ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಬಿಗಡಾಯಿಸಿದ ಸ್ಥಿತಿ: ಅಮೆರಿಕ ವಿರುದ್ಧ ಪೂರ್ಣ ಪ್ರಮಾಣದ ಯುದ್ಧ ಘೋಷಿಸಿದ ಇರಾನ್! Iran Declares Full scale War 
ವಿದೇಶ

ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಬಿಗಡಾಯಿಸಿದ ಸ್ಥಿತಿ: ಅಮೆರಿಕ ವಿರುದ್ಧ ಪೂರ್ಣ ಪ್ರಮಾಣದ ಯುದ್ಧ ಘೋಷಿಸಿದ ಇರಾನ್! Iran Declares Full scale War

ಪ್ರಮುಖ ಮುಖ್ಯಾಂಶಗಳು

  • ಇರಾನ್ ಅಧ್ಯಕ್ಷರಿಂದ ಅಮೆರಿಕ ವಿರುದ್ಧ ಪೂರ್ಣ ಪ್ರಮಾಣದ ಯುದ್ಧ ಘೋಷಣೆ
  • ಇರಾನ್‌ನ ಪರಮಾಣು ಸ್ಥಾವರ ಇರುವ ನಗರದ ಮೇಲೂ ಅಮೆರಿಕ ಕ್ಷಿಪಣಿ ದಾಳಿ
  • ಇರಾನ್ ದಾಳಿಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಜಾಗತಿಕ ಕಚ್ಚಾ ತೈಲ ಬೆಲೆ ತೀವ್ರ ಏರಿಕೆ
  • ಹಾರ್ಮುಜ್ ಜಲಸಂಧಿ ಬಂದ್ ಮಾಡಿ ನೆರೆಹೊರೆಯ ದೇಶಗಳ ಮೇಲೂ ಇರಾನ್ ಪ್ರತಿದಾಳಿ
ಟೆಹರಾನ್​: ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ. ಅಮೆರಿಕವು ಇರಾನ್‌ನ ಪರಮಾಣು ವಿದ್ಯುತ್ ಸ್ಥಾವರವಿರುವ ನಗರವೂ ಸೇರಿದಂತೆ ಇಡೀ ದೇಶಾದ್ಯಂತ ತನ್ನ ದಾಳಿಯನ್ನು ತೀವ್ರಗೊಳಿಸಿರುವ ಬೆನ್ನಲ್ಲೇ ಇರಾನ್ ಅಧ್ಯಕ್ಷರು ಅಮೆರಿಕದೊಂದಿಗೆ ತಮ್ಮ ದೇಶವು "ಪೂರ್ಣ ಪ್ರಮಾಣದ ಯುದ್ಧ" ( Iran Declares Full Ccale War ) ನಡೆಸುತ್ತಿದೆ ಎಂದು ಸೋಮವಾರ (ಜುಲೈ 20) ಘೋಷಿಸಿದ್ದಾರೆ.
ಇಂಧನ ಸೇರಿದಂತೆ ಪ್ರಮುಖ ತಾಣಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ಬೂದಿಮುಚ್ಚಿದ ಕೆಂಡದಂತಿದ್ದ ಬಾಂಧವ್ಯವು ಈಗ ಬಹಿರಂಗ ಸಶಸ್ತ್ರ ಸಂಘರ್ಷಕ್ಕೆ ತಿರುಗಿದೆ. ಇದು ಮಧ್ಯಪ್ರಾಚ್ಯ ಪ್ರದೇಶದಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದ್ದು, ಜಾಗತಿಕ ಮಟ್ಟದಲ್ಲಿ ದೊಡ್ಡ ಮಿಲಿಟರಿ ಬಿಕ್ಕಟ್ಟಿಗೆ ಇದು ದಾರಿ ಮಾಡಿಕೊಟ್ಟಿದೆ.
ಅಮೆರಿಕದೊಂದಿಗಿನ ಕದನ ವಿರಾಮ ಮುರಿದುಬಿದ್ದ ಬೆನ್ನಲ್ಲೇ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ತಮ್ಮ ದೇಶವು ಈಗ ಅಮೆರಿಕದೊಂದಿಗೆ "ಪೂರ್ಣ ಪ್ರಮಾಣದ ಯುದ್ಧ"ದಲ್ಲಿ ತೊಡಗಿದೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಈ ಸಂಘರ್ಷದ ಪರಿಣಾಮಗಳನ್ನು ಮತ್ತು ಇರಾನ್ ನಡೆಸುತ್ತಿರುವ ಪ್ರತಿರೋಧದ ಪರಿಣಾಮಗಳನ್ನು ದೇಶವು ಸ್ವೀಕರಿಸಲು ಸಿದ್ಧವಾಗಿರಬೇಕು ಎಂದು ಪೆಜೆಶ್ಕಿಯನ್​ ತಿಳಿಸಿದ್ದಾರೆ.
ಅಮೆರಿಕದ ಮಿಲಿಟರಿಯು ಇರಾನ್‌ನ ಉತ್ತರ ಮತ್ತು ಮಧ್ಯ ಭಾಗಗಳ ಮೇಲೆ ದಾಳಿಯನ್ನು ವಿಸ್ತರಿಸಿದೆ. ಇರಾನ್‌ನ ಏಕೈಕ ನಾಗರಿಕ ಪರಮಾಣು ವಿದ್ಯುತ್ ಸ್ಥಾವರವಿರುವ ಬುಶೆಹರ್ ನಗರ ಹಾಗೂ ಸೇನಾ ನೆಲೆಗಳನ್ನು ಹೊಂದಿರುವ ಪೂರ್ವ ಅಜರ್‌ಬೈಜಾನ್ ಪ್ರಾಂತ್ಯದ ಮೇಲೆಯೂ ಅಮೆರಿಕದ ಕ್ಷಿಪಣಿಗಳು ಅಪ್ಪಳಿಸಿದ್ದು, ಸಾವು-ನೋವುಗಳು ಸಂಭವಿಸಿವೆ ಎಂದು ಸ್ಥಳೀಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ವಿಶ್ವದ ಶೇ. 20 ರಷ್ಟು ತೈಲ ಸರಬರಾಜಾಗುವ ಪ್ರಮುಖ ಹೊರ್ಮುಜ್ ಜಲಸಂಧಿಯ ನಿಯಂತ್ರಣಕ್ಕಾಗಿ ಉಭಯ ದೇಶಗಳ ನಡುವೆ ತೀವ್ರ ಹೋರಾಟ ನಡೆಯುತ್ತಿದೆ. ಇರಾನ್ ಈ ಜಲಸಂಧಿಯನ್ನು ದಿಗ್ಬಂಧನಗೊಳಿಸಿದ್ದರೆ, ಅಮೆರಿಕವು ಇರಾನ್‌ನ ಬಂದರುಗಳನ್ನು ನಿರ್ಬಂಧಿಸಿದೆ. ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಕಳೆದ ಒಂದು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿವೆ.

ಹೆಚ್ಚುತ್ತಿರುವ ಸಾವು-ನೋವುಗಳು

ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆ ಎರಡೂ ಕಡೆಗಳಲ್ಲಿ ಜೀವಹಾನಿ ಹೆಚ್ಚಾಗಿದೆ. ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿಗೆ ಜೋರ್ಡಾನ್ ಹಾಗೂ ಇರಾಕ್‌ನಲ್ಲಿ ಅಮೆರಿಕದ ಮೂವರು ಸೈನಿಕರು ಬಲಿಯಾಗಿದ್ದು, ಒಟ್ಟು ಮೃತರಾದ ಅಮೆರಿಕನ್ ಯೋಧರ ಸಂಖ್ಯೆ 17ಕ್ಕೇರಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ನಡೆಸಿದ ದಾಳಿಯಲ್ಲಿ ಇರಾನ್‌ನಲ್ಲಿ 50ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ನೆರೆಹೊರೆಯ ದೇಶಗಳ ಮೇಲಿನ ಇರಾನ್ ಪ್ರತಿದಾಳಿ

ಇರಾನ್‌ನ ರೆವೊಲ್ಯೂಷನರಿ ಗಾರ್ಡ್ಸ್ ಅಮೆರಿಕದ ಪಡೆಗಳನ್ನು ಗುರಿಯಾಗಿಸಿಕೊಂಡು ಸಿರಿಯಾ, ಜೋರ್ಡಾನ್ ಮತ್ತು ಕುವೈತ್‌ಗಳಲ್ಲಿರುವ ಸೇನಾ ನೆಲೆಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿವೆ. ಇದರಿಂದಾಗಿ ಬಹರೇನ್ ಸೇರಿದಂತೆ ನೆರೆಹೊರೆಯ ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧದ ಸೈರನ್ ಮೊಳಗಿದ್ದು, ನಾಗರಿಕರಿಗೆ ಸುರಕ್ಷಿತ ಸ್ಥಳ ತಲುಪಲು ಎಚ್ಚರಿಕೆ ನೀಡಲಾಗಿದೆ.
ಇಷ್ಟೆಲ್ಲಾ ಭೀಕರ ಕಾಳಗ ನಡೆಯುತ್ತಿದ್ದರೂ, ಪಾಕಿಸ್ತಾನದಂತಹ ಮಧ್ಯಸ್ಥಿಕೆ ವಹಿಸುವ ದೇಶಗಳ ಮೂಲಕ ಅಮೆರಿಕ ಮತ್ತು ಇರಾನ್ ನಡುವೆ ರಾಜತಾಂತ್ರಿಕ ಮಾತುಕತೆಯ ಮಾರ್ಗಗಳು ಇನ್ನೂ ತೆರೆದಿವೆ. ಇರಾನ್‌ನ ವಿದೇಶಾಂಗ ಸಚಿವಾಲಯವು ಮಧ್ಯಸ್ಥಿಕೆದಾರರ ಮೂಲಕ ವಿಚಾರಗಳ ವಿನಿಮಯ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದ್ದು, ಇತ್ತ ಅಮೆರಿಕ ಕೂಡ ರಾಜತಾಂತ್ರಿಕ ಪರಿಹಾರಕ್ಕಾಗಿ ಪ್ರಯತ್ನಿಸುವುದಾಗಿ ತಿಳಿಸಿದೆ, (ಏಜೆನ್ಸೀಸ್​).