ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

ಇರಾನ್ ಈಗ ಸಂಧಾನಕ್ಕೆ ಸಿದ್ಧವಾಗಿದೆ: ಪ್ರತಿಭಟನೆಗಳ ಮಧ್ಯೆ ಡೊನಾಲ್ಡ್ ಟ್ರಂಪ್ ಸಂಚಲನಕಾರಿ ಹೇಳಿಕೆ | Donald Trump

ನ್ಯೂಯಾರ್ಕ್: ಇರಾನ್ ಉನ್ನತ ಮಟ್ಟದ ಮಾತುಕತೆಗಳನ್ನು ಪ್ರಸ್ತಾಪಿಸಲು ಮುಂದಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮಂಗಳವಾರ (ಜ.13) ಹೇಳಿದ್ದಾರೆ.

ಇರಾನ್​ಗೆ ಒಪ್ಪಂದ ಬೇಕು

ಈ ಬಗ್ಗೆ ವರದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಟ್ರಂಪ್, ಅಮೆರಿಕದ ಸಂಭಾವ್ಯ ಮಿಲಿಟರಿ ಹಸ್ತಕ್ಷೇಪವನ್ನು ತಪ್ಪಿಸಲು ಇರಾನ್​ ರಾಜತಾಂತ್ರಿಕ ನಿರ್ಗಮನವನ್ನು ಬಯಸುತ್ತಿದೆ. ಅಮೆರಿಕದಿಂದ ಹೊಡೆತ ತಿಂದಿದ್ದರಿಂದ ಅವರು ಬೇಸತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಇದರ ಬಗ್ಗೆ ಟ್ರಂಪ್ ಭಾರೀ ಆರ್ಥಿಕ ನಿರ್ಬಂಧಗಳು ಮತ್ತು ಬಹಳ ಬಲವಾದ ಮಿಲಿಟರಿ ದಾಳಿಗಳ ಬೆದರಿಕೆಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.
ಇರಾನ್ ಕರೆ ಮಾಡಿದೆ, ಅವರು ಮಾತುಕತೆ ನಡೆಸಲು ಬಯಸುತ್ತಾರೆ. ನಾವು ಸಭೆಯನ್ನು ಏರ್ಪಡಿಸುತ್ತಿದ್ದೇವೆ. ಆದರೆ ನೆಲದ ಮೇಲೆ ಏನು ನಡೆಯುತ್ತಿದೆ ಎಂಬ ಕಾರಣದಿಂದಾಗಿ ನಾವು ಅದಕ್ಕೂ ಮೊದಲು ಕಾರ್ಯನಿರ್ವಹಿಸಬೇಕಾಗಬಹುದು ಎಂದು ಅಮೆರಿಕ ಅಧ್ಯಕ್ಷ ತಿಳಿಸಿದ್ದಾರೆ. 
ಖಾಸಗಿ ಮಾರ್ಗಗಳ ಮೂಲಕ ಸಂದೇಶಗಳನ್ನು ಸ್ವೀಕರಿಸಲಾಗಿದ್ದರೂ, ನಾಗರಿಕರ ಮೇಲಿನ ಹಿಂಸಾಚಾರ ಮುಂದುವರಿದರೆ ಮಾರಕ ದಾಳಿ ಮಾಡಲು ಅಧ್ಯಕ್ಷರು ಹೆದರುವುದಿಲ್ಲ ಎಂದು ಶ್ವೇತಭವನ ದೃಢಪಡಿಸಿದೆ.

ಇರಾನ್​ ಪ್ರತಿಕ್ರಿಯೆ

ಈ ಬಗ್ಗೆ ಮಾತನಾಡಿದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಎಂದು ತಳ್ಳಿಹಾಕಿದ್ದಾರೆ. ಇರಾನ್ ರಾಜತಾಂತ್ರಿಕತೆಗೆ ಮುಕ್ತವಾಗಿದೆ ಎಂದು ಒಪ್ಪಿಕೊಂಡರೂ, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ. ಅಲ್ಲದೆ, ರಕ್ತಪಾತಕ್ಕೆ ಅಮೇರಿಕನ್-ಜಿಯೋನಿಸ್ಟ್ ಭಯೋತ್ಪಾದನೆಯನ್ನು ಕಿಡಿಕಾರಿದ್ದಾರೆ.

ಇರಾನ್‌ನಲ್ಲಿ ಪ್ರತಿಭಟನೆ: 2,000ಕ್ಕೂ ಹೆಚ್ಚು ಜನರ ಸಾವು

ಇರಾನ್​ನಲ್ಲಿ ಖಮೇನಿ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಈವರೆಗೂ 2 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ರಾಯಿಟರ್ಸ್​ ಮಂಗಳವಾರ ವರದಿ ಮಾಡಿದೆ. 
ಇರಾನ್‌ನ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಈವರೆಗೆ ಕನಿಷ್ಠ 2,000ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಅಧಿಕಾರಿಯ ಹೇಳಿಕೆ..

ಹೆಸರು ಬಹಿರಂಗಪಡಿಸಲು ಇಚ್ಛಿಸದ ಇರಾನ್‌ನ ಆಡಳಿತಾರೂಢ ಮಂಡಳಿಯ ಸದಸ್ಯರೊಬ್ಬರು, "ನಡೆದ ಘರ್ಷಣೆಗಳಲ್ಲಿ ಮೃತಪಟ್ಟವರ ಸಂಖ್ಯೆ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿದೆ. ಅಧಿಕೃತ ದಾಖಲೆಗಳ ಪ್ರಕಾರ 2,000 ಮಂದಿ ಬಲಿಯಾಗಿದ್ದಾರೆ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಯು ಇರಾನ್ ಸರ್ಕಾರದ ಮೇಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಒತ್ತಡವನ್ನು ಉಂಟುಮಾಡಿದೆ.

ಘಟನೆಯ ಹಿನ್ನೆಲೆ

ಇರಾನ್‌ನಲ್ಲಿ ಆರ್ಥಿಕ ಕುಸಿತ, ಕಠಿಣ ಸಾಮಾಜಿಕ ನಿಯಮಗಳು ಮತ್ತು ಸರ್ಕಾರದ ಆಡಳಿತ ವೈಖರಿಯ ವಿರುದ್ಧ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಆರಂಭದಲ್ಲಿ ಸಣ್ಣದಾಗಿ ಆರಂಭವಾದ ಈ ಚಳುವಳಿ, ಈಗ ದೇಶದ ಪ್ರಮುಖ ನಗರಗಳಿಗೆ ಹಬ್ಬಿದ್ದು, ಇತ್ತೀಚಿನ ದಶಕಗಳಲ್ಲೇ ಅತ್ಯಂತ ದೊಡ್ಡ ಹಿಂಸಾಚಾರಕ್ಕೆ ಕಾರಣವಾಗಿದೆ. ಪ್ರತಿಭಟನೆಯನ್ನು ಹತ್ತಿಕ್ಕಲು ಇರಾನ್ ಸರ್ಕಾರವು ಮಿಲಿಟರಿ ಮತ್ತು ಅರೆಸೇನಾ ಪಡೆಗಳನ್ನು ಬಳಸುತ್ತಿರುವುದು ಸಾವಿನ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.

ಇಂದಿನ ಪರಿಸ್ಥಿತಿ

ಪ್ರಸ್ತುತ ಇರಾನ್‌ನ ಹಲವು ನಗರಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿದ್ದು, ಮಾಹಿತಿ ವಿನಿಮಯಕ್ಕೆ ತಡೆಯೊಡ್ಡಲಾಗಿದೆ. ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿಹೋಗಿದ್ದು, ಔಷಧಿಗಳ ಕೊರತೆ ಎದುರಾಗಿದೆ ಎಂದು ವರದಿಗಳು ತಿಳಿಸಿವೆ. ಪ್ರತಿಭಟನೆ ಹತ್ತಿಕ್ಕಲು ಸರ್ಕಾರವು 'ಕರ್ಫ್ಯೂ' ಜಾರಿಗೊಳಿಸಿದ್ದರೂ, ಜನರ ಆಕ್ರೋಶ ಮಾತ್ರ ತಣ್ಣಗಾಗಿಲ್ಲ,(ಏಜೆನ್ಸೀಸ್​).