ಸೇಡು ತೀರಿಸಿಕೊಳ್ಳಲು ಇರಾನ್ ಸಜ್ಜು
- ಇರಾನ್ ಪತ್ರಿಕೆಯಲ್ಲಿ ಸಂಚಲನ ಮೂಡಿಸುವ ಸುದ್ದಿ
- ಹಿಟ್ಲಿಸ್ನಲ್ಲಿ 13 ಪ್ರಮುಖ ನಾಯಕರ ಹೆಸರು
- ಖಮೇನಿ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಇರಾನ್ ಸ್ಕೆಚ್
Iran Hitlist: ಶಾಂತಿ ಒಪ್ಪಂದ ಮಾತಿಗಷ್ಟೇ, ಇಡೀ ಜಗತ್ತಿನ ಮುಂದೆ ಶೋ ಆಫ್ಗಷ್ಟೇ ಸೀಮಿತ ಎನ್ನುವಂತೆ ಮತ್ತೆ ದಾಳಿಗೆ ಪ್ರತಿದಾಳಿ ನಡೆಸುತ್ತಿರುವ ಇರಾನ್ ಮತ್ತು ಅಮೆರಿಕ, ಮತ್ತೊಮ್ಮೆ ಮಧ್ಯಪ್ರಾಚ್ಯ ಉದ್ವಿಗ್ನತೆಗೆ ಸಾಕ್ಷಿಯಾಗಿದೆ. ಈ ಮಧ್ಯೆ, ಇರಾನ್ 13 ನಾಯಕರನ್ನು ಹೊಡೆದುರುಳಿಸಲು ತನ್ನ ಹಿಟ್ಲಿಸ್ಟ್ನಲ್ಲಿ ಸೇರಿಸಿಕೊಂಡಿರುವ ಪಟ್ಟಿಯೊಂದು ಸದ್ಯ ಜಾಗತಿಕವಾಗಿ ಭಾರಿ ಸಂಚಲನ ಹುಟ್ಟುಹಾಕಿದೆ.
ಇರಾನ್ ಇತ್ತೀಚೆಗೆ ಅಂತಾರಾಷ್ಟ್ರೀಯ ನಾಯಕರನ್ನು ಗುರಿಯಾಗಿಸಿಕೊಂಡು ಹಿಟ್ ಲಿಸ್ಟ್ ಬಿಡುಗಡೆಗೊಳಿಸಿದೆ. ಇದು ಇರಾನಿನ ಹಿಮ್‌ಶಹರಿ ಪತ್ರಿಕೆಯಲ್ಲಿ ಉಲ್ಲೇಖಗೊಂಡಿದೆ. ಈ ಪತ್ರಿಕೆಯನ್ನು ಸರ್ಕಾರಿ ಅಧಿಕಾರಿಗಳೇ ಪ್ರಕಟಿಸಿದ್ದಾರೆ. ಇರಾನ್‌ನ ಸೇಡಿನ ಜ್ವಾಲೆಗೆ ಯಾರೆಲ್ಲ ಬಲಿಗೆ ನೇರ ಗುರಿ ಎಂದು ಕಣ್ಣಾಯಿಸಲು ಪಟ್ಟಿ ನೋಡಿದರೆ, ಅದರಲ್ಲಿ ಅಮೆರಿಕ, ಇಸ್ರೇಲ್ ಮತ್ತು ಯುರೋಪ್ ನಾಯಕರ ಹೆಸರುಗಳಿವೆ.
ಪತ್ರಿಕೆಯಲ್ಲಿ ಪ್ರಕಟಗೊಂಡ 13 ಜನರಲ್ಲಿ ಡೊನಾಲ್ಡ್ ಟ್ರಂಪ್, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಸೇರಿದಂತೆ ಪ್ರಮುಖರೇ ಇದ್ದಾರೆ. ಈ ಹೆಸರುಗಳು ಈಗ ಹೊರಬೀಳುತ್ತಿದ್ದಂತೆ ವಿಶ್ವಾದ್ಯಂತ ಹೊಸ ಸಂಚಲನ ಮೂಡಿಸಿದೆ. ಇತ್ತೀಚೆಗಷ್ಟೇ ಟ್ರಂಪ್‌ರ ಆಪ್ತ ಮತ್ತು ಇರಾನ್‌ನೊಂದಿಗಿನ ಯುದ್ಧದ ಬೆಂಬಲಿಗರಾದ ಲಿಂಡ್ಸೆ ಗ್ರಹಾಂ ಅವರು ಹಠಾತ್ತನೆ ಸಾವಿಗೀಡಾದರು. ಆರಂಭದಲ್ಲಿ ಇದು ಅನಾರೋಗ್ಯದ ಸಾವು ಎನ್ನಲಾಗಿದ್ದರೂ ಇದೊಂದು ಸಂಚು ರೂಪಿತ ಹತ್ಯೆ ಎಂಬುದು ಅಮೆರಿಕಕ್ಕೆ ಬಲವಾದ ಶಂಕೆ.
ಲಿಂಡ್ಸೆ ಗ್ರಹಾಂ ತನ್ನ ಪ್ರಚೋದನಕಾರಿ ಹೇಳಿಕೆಗೆ ಹೆಸರುವಾಸಿಯಾದ ಸಂಪ್ರದಾಯವಾದಿ ಎಂದು ಕರೆಯುವ ಲೇಖನವನ್ನು ಇರಾನ್ ಪತ್ರಿಕೆ ಪ್ರಕಟಿಸಿತು. ಇದಕ್ಕೆ ಸಂಬಂಧಿಸಿದ ಸುದ್ದಿಯೂ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದರ ಭಾಗವಾಗಿ ಲಿಂಡ್ಸೆಯನ್ನು ಕೊಲೆ ಮಾಡಲಾಗಿದೆ ಎಂದು ಅಮೆರಿಕ ಬಲವಾಗಿ ವಾದಿಸಿದೆ. ಈಗ, ಇರಾನ್ ತನ್ನ ಪತ್ರಿಕೆಯಲ್ಲಿ 13 ಜನರ ಪಟ್ಟಿಯನ್ನು ಪ್ರಕಟಿಸಿರುವುದು ಮತ್ತೊಂದು ಆತಂಕಕ್ಕೆ ಕಾರಣವಾಗಿದೆ ಎಂಬುದರಲ್ಲಿ ಕಿಂಚಿತ್ತು ಅನುಮಾನ ಬೇಡ.
ಇರಾನ್ ವಾಗ್ದಾನ
ಫೆ.28ರಂದು ಅಮೆರಿಕ ಮತ್ತು ಇಸ್ರೇಲ್ ದಾಳಿಯಲ್ಲಿ ಹತ್ಯೆಗೀಡಾದ ಸುಪ್ರೀಂ ಲೀಡರ್ ಖಮೇನಿ ಅವರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಪಣತೊಟ್ಟಿರುವ ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ, ತಂದೆಯ ಅಂತ್ಯಕ್ರಿಯೆ ಬಳಿಕ ತಮ್ಮ ಮೊದಲ ಸಂದೇಶದಲ್ಲಿ, ಸೇಡು ನಮ್ಮ ರಾಷ್ಟ್ರದ ಆಕಾಂಕ್ಷೆ ಮತ್ತು ಈಡೇರಿಸುವುದು ಮುಖ್ಯ ಗುರಿ ಎಂದಿದ್ದಾರೆ.
ಪತ್ರಿಕೆಯಲ್ಲಿ ಏನಿದೆ?
ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಸರ್ಕಾರಿ ಪತ್ರಿಕೆಯಾದ ಹಂಶಹರಿಯಲ್ಲಿ, ಶನಿವಾರ ತಡರಾತ್ರಿ ಆನ್‌ಲೈನ್‌ನಲ್ಲಿ ಇನ್ಫೋಗ್ರಾಫಿಕ್ ಅನ್ನು ಪ್ರಕಟಿಸಲಾಗಿದೆ. ಇದರಲ್ಲಿ 13 ವಿದೇಶಿ ನಾಯಕರ ಫೋಟೋಗಳು ಒಳಗೊಂಡಿವೆ. ಪಟ್ಟಿಯಲ್ಲಿ ಹೆಸರುಗಳಿರುವ ಈ ಅಪರಾಧಿಗಳು ತಮ್ಮ ಹಾಸಿಗೆಯಲ್ಲಿ ನೆಮ್ಮದಿಯಾಗಿ ಸಾಯುವ ಅವರ ಆಸೆಯನ್ನು ಸಮಾಧಿಯವರೆಗೂ ಕೊಂಡೊಯ್ಯಲು ಇರಾನ್ ಸಹಾಯ ಮಾಡಲಿದೆ ಎಂದು ಹೇಳಲಾಗಿದೆ.
ಈ ಪಟ್ಟಿಯಲ್ಲಿ ಡೊನಾಲ್ಡ್ ಟ್ರಂಪ್, ಬೆಂಜಮಿನ್ ನೆತನ್ಯಾಹು, ಕೀರ್ ಸ್ಟಾರ್ಮರ್, ಮಾರ್ಕೊ ರೂಬಿಯೊ, ಪೀಟ್ ಹೆಗ್ಸೆತ್, ಎಮ್ಯಾನುಯೆಲ್ ಮ್ಯಾಕ್ರನ್, ಜಾರ್ಜಿಯಾ ಮೆಲೊನಿ, ಫ್ರೆಡ್ರಿಕ್ ಮೆರ್ಜ್, ಮಾಜಿ ಶಾ ಮತ್ತು ಅವರ ಪುತ್ರ ರೆಜಾ ಪಹ್ಲವಿ ಅವರ ಹೆಸರೂ ಸೇರಿವೆ. ದಿಗ್ಗಜರ ಜೊತೆಗೆ ಇತರ ನಾಯಕರೂ ಇದ್ದಾರೆ ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).