Ali Khamenei Funeral 
ವಿದೇಶ

ಹೆಣ ಬೀಳುವ ಮುನ್ನವೇ 3000 ಸಮಾಧಿಗಳು ರೆಡಿ!...ಇರಾನ್ ಸರ್ಕಾರದ ಈ ಭೀಕರ ಆತಂಕದ ಹಿಂದಿರುವ ರಹಸ್ಯವೇನು ಗೊತ್ತಾ..? | Ali Khamenei Funeral

Ali Khamenei Funeral: ಅಮೆರಿಕಾ ಮತ್ತು ಇಸ್ರೇಲ್ ಜಂಟಿ ವೈಮಾನಿಕ ದಾಳಿಯಲ್ಲಿ ಹತನಾದ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆಯ ಮೆರವಣಿಗೆಗಳು ಇರಾನ್‌ನಲ್ಲಿ ಬಿಗುವಿನ ವಾತಾವರಣ ಸೃಷ್ಟಿಸಿದ್ದು, ಮೇಲ್ನೋಟಕ್ಕೆ ಇರಾನ್ ಸರ್ಕಾರವು ಎಲ್ಲವೂ ಶಾಂತಿಯುತವಾಗಿದೆ ಎಂದು ಬಿಂಬಿಸುತ್ತಿದ್ದರೂ, ಲಕ್ಷಾಂತರ ಜನರು ಸೇರುವ ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಸಾಯಬಹುದು ಎಂಬ ಭೀಕರ ದುರಂತದ ಸಾಧ್ಯತೆಗೆ ಅಲ್ಲಿನ ಅಧಿಕಾರಿಗಳು ಸಜ್ಜಾಗುತ್ತಿದ್ದಾರೆ.
ಜರ್ಮನ್ ಪತ್ರಿಕೆ ಡೈ ವೆಲ್ಟ್ (Die Welt) ವರದಿಯ ಪ್ರಕಾರ, ಕೋಟಿಗಟ್ಟಲೆ ಜನ ಸೇರುವ ಈ ಮೆರವಣಿಗೆಯ ಸಮಯದಲ್ಲಿ 1,500 ರಿಂದ 3,000 ಜನರು ಸಾವನ್ನಪ್ಪಬಹುದು ಎಂದು ಅಂದಾಜಿಸಿ ಇರಾನ್ ಅಧಿಕಾರಿಗಳು ತುರ್ತು ಯೋಜನೆಗಳನ್ನು ಸಿದ್ಧಪಡಿಸಿದ್ದಾರೆ.

ಸಾವಿರಾರು ಹೊಸ ಸಮಾಧಿಗಳು ಸಿದ್ಧ!

ಸಂಭಾವ್ಯ ಸಾವುಗಳು ಮತ್ತು ನಾಪತ್ತೆಯಾದವರ ಪ್ರಕರಣಗಳನ್ನು ನಿಭಾಯಿಸಲು ಅಧಿಕಾರಿಗಳು ಪ್ರತ್ಯೇಕ ವಿಭಾಗವನ್ನೇ ರಚಿಸಿದ್ದಾರೆ. ಟೆಹ್ರಾನ್​​ನ ಪ್ರಸಿದ್ಧ ಬೆಹೆಶ್ತ್-ಎ ಜಹ್ರಾ ಸ್ಮಶಾನದಲ್ಲಿ ಸಾವಿರಾರು ಹೊಸ ಸಮಾಧಿಗಳನ್ನು ಈಗಾಗಲೇ ಅಗೆದು ಸಿದ್ಧಪಡಿಸಲಾಗಿದೆ. ಇಷ್ಟು ದೊಡ್ಡ ಜನಸಮೂಹ ಮತ್ತು ವಿಪರೀತ ಬಿಸಿಲಿರುವುದರಿಂದ ಏನಾಗಬೇಕಾದರೂ ಆಗಬಹುದು. 3,000 ಜನರವರೆಗೆ ಸಾವು ಸಂಭವಿಸಿದರೂ ನಿಭಾಯಿಸಲು ಸಿದ್ಧರಾಗಿರುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಟೆಹ್ರಾನ್ ಮುನ್ಸಿಪಾಲಿಟಿ ನೌಕರರೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.
ಶನಿವಾರ ಟೆಹ್ರಾನ್​​ನಲ್ಲಿ ಪ್ರಾರಂಭವಾದ ಖಮೇನಿ ಅಂತ್ಯಕ್ರಿಯೆಯು ಪವಿತ್ರ ನಗರವಾದ ಕೋಮ್, ಇರಾಕ್‌ನ ನಜಾಫ್ ಮತ್ತು ಕರ್ಬಲಾದ ಮೂಲಕ ಸಾಗಿ, ಗುರುವಾರ ಅವರ ತವರು ಪ್ರದೇಶವಾದ ಮಶ್ಹಾದ್‌ನಲ್ಲಿ ಅಂತ್ಯಗೊಳ್ಳಲಿದ್ದು, ಅಲ್ಲಿ ಅವರ ದಫನ ಕಾರ್ಯ ನಡೆಯಲಿದೆ.

ಹೈ ಅಲರ್ಟ್‌ನಲ್ಲಿ ಟೆಹ್ರಾನ್: ಇತಿಹಾಸದ ಕಹಿ ನೆನಪು

ಅಂತ್ಯಕ್ರಿಯೆಯ ಹಿನ್ನೆಲೆಯಲ್ಲಿ ಟೆಹ್ರಾನ್​​ನಾದ್ಯಂತ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಭೇಟಿ ನೀಡುವವರಿಗಾಗಿ ಶಾಲೆ, ಮಸೀದಿಗಳನ್ನು ವಸತಿಗೃಹಗಳನ್ನಾಗಿ ಮಾಡಲಾಗಿದ್ದು, ಸಾವಿರಾರು ಬಸ್‌ಗಳು ಮತ್ತು ತಾತ್ಕಾಲಿಕ ಅಡುಗೆಮನೆಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಇರಾನ್‌ಗೆ ಇಂತಹ ಅಂತ್ಯಕ್ರಿಯೆಗಳ ಸಂದರ್ಭದಲ್ಲಿ ದುರಂತ ಸಂಭವಿಸಿದ ಕಹಿ ಇತಿಹಾಸವಿದೆ. 2020 ರಲ್ಲಿ ಐಆರ್‌ಜಿಸಿ (IRGC) ಕಮಾಂಡರ್ ಖಾಸೆಮ್ ಸೊಲೈಮಾನಿ ಅಂತ್ಯಕ್ರಿಯೆಯ ಕಾಲ್ತುಳಿತದಲ್ಲಿ 56 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಅದಕ್ಕೂ ಮುನ್ನ 1989 ರಲ್ಲಿ ರುಹೊಲ್ಲಾ ಖೊಮೇನಿ ಅಂತ್ಯಕ್ರಿಯೆಯಲ್ಲೂ ಗೊಂದಲ ಉಂಟಾಗಿ 8 ಜನರು ಮೃತಪಟ್ಟು ನೂರಾರು ಮಂದಿ ಗಾಯಗೊಂಡಿದ್ದರು.
ಕಾಲ್ತುಳಿತದ ಭೀತಿಯ ಜೊತೆಗೆ ಭದ್ರತಾ ಬೆದರಿಕೆಗಳೂ ಇರಾನ್ ಅನ್ನು ಕಾಡುತ್ತಿವೆ. ಖಮೇನಿಯ ಮಗ ಮತ್ತು ಪ್ರಸ್ತುತ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿಯನ್ನು ಕೊಲ್ಲುವುದಾಗಿ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿಕೆ ನೀಡಿದ ಬೆನ್ನಲ್ಲೇ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಶತ್ರುಗಳಿಗೆ ಎಚ್ಚರಿಕೆ ನೀಡಿದೆ. ಭದ್ರತಾ ದೃಷ್ಟಿಯಿಂದ ಟೆಹ್ರಾನ್​​ನ ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.
ಇಸ್ರೇಲ್‌ನ ಮಿಲಿಟರಿ ಗುಪ್ತಚರ ವಿಭಾಗದ ಮಾಜಿ ಮುಖ್ಯಸ್ಥ ಡ್ಯಾನಿ ಸಿಟ್ರಿನೊವಿಚ್ ಸಿಎನ್‌ಎನ್‌ಗೆ ತಿಳಿಸಿರುವಂತೆ, ಇರಾನ್ ವಾಯು ಮತ್ತು ಭೂಮಿ ಎರಡೂ ಮಾರ್ಗಗಳಿಂದ ಬರಬಹುದಾದ ಬೆದರಿಕೆಗಳನ್ನು ಎದುರಿಸಲು ಸರ್ವಸನ್ನದ್ಧವಾಗಿದೆ.

ಒಳಗಿನಿಂದಲೂ ಇದೆ ಬೆದರಿಕೆ

ಇರಾನ್‌ಗೆ ಕೇವಲ ಅಮೆರಿಕ ಅಥವಾ ಇಸ್ರೇಲ್ ಮಾತ್ರವಲ್ಲದೆ, ದೇಶದ ಒಳಗಿರುವ ಕುರ್ದಿಶ್ ಉಗ್ರಗಾಮಿಗಳು, ಅರಬ್ ಮತ್ತು ಬಲೋಚ್ ಪ್ರತ್ಯೇಕತಾವಾದಿಗಳು ಹಾಗೂ ದೇಶಭ್ರಷ್ಟ ಮುಜಾಹಿದೀನ್-ಎ ಖಲ್ಕ್ (MeK) ಸಂಘಟನೆಗಳಿಂದಲೂ ದಾಳಿಯ ಭೀತಿಯಿದೆ. ಈ ಎಲ್ಲಾ ಅಪಾಯಗಳ ನಡುವೆಯೂ ಐಆರ್‌ಜಿಸಿ ಮುಖ್ಯಸ್ಥ ಅಹ್ಮದ್ ವಾಹಿದಿ ಸೇರಿದಂತೆ ಹಲವು ಹಿರಿಯ ನಾಯಕರು ಸಾರ್ವಜನಿಕವಾಗಿ ಭಾಗವಹಿಸುತ್ತಿರುವುದು ಇರಾನ್ ತನ್ನ ಭದ್ರತೆಯ ಮೇಲೆ ಇಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ(ಏಜೆನ್ಸೀಸ್​​).