ಇರಾನ್ ಫುಟ್ಬಾಲ್ ತಂಡಕ್ಕೆ ಅಮೆರಿಕ ತೊರೆಯುವಂತೆ ಆದೇಶ
- ಫಿಫಾ ವಿಶ್ವಕಪ್ ಪಂದ್ಯ ಮುಗಿದ ಕೂಡಲೇ ಅಮೆರಿಕ ತೊರೆಯುವಂತೆ ಆದೇಶ
- ಅಧಿಕಾರಿಗಳ ನಡೆಗೆ ಇರಾನ್ ಫುಟ್ಬಾಲ್ ಕೋಚ್ ಮತ್ತು ಕ್ಯಾಪ್ಟನ್ ಆಕ್ರೋಶ
ಲಾಸ್ ಏಂಜಲೀಸ್: ಪ್ರಸಕ್ತ ನಡೆಯುತ್ತಿರುವ ಫಿಫಾ ವಿಶ್ವಕಪ್ 2026ರ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಪಂದ್ಯವನ್ನಾಡಿದ ಇರಾನ್ಗೆ ಸದ್ಯ ದೊಡ್ಡ ಸಂಕಷ್ಟ ಎದುರಾಗಿದೆ. ಟೂರ್ನಿಯ ಚೊಚ್ಚಲ ಪಂದ್ಯವನ್ನು ಕಿವೀಸ್ ಎದುರು ಆಡಿದ ಇರಾನ್, 2-2 ಅಂತರದಲ್ಲಿ ಮ್ಯಾಚ್ ಡ್ರಾ ಮಾಡಿಕೊಂಡಿತು. ಇದರ ಬೆನ್ನಲ್ಲೇ ಆಟಗಾರರ ವಿಶ್ರಾಂತಿಗೂ ಸಮಯ ಕೊಡದೆ ಅಮೆರಿಕ ಬಿಡುವಂತೆ ಅಧಿಕಾರಿಗಳು ಆದೇಶ ನೀಡಿರುವುದು ಸದ್ಯ ಕೋಚ್ ಕಿಡಿಗೆ ಕಾರಣವಾಗಿದೆ.
ಅಧಿಕಾರಿಗಳ ಇಂತಹ ನಿರ್ಧಾರಕ್ಕೆ ತೀವ್ರ ಕಿಡಿಕಾರಿರುವ ಇರಾನ್ ತಂಡದ ಮುಖ್ಯ ಕೋಚ್ ಅಮೀರ್ ಖಲೆನೋಯ್, ಪ್ರಸ್ತುತ ವಿಶ್ವಕಪ್‌ಗಾಗಿ ನಮ್ಮ ತಂಡದ ಟ್ರೇನಿಂಗ್ ಕ್ಯಾಪ್ ಮೆಕ್ಸಿಕೋದಲ್ಲಿದೆ. ಪಂದ್ಯ ಮುಗಿದ ತಕ್ಷಣ ಅಲ್ಲಿಗೆ ವಾಪಸ್ ಹೋಗುವಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪಂದ್ಯ ಮುಕ್ತಾಯಗೊಂಡ ಕೂಡಲೇ ಜಾಗ ಖಾಲಿ ಮಾಡುವಂತೆ ಹೇಳುವುದು ಎಷ್ಟು ಸರಿ? ಒಂದು ದಿನವಾದರೂ ವಿಶ್ರಾಂತಿ ಬೇಡವೇ? ಯಾಕಿಂತ ಧೋರಣೆ ಎಂದು ಪ್ರಶ್ನಿಸಿದ್ದಾರೆ.
ರೆಸ್ಟ್ಗೂ ಟೈಮ್ ಕೊಡದೆ, ವಿಮಾನ ಹತ್ತಿಸಿದರೂ...
ನಾವು ಪಂದ್ಯ ಮುಗಿಸಿ ಕ್ಯಾಲಿಫೋರ್ನಿಯಾದಲ್ಲಿ ರಾತ್ರಿ ಕಳೆಯಲು ಪ್ಲ್ಯಾನ್ ಹಾಕಿಕೊಂಡಿದ್ವಿ. ಆದರೆ, ಅಧಿಕಾರಿಗಳು ಪಂದ್ಯ ಮುಗಿಯುತ್ತಿದ್ದಂತೆ ವಿಮಾನ ಹತ್ತಿ, ವಾಪಸ್ ಹೋಗುವಂತೆ ಒತ್ತಾಯ ಮಾಡಿದರು. ಆಟಗಾರರಿಗೆ ಕನಿಷ್ಠ ವಿಶ್ರಾಂತಿ ಪಡೆಯಲು ಸಹ ಸಮಯ ಕೊಟ್ಟಿಲ್ಲ. ಫಿಫಾ ವಿಶ್ವಕಪ್ನಲ್ಲಿ ತುಳಿತಕ್ಕೆ ಒಳಗಾದ ಯಾವುದಾದರೂ ತಂಡವಿದ್ದರೆ, ಅದು ನಮ್ಮದೇ. ಅಷ್ಟಕ್ಕೂ ಈ ಆದೇಶದ ಹಿಂದೆ ಯಾರಿದ್ದಾರೆ ಅನ್ನೋದು ನಮಗೆ ಗೊತ್ತಿಲ್ಲ ಎಂದು ಕೋಚ್ ಅಸಮಾಧಾನ ಹೊರಹಾಕಿದ್ದಾರೆ.
ಫಿಫಾ ಮಧ್ಯಸ್ಥಿಕೆಗೆ ಒತ್ತಾಯ
ಇನ್ನು ತಂಡದ ನಾಯಕ ಮೆಹ್ದಿ ತಾರೆಮಿ ಮಾತನಾಡಿ, "ನಾವು ಈಗಲೇ ಲಾಸ್ ಏಂಜಲೀಸ್ ಬಿಟ್ಟು ಹೋಗುವಂತೆ ಆದೇಶಿಸಲಾಗಿದೆ. ಇದು ಸರಿಯಲ್ಲ. ಇಂತಹ ನಿರ್ಧಾರಗಳು ಆಟಗಾರರ ದೈಹಿಕ ಮತ್ತು ಮಾನಸಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಈ ವಿಷಯದಲ್ಲಿ ಸ್ವತಃ ಫಿಫಾ ಆಯೋಜಕರೇ ಮಧ್ಯಪ್ರವೇಶಿಸಿ, ನಮಗೆ ಸಹಾಯ ಮಾಡಬೇಕು" ಎಂದು ಕೇಳಿಕೊಂಡಿದ್ದಾರೆ,(ಏಜೆನ್ಸೀಸ್).