Iran War  
ವಿದೇಶ

Iran ಮೇಲೆ ಅಮೆರಿಕದ ಅಟ್ಯಾಕ್: ಯುದ್ಧ ನಿಲ್ಲಿಸುವ ಅಧಿಕಾರ ನನ್ನ ಮತ್ತು ನೆತನ್ಯಾಹು ಕೈಯಲ್ಲಿದೆ ಎಂದ ಡೊನಾಲ್ಡ್ ಟ್ರಂಪ್!

ವಾಷಿಂಗ್ಟನ್/ಟೆಹ್ರಾನ್: ಜಗತ್ತು ಮೂರನೇ ಮಹಾಯುದ್ಧದ ಭೀತಿಯಲ್ಲಿದೆ. ಇರಾನ್(Iran) ವಿರುದ್ಧ ಆರಂಭವಾಗಿರುವ 'ಆಪರೇಷನ್ ಎಪಿಕ್ ಫ್ಯೂರಿ' (Operation Epic Fury) ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಯುದ್ಧದ ಅಂತ್ಯದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಇರಾನ್ ಮೇಲಿನ ಯುದ್ಧವನ್ನು ಯಾವಾಗ ನಿಲ್ಲಿಸಬೇಕು ಎಂಬ ನಿರ್ಧಾರವನ್ನು ತಾನು ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜಂಟಿಯಾಗಿ ತೆಗೆದುಕೊಳ್ಳುತ್ತೇವೆ ಎಂದು ಟ್ರಂಪ್ ಘೋಷಿಸಿದ್ದಾರೆ.
'ದಿ ಟೈಮ್ಸ್ ಆಫ್ ಇಸ್ರೇಲ್' ಪತ್ರಿಕೆಯೊಂದಿಗೆ ಮಾತನಾಡಿದ ಟ್ರಂಪ್, "ಯುದ್ಧದ ಅಂತಿಮ ನಿರ್ಧಾರ ನನ್ನದಾಗಿರುತ್ತದೆ. ನಾವು (ಅಮೆರಿಕ ಮತ್ತು ಇಸ್ರೇಲ್) ನಿರಂತರ ಸಂಪರ್ಕದಲ್ಲಿದ್ದೇವೆ. ಸರಿಯಾದ ಸಮಯದಲ್ಲಿ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ನಾನು ನಿರ್ಧಾರ ಮಾಡುತ್ತೇನೆ" ಎಂದಿದ್ದಾರೆ. ಅಷ್ಟೇ ಅಲ್ಲದೆ, ಇರಾನ್ ಸಂಪೂರ್ಣವಾಗಿ ಶರಣಾಗುವವರೆಗೂ ಈ ದಾಳಿ ನಿಲ್ಲುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
"ಒಂದು ವೇಳೆ ಅಮೆರಿಕ ಇರಾನ್ ಮೇಲೆ ದಾಳಿ ಮಾಡದಿದ್ದರೆ, ಇರಾನ್ ಇಸ್ರೇಲ್ ಅನ್ನು ಸಂಪೂರ್ಣವಾಗಿ ನಾಶ ಮಾಡುತ್ತಿತ್ತು. ಇಡೀ ಮಧ್ಯಪ್ರಾಚ್ಯದ ಅಸ್ತಿತ್ವಕ್ಕೆ ಧಕ್ಕೆ ತರುತ್ತಿತ್ತು. ಇಸ್ರೇಲ್ ಅನ್ನು ನಕ್ಷೆಯಿಂದ ಅಳಿಸಲು ಸಂಚು ರೂಪಿಸಿದ್ದ ದೇಶವನ್ನೇ ಈಗ ನಾವು ನಾಶಪಡಿಸಿದ್ದೇವೆ," ಎಂದು ಟ್ರಂಪ್ ಗುಡುಗಿದ್ದಾರೆ.

ಯುದ್ಧದ ಅವಧಿ ಎಷ್ಟು?

ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ವೈಮಾನಿಕ ದಾಳಿ ಆರಂಭಿಸಿದವು. ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಯುದ್ಧವು 4 ರಿಂದ 6 ವಾರಗಳವರೆಗೆ ಮುಂದುವರಿಯಬಹುದು ಎಂದು ಅಮೆರಿಕದ ರಕ್ಷಣಾ ಇಲಾಖೆ ಅಂದಾಜಿಸಿದೆ. ಆದರೆ, ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಈ ಯುದ್ಧವು 8 ವಾರಗಳಿಗೂ ಹೆಚ್ಚು ಕಾಲ ನಡೆಯಬಹುದು ಎಂದು ಎಚ್ಚರಿಸಿದ್ದಾರೆ. ಅಮೆರಿಕವು ಸುದೀರ್ಘ 'ಸವೆತದ ಯುದ್ಧ'ಕ್ಕೆ (War of Attrition) ಸಿದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮತ್ತೊಂದೆಡೆ, ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಆರಂಭದಲ್ಲಿ ಕುಸಿದಿದ್ದ ಇರಾನ್ ಸೇನೆ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಈಗ ಮತ್ತೆ ಸಂಘಟಿತವಾಗಿವೆ. ಅಮೆರಿಕದ ಅಂದಾಜಿನಂತೆ ಇರಾನ್‌ನಲ್ಲಿ ಜನಸಾಮಾನ್ಯರು ಸರ್ಕಾರದ ವಿರುದ್ಧ ಬಂಡಾಯ ಎದ್ದಿಲ್ಲ, ಬದಲಾಗಿ ಅಮೆರಿಕದ ವಿರುದ್ಧ ರೊಚ್ಚಿಗೆದ್ದಿದ್ದಾರೆ.

ಇರಾನ್ ನೆಲಕ್ಕೆ ಅಮೆರಿಕ ಸೈನಿಕರ ಎಂಟ್ರಿ?

ಈ ಯುದ್ಧದಲ್ಲಿ ಕೇವಲ ವೈಮಾನಿಕ ದಾಳಿ ಮಾತ್ರವಲ್ಲದೆ, ಅಮೆರಿಕ ತನ್ನ ಭೂಸೇನೆಯನ್ನು (Boots on the Ground) ಇರಾನ್‌ಗೆ ಕಳುಹಿಸುವ ಸಾಧ್ಯತೆ ದಟ್ಟವಾಗಿದೆ. ಇರಾನ್ ಬಳಿ ಇರುವ ಸಮೃದ್ಧ ಯುರೇನಿಯಂ ದಾಸ್ತಾನುಗಳನ್ನು ವಶಪಡಿಸಿಕೊಳ್ಳಲು ಅಮೆರಿಕದ ವಿಶೇಷ ಪಡೆಗಳು ಇರಾನ್ ನೆಲಕ್ಕೆ ಇಳಿಯುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಪೂರಕವೆಂಬಂತೆ, ಅಮೆರಿಕದ ಎಲೈಟ್ 82ನೇ ಏರ್‌ಬೋರ್ನ್ ಡಿವಿಷನ್‌ನ ತರಬೇತಿಯನ್ನು ರದ್ದುಗೊಳಿಸಿರುವುದು ಈ ಸೈನ್ಯವನ್ನು ಇರಾನ್‌ಗೆ ಕಳುಹಿಸುವ ಸಿದ್ಧತೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಕೂಡ, "ಇರಾನ್‌ನ ಪರಮಾಣು ಸಾಮಗ್ರಿಗಳನ್ನು ಯಾರಾದರೂ ಹೋಗಿ ವಶಪಡಿಸಿಕೊಳ್ಳಲೇಬೇಕು" ಎಂದು ಹೇಳುವ ಮೂಲಕ ಭೂಸೇನೆಯ ಕಾರ್ಯಾಚರಣೆಯ ಮುನ್ಸೂಚನೆ ನೀಡಿದ್ದಾರೆ.

ಜಾಗತಿಕ ತಲ್ಲಣ

ಇರಾನ್ ಈಗಾಗಲೇ ಅಮೆರಿಕದ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸುವ ಮೂಲಕ ಇಡೀ ಮಧ್ಯಪ್ರಾಚ್ಯವನ್ನು ಯುದ್ಧದ ಜ್ವಾಲೆಗೆ ತಳ್ಳಿದೆ. ಇರಾನ್ ಶರಣಾಗಲು ನಿರಾಕರಿಸುತ್ತಿರುವುದರಿಂದ, ಈ ಸಂಘರ್ಷವು ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆ ಮತ್ತು ಆರ್ಥಿಕ ಅಸ್ಥಿರತೆಗೆ ಕಾರಣವಾಗುತ್ತಿದೆ,(ಏಜೆನ್ಸೀಸ್​).