ಇರಾನಿನ ಸವೋರ್ಚ ನಾಯಕ ಅಯತೊಲ್ಲಾ ಖಮೇನಿ , ಇರಾನಿನ ಮಸೀದಿಗಳ ಮೇಲೆ ಹರುತ್ತಿರುವ ಸೇಡಿನ ಕೆಂಪು ಬಾವುಟ
- ಅಮೆರಿಕ-ಇಸ್ರೇಲ್ ದಾಳಿಗೆ ಇರಾನಿನ ಸವೋರ್ಚ ನಾಯಕ ಅಯತೊಲ್ಲಾ ಖಮೇನಿ ನಿಧನ
- ಮಸೀದಿಗಳ ಮೇಲೆ ಸೇಡಿನ ಕೆಂಪು ಬಾವುಟ ಹಾರಿಸಿದ ಇರಾನ್
- ಮೂರನೇ ಮಹಾಯುದ್ಧಕ್ಕೆ ದಾರಿ ಮಾಡಿಕೊಡಲಿದೆಯೇ ಈ ಯುದ್ಧ
ಟೆಹ್ರಾನ್: ಇಡೀ ಮಧ್ಯಪ್ರಾಚ್ಯ ಈಗ ಕುದಿಯುತ್ತಿರುವ ಕೆಂಡದಂತಾಗಿದ್ದು, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಹತರಾದ ಸುದ್ದಿ ದೃಢಪಡುತ್ತಿದ್ದಂತೆಯೇ ಇರಾನ್‌ನಲ್ಲಿ ಸೇಡಿನ ಕಿಚ್ಚು ಹೊತ್ತಿ ಉರಿಯುತ್ತಿದೆ.
ಇರಾನ್‌ನ ಪವಿತ್ರ ನಗರವಾದ ಕೊಮ್ನಲ್ಲಿರುವ ಜಮ್ಕಾರನ್ ಮಸೀದಿಯ ಗುಮ್ಮಟದ ಮೇಲೆ ಸೇಡಿನ ಕೆಂಪು ಬಾವುಟ (Flag of Revenge) ಹಾರಾಡುತ್ತಿದ್ದು, ಇದು ಇಡೀ ಜಗತ್ತಿಗೆ ಒಂದು ಭೀಕರ ಎಚ್ಚರಿಕೆಯ ಸಂಕೇತವಾಗಿದೆ.
ಸೇಡಿನ ಧ್ವಜದ ಸಂಕೇತವೇನು?
ಇರಾನ್ ಸಂಪ್ರದಾಯದ ಪ್ರಕಾರ, ಮಸೀದಿಯ ಮೇಲೆ ಕೆಂಪು ಬಾವುಟ ಹಾರಿಸುವುದು ಎಂದರೆ ಅದು ಕೇವಲ ಶೋಕವಲ್ಲ, ಬದಲಾಗಿ ರಕ್ತಕ್ಕೆ ರಕ್ತದ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ. ಖಮೇನಿ ಅವರ ಸಾವಿಗೆ ಅಮೆರಿಕ ಮತ್ತು ಇಸ್ರೇಲ್ ಬೆಲೆ ತೆರಲೇಬೇಕು ಎಂಬ ಸಂದೇಶವನ್ನು ಇರಾನ್ ಈ ಮೂಲಕ ರವಾನಿಸಿದೆ.
ಟ್ರಂಪ್ ಮತ್ತು ನೆತನ್ಯಾಹು ಸ್ಫೋಟಕ ಹೇಳಿಕೆ
ಖಮೇನಿ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇತಿಹಾಸದ ಅತ್ಯಂತ ಕ್ರೂರ ವ್ಯಕ್ತಿಗಳಲ್ಲಿ ಒಬ್ಬನಾದ ಖಮೇನಿ ಈಗ ಅಂತ್ಯವಾಗಿದ್ದಾನೆ. ಇರಾನ್ ಜನರು ತಮ್ಮ ದೇಶವನ್ನು ಮರಳಿ ಪಡೆಯಲು ಇದು ಸುವರ್ಣಾವಕಾಶ ಎಂದು ಹೇಳಿದ್ದಾರೆ.
ಇತ್ತ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಗುಡುಗಿದ್ದು, ದಬ್ಬಾಳಿಕೆ ನಡೆಸುತ್ತಿದ್ದ ಸರ್ವಾಧಿಕಾರಿ ಈಗ ಬದುಕಿಲ್ಲ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಇರಾನ್ ಜನರು ಈಗ ಒಟ್ಟಾಗಿ ಈ ಆಡಳಿತವನ್ನು ಕಿತ್ತೆಸೆಯುವ ಸಮಯ ಬಂದಿದೆ ಎಂದು ಇರಾನ್ ಜನರಿಗೆ ಕರೆ ನೀಡಿದ್ದಾರೆ.
ನಮ್ಮ ಪ್ರತೀಕಾರ ಭೀಕರವಾಗಲಿದೆ: ಇರಾನ್ ಅಧ್ಯಕ್ಷ
ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವಿಗೆ ಪ್ರತಿಕ್ರಿಯಿಸಿದ, ಇರಾನಿನ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ನಮ್ಮ ನಾಯಕನ ಸಾವಿಗೆ ಕಾರಣರಾದವರನ್ನು ಯಾವುದೇ ಕಾರಣಕ್ಕೆ ಜೀವಂತ ಉಳಿಸುವುದಿಲ್ಲ. ನಮ್ಮ ನಾಯಕ ಸಾವನ್ನು ಮರೆತು ಸುಮ್ಮನೆ ಕೂರಲು ಸಾಧ್ಯವಿಲ್ಲ, ಯುರೋಪಿನ ಶಕ್ತಿಗಳ ವಿರುದ್ಧ ಹೋರಾಡಲು ನಾವು ಸಜ್ಜಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ಅಯತೊಲ್ಲಾ ಅಲಿರೆಜಾ ಅರಾಫಿ: ನೂತನ ಸರ್ವೋಚ್ಚ ನಾಯಕ
ಅಯತೊಲ್ಲಾ ಅಲಿ ಖಮೇನಿ ನಿಧನ ನಂತರ ಇರಾನಿನ ಸರ್ವೋಚ್ಚ ನಾಯಕನಾಗಿ ಅಯತೊಲ್ಲಾ ಅಲಿರೆಜಾ ಅರಾಫಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಮಾಹಿತಿ ಲಬ್ಯವಾಗಿದೆ.
ಇರಾನ್‌ನ ಧಾರ್ಮಿಕ ಮತ್ತು ರಾಜಕೀಯ ವಲಯದಲ್ಲಿ ಅರಾಫಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದು, ಇವರು ಗಾರ್ಡಿಯನ್ ಕೌನ್ಸಿಲ್‌ನ ಹಿರಿಯ ಸದಸ್ಯರಾಗಿದ್ದು, ಈಗ ರಚನೆಯಾಗಿರುವ ತಾತ್ಕಾಲಿಕ ನಾಯಕತ್ವ ಮಂಡಳಿಯ ಪ್ರಮುಖ ನ್ಯಾಯಶಾಸ್ತ್ರಜ್ಞ ಆಗಿ ಆಯ್ಕೆಯಾಗಿದ್ದಾರೆ.
ಸಂವಿಧಾನದ ಪ್ರಕಾರ, ಹೊಸ ನಾಯಕನ ಆಯ್ಕೆಯಾಗುವವರೆಗೆ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಮತ್ತು ಮುಖ್ಯ ನ್ಯಾಯಮೂರ್ತಿ ಮೊಹ್ಸೆನಿ-ಎಜೆಇ ಅವರೊಂದಿಗೆ ಸೇರಿ ಅರಾಫಿ ದೇಶವನ್ನು ಮುನ್ನಡೆಸಲಿದ್ದಾರೆ. ಅರಾಫಿ ಅವರು ಖಮೇನಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕಠಿಣ ನಿಲುವಿನ ಧರ್ಮಗುರು ಎಂದು ಹೆಸರುವಾಸಿಯಾಗಿದ್ದಾರೆ,(ಏಜನ್ಸೀಸ್).