧದ ಪರಿಣಾಮ
  • ಯುದ್ಧ ಭೀತಿ ಹಿನ್ನೆಲೆ ಮಾರ್ಚ್ 1ರಿಂದ ರಫ್ತು ಪೂರೈಕೆ ಸಂಪೂರ್ಣ ಸ್ಥಗಿತ
  • ಒಂದು ಮೊಟ್ಟೆಯ ಬೆಲೆ 4.30 ರೂ.ಗೆ ಕುಸಿತ
EGG: ಇಸ್ರೇಲ್​-ಅಮೆರಿಕ ನಡೆಸಿದ ಜಂಟಿ ಕ್ಷಿಪಣಿ ದಾಳಿಯಿಂದ ತತ್ತರಿಸಿರುವ ಇರಾನ್​, ತನ್ನ ಸುಪ್ರೀಂ ನಾಯಕನ ಹತ್ಯೆಗೆ ವೈರಿ ರಾಷ್ಟ್ರಗಳ ಮೇಲೆ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಭಾರೀ ಉದ್ವಿಗ್ನ ಸೃಷ್ಟಿಯಾಗಿದ್ದು, ಭಾರತಕ್ಕೆ ತೈಲ ಮತ್ತು ಅನಿಲದಂತಹ ಆಘಾತಗಳು ಎದುರಾಗಿವೆ. ಕೇವಲ ಇಷ್ಟೇ ಅಲ್ಲ, ದೇಶದ ರೈತರ ಪರಿಸ್ಥಿತಿ ನುಂಗಲಾರದ ತುಪ್ಪವಾಗಿದೆ.
ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಇರಾನ್-ಇಸ್ರೇಲ್ ಯುದ್ಧವು ಈಗ ತಮಿಳುನಾಡಿನ ನಮಕ್ಕಲ್ ಕೋಳಿ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ. ಭಾರತದ ಅತಿದೊಡ್ಡ ಮೊಟ್ಟೆ ಉತ್ಪಾದನಾ ಕೇಂದ್ರ ಎನ್ನಲಾದ ನಮಕ್ಕಲ್‌ನಿಂದ ರಫ್ತು ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ, ಸ್ಥಳೀಯ ರೈತರು ಮತ್ತು ರಫ್ತುದಾರರು ತೀವ್ರ ಬಿಕ್ಕಟ್ಟಿನಲ್ಲಿದ್ದಾರೆ. ಯುದ್ಧದ ಕಾರಣದಿಂದಾಗಿ ಕಡಲ ಮಾರ್ಗಗಳು ಮತ್ತು ವಾಯುಪ್ರದೇಶದ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ. ನಮಕ್ಕಲ್‌ನಿಂದ ಗಲ್ಫ್ ರಾಷ್ಟ್ರಗಳಿಗೆ (ಯುಎಇ, ಓಮನ್, ಕತಾರ್) ಮೊಟ್ಟೆಗಳ ಪೂರೈಕೆ ಮಾರ್ಚ್ 1ರಿಂದಲೇ ಬಂದ್ ಆಗಿದೆ.
ರಫ್ತು ಬಂದ್​ ಆಗಿರುವ ಹಿನ್ನೆಲೆ ದಿನಕ್ಕೆ ಸುಮಾರು 5 ಕೋಟಿ ರೂ. ನಷ್ಟವಾಗುತ್ತಿದೆ ಎಂದು ವರದಿಯಾಗಿದೆ. ಯುದ್ಧದ ಕಾರಣದಿಂದಾಗಿ ಸುಮಾರು 1 ಕೋಟಿ ಮೊಟ್ಟೆಗಳು ಕೋಲ್ಡ್ ಸ್ಟೋರೇಜ್‌ಗಳು ಮತ್ತು ಪ್ಯಾಕಿಂಗ್ ಕೇಂದ್ರಗಳಲ್ಲಿಯೇ ಉಳಿದಿವೆ ಎನ್ನಲಾಗಿದೆ. ಇವುಗಳು ಬೇಗನೆ ಹಾಳಾಗುವ ವಸ್ತುಗಳಾಗಿರುವುದರಿಂದ ವ್ಯಾಪಾರಿಗಳು ತೀವ್ರ ಚಿಂತೆಗೆ ಒಳಗಾಗಿದ್ದಾರೆ. ಇದರಿಂದಾಗಿ, ದೇಶೀಯ ಮೊಟ್ಟೆಗಳ ಬೆಲೆಗಳು ತೀವ್ರವಾಗಿ ಕುಸಿತ ಕಂಡಿವೆ.
ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್‌ಇಸಿಸಿ) ಮೊಟ್ಟೆಯ ಬೆಲೆಯನ್ನು ಈಗ 4.30 ರೂ.ಗೆ ನಿಗದಿಪಡಿಸಿದ್ದರೂ, ನಷ್ಟವನ್ನು ಕಡಿಮೆ ಮಾಡಲು ರೈತರು ಅವುಗಳನ್ನು 3.50 ರೂ.ಗೆ ಮಾರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ರೈತರಿಗೆ ಒಂದು ಮೊಟ್ಟೆ ಉತ್ಪಾದಿಸಲು 4.50 ರೂ. ಖರ್ಚಾಗುತ್ತಿದ್ದರೂ, ಮಾರಾಟದ ಬೆಲೆ ಅದಕ್ಕಿಂತ ಕಡಿಮೆಯಿರುವುದು ಕೋಳಿ ಸಾಕಣೆ ಕೇಂದ್ರಗಳ ಮಾಲೀಕರನ್ನು ಸಾಲದ ಸುಳಿಗೆ ತಳ್ಳುತ್ತಿರುವುದು ದುರಂತ.
ನಾಮಕ್ಕಲ್ ರಫ್ತುದಾರರು ಈ ಬಿಕ್ಕಟ್ಟನ್ನು ನಿವಾರಿಸಲು ಕೇಂದ್ರ ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದ್ದಾರೆ. ಕೃಷಿ ಉತ್ಪನ್ನಗಳ ಸಾಗಣೆಗೆ ಸುರಕ್ಷಿತ ಮಾರ್ಗವನ್ನು ಸ್ಥಾಪಿಸಲು ಅವರು ಯುಎಸ್, ಇಸ್ರೇಲ್ ಮತ್ತು ಇರಾನ್‌ನೊಂದಿಗೆ ರಾಜತಾಂತ್ರಿಕ ಮಾತುಕತೆಗೂ ಮನವಿ ಮಾಡಿದ್ದಾರೆ. ಈ ಸಂಘರ್ಷವು ಕೇವಲ ಮೊಟ್ಟೆಗಳ ಮೇಲೆ ಮಾತ್ರವಲ್ಲದೆ ಇತರ ಕೃಷಿ ಉತ್ಪನ್ನಗಳ ಮೇಲೂ ತೀವ್ರ ಪರಿಣಾಮ ಬೀರಿದೆ. ತಿರುಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಲ್ಫ್ ರಾಷ್ಟ್ರಗಳಿಗೆ ತರಕಾರಿಗಳು, ಹಣ್ಣುಗಳು ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆಯೂ ಸ್ಥಗಿತಗೊಂಡಿದೆ,(ಏಜೆನ್ಸೀಸ್).