ವಾಷಿಂಗ್ಟನ್: ಅಮೆರಿಕ ಮತ್ತು ಇಸ್ರೇಲ್ನ ಯಾವುದೇ ದಾಳಿಗೂ ಹೆದರದೇ, ಒಪ್ಪಂದಕ್ಕೂ ಮಣಿಯದ ಇರಾನ್ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಕೋಪದಿಂದ ತಾಳ್ಮೆ ಕಳೆದುಕೊಂಡು ಅಶ್ಲೀಲ ಪದಗಳಲ್ಲಿ ನಿಂದಿಸಿದ್ದು, ಮುಂದಿನ 48 ಗಂಟೆಗಳಲ್ಲಿ ಹೋರ್ಮುಜ್ ಜಲಸಂಧಿ ತೆರೆಯದಿದ್ದರೆ ನರಕವನ್ನು ನೋಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ತಮ್ಮ ಒಡೆತನದ ಮೈಕ್ರೋಬ್ಲಾಗಿಂಗ್ ವೇದಿಕೆಯಾದ ಟ್ರುತ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಅವರು, ಇರಾನ್ನಲ್ಲಿ ಮಂಗಳವಾರ ವಿದ್ಯುತ್ ಸ್ಥಾವರ ದಿನ ಮತ್ತು ಸೇತುವೆ ದಿನ ಎರಡು ಒಂದೇ ಆಗಿರುತ್ತದೆ. ಅಂತಹದ್ದನ್ನೂ ನೀವು ಎಂದೂ ನೋಡಿರಲ್ಲ. ಹುಚ್ಚು ಕಿಡಿಗೇಡಿಗಳೇ, ಆ ಫಕಿಂಗ್ ಜಲಸಂಧಿಯನ್ನು ತೆರೆಯಿರಿ, ಇಲ್ಲದಿದ್ದರೆ ನೀವು ನರಕದಲ್ಲಿ ವಾಸಿಸುವಿರಿ - ಸುಮ್ಮನೇ ಕಾದು ನೋಡಿ! ಅಲ್ಲಾಹನಿಗೆ ಸ್ತೋತ್ರವಾಗಲಿ ಎಂದು ಬರೆದಿದ್ದಾರೆ.
ನೆರೆಯ ಅರಬ್ ರಾಷ್ಟ್ರಗಳಲ್ಲಿ ಆರ್ಥಿಕ ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಿ ಇರಾನ್ ದಾಳಿ ಮಾಡ್ತಿದ್ದು, ಯಾವುದೇ ಒಪ್ಪಂದಕ್ಕೂ ಬರದೇ ಮತ್ತು ಬೆದರಿಕೆಗೆ ಬಗ್ಗದೇ ಹೋರ್ಮುಜ್ ಜಲಸಂಧಿಯನ್ನು ತೆರೆಯದೇ ನಿಯಂತ್ರಣವನ್ನು ಮುಂದುವರಿಸಿದ ಹಿನ್ನೆಲೆ ಈ ಹೇಳಿಕೆ ಬಂದಿದೆ. ಈ ಹಿಂದೆಯೂ ಟ್ರಂಪ್ ಬೆದರಿಕೆ ಹಾಕಿದ್ದರು.
ಇನ್ನೂ ಇಂದು ಮುಂಜಾನೆ, ಇರಾನ್ ಹೊಡೆದುರುಳಿಸಿದ ಯುಎಸ್ F-15 ಯುದ್ಧ ವಿಮಾನದಿಂದ ಕಾಣೆಯಾಗಿದ್ದ ಅಮೆರಿಕದ ವಾಯು ಸಿಬ್ಬಂದಿಯನ್ನು ಭಾರಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮೂಲಕ ಅವರನ್ನು ರಕ್ಷಿಸಲಾಗಿದೆ. ಗಾಯಗಳಾಗಿದ್ದು, ಅವರು ಆರೋಗ್ಯವಾಗಿದ್ದಾರೆ ಎಂದು ಟ್ರಂಪ್ ಹೇಳಿದ್ದರು (ಏಜೆನ್ಸೀಸ್).