US Iran Conflict | ಟ್ರಂಪ್ ಗದ್ದುಗೆಯಿಂದ ಇಳಿಯುವವರೆಗೂ ಯುದ್ಧ ನಿಲ್ಲಲ್ಲ!
ಇರಾನ್ ದೇಶವು ಹೊರ್ಮುಜ್ ಜಲಸಂಧಿಯನ್ನು (Strait of Hormuz) ಮತ್ತೆ ಸಂಚಾರಕ್ಕೆ ಮುಕ್ತಗೊಳಿಸಿದರೆ, ಆ ದೇಶದ ವಿರುದ್ಧದ ಎಲ್ಲಾ ರೀತಿಯ ಹಗೆತನ ಅಥವಾ ಸಂಘರ್ಷವನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಿಂತನೆ ನಡೆಸುತ್ತಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ಇರಾನ್‌ನ ಹಿರಿಯ ಸೇನಾಧಿಕಾರಿ ಜನರಲ್ ಮೊಹಮ್ಮದ್ ರೇಜಾ ನಖ್ದಿ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದು, ಟ್ರಂಪ್ ಅಧಿಕಾರಾವಧಿ ಮುಗಿಯುವವರೆಗೂ ಆ ದೇಶದ ವಿರುದ್ಧದ ಈ ಸಂಘರ್ಷವನ್ನು ಇರಾನ್ ಸುಲಭವಾಗಿ ಮುಂದುವರಿಸಿಕೊಂಡು ಹೋಗಬಲ್ಲದು ಎಂದು ಹೇಳಿದ್ದಾರೆ.
ಪಿಬಿಎಸ್ ನ್ಯೂಸ್ ಅವರ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ನಖ್ದಿ, ಅಮೆರಿಕಕ್ಕೆ ಎರಡು ಪ್ರಮುಖ ಉದ್ದೇಶಗಳಿದ್ದವು. ಒಂದು ಇರಾನ್‌ನ ನಾಯಕತ್ವವನ್ನು ಉರುಳಿಸುವುದು ಮತ್ತು ಇನ್ನೊಂದು ಇರಾನ್ ದೇಶವನ್ನು ತುಂಡರಿಸುವುದು. ಆದರೆ ಅಮೆರಿಕ ಈ ಎರಡರಲ್ಲೂ ವಿಫಲವಾಗಿದೆ, ಪ್ರಸ್ತುತ ಗೆಲುವು ಇರಾನ್ ಪರವಾಗಿದೆ. ಈ ಯುದ್ಧವು ಎಷ್ಟು ಸುದೀರ್ಘವಾಗಿ ಮುಂದುವರಿಯುತ್ತದೆಯೋ, ಅಷ್ಟು ಹೆಚ್ಚು ಅನುಭವವನ್ನು ಇರಾನ್ ಪಡೆದುಕೊಳ್ಳಲಿದೆ. ಅಮೆರಿಕದ ಮಿಲಿಟರಿ ಶಕ್ತಿಯು ನಾವು ಕಲ್ಪಿಸಿಕೊಂಡಿದ್ದಕ್ಕಿಂತ ಅತ್ಯಂತ ದುರ್ಬಲವಾಗಿದೆ ಎಂಬುದನ್ನು ಇಡೀ ಜಗತ್ತು ಈಗ ನೋಡಿದೆ ಎಂದಿದ್ದಾರೆ.
ಮುಂದಿನ ಚುನಾವಣೆಯವರಗೂ ಇದು ಹೀಗೆ!...
ಮುಂದುವರಿದು ಮಾತನಾಡಿದ ಅವರು, ನಮ್ಮ ಶತ್ರುಗಳು ನಮ್ಮ ಮೇಲೆ ದಾಳಿ ಮಾಡಲು ಎಂದಿಗೂ ಧೈರ್ಯ ಮಾಡದಂತೆ ನಾವು ಶಕ್ತಿಯುತ ತಡೆಗೋಡೆಯನ್ನು ನಿರ್ಮಿಸಿಕೊಳ್ಳಬೇಕಿದೆ. ಆಗ ಮಾತ್ರ ನಾವು ಸುರಕ್ಷಿತವಾಗಿ ಜೀವಿಸಲು ಸಾಧ್ಯ. ಇದಕ್ಕೆ ಇರುವ ಒಂದು ಮಾರ್ಗವೆಂದರೆ, ಈ ಯುದ್ಧವನ್ನು ಅಮೆರಿಕದ ಮುಂದಿನ ಅಧ್ಯಕ್ಷೀಯ ಅವಧಿಯವರೆಗೆ ಮುಂದುವರಿಸುವುದು ಮತ್ತು ಅವರನ್ನು ಇನ್ನು ಕ್ಷೀಣಿಸುವಂತೆ ಮಾಡುವುದು. ಇದರಿಂದಾಗಿ ಭವಿಷ್ಯದಲ್ಲಿ ಬೇರೆ ಯಾರೇ ಇರಾನ್ ಮೇಲೆ ದಾಳಿ ಮಾಡಲು ಹೊರಟರೂ, ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂಬುದು ಅವರಿಗೆ ಅರಿವಾಗುತ್ತದೆ ಎಂದಿದ್ದಾರೆ.
ನಾವು ಅಮೆರಿಕದಲ್ಲಿ ಗೊಂದಲ ಮತ್ತು ದಿಗ್ಭ್ರಮೆಯನ್ನು ಕಂಡಿದ್ದೇವೆ. ಅದು ಯಾವುದೇ ತಂತ್ರಜ್ಞಾನ ಅಥವಾ ಸರಿಯಾದ ಕಾರ್ಯತಂತ್ರವಿಲ್ಲದ ಯುದ್ಧವಾಯಿತು. ಪ್ರತಿ ಎರಡರಿಂದ ಮೂರು ದಿನಗಳಿಗೊಮ್ಮೆ ಅವರು ಹೊಸ ಉದ್ದೇಶಗಳನ್ನು ಘೋಷಿಸುತ್ತಿದ್ದರು. ಕೆಲ ರಾತ್ರಿಗಳ ಕಾಲ ಅವರು ಖಾರ್ಗ್ ದ್ವೀಪದ ಮೇಲೆ ಆಕ್ರಮಣ ಮಾಡಲು ಬಯಸುವುದಾಗಿ ಹೇಳಿದರು. ಇನ್ನು ಕೆಲ ಬಾರಿ ಹೊರ್ಮುಜ್ ಜಲಸಂಧಿಯನ್ನು ತೆರೆಯಲು ಬಯಸುವುದಾಗಿ ಹೇಳಿದರು ಮತ್ತು ತಮ್ಮ ಯುದ್ಧನೌಕೆಗಳನ್ನು ಸಜ್ಜುಗೊಳಿಸಿದರು. ಅವರು ಪ್ರಯತ್ನಿಸಿದ ಪ್ರತಿಯೊಂದರಲ್ಲೂ ನಾವು ಹೇಗೆ ವಿಜಯಶಾಲಿಯಾದೆವು ಎಂಬುದನ್ನು ನಾವು ಜಗತ್ತಿಗೆ ತೋರಿಸಬಲ್ಲೆವು ಎಂದು ನಖ್ದಿ ಹೇಳಿದ್ದಾರೆ.
ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ನಾಗರಿಕ ಹಡಗುಗಳ ಮೇಲಿನ ದಾಳಿಯ ಕುರಿತು ಕೇಳಲಾದ ಪ್ರಶ್ನೆಗೆ ಅಂತರರಾಷ್ಟ್ರೀಯ ಕಾನೂನನ್ನು ಉಲ್ಲೇಖಿಸಿದ ನಖ್ದಿ, ನಾವು ಯುದ್ಧದ ಸನ್ನಿವೇಶದಲ್ಲಿದ್ದಾಗ, ನಮಗೆ ಬೆದರಿಕೆ ಎಂದು ತೋರುವ ಯಾವುದೇ ಜಲಸಾರಿಗೆ ಮಾರ್ಗವನ್ನು ನಿಯಂತ್ರಿಸುವ ಹಕ್ಕು ನಮಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಇರಾನ್ ವಿರುದ್ಧ ಪರಮಾಣು ಅಸ್ತ್ರ ಬಳಿಸಿದರೆ ಮುಂದೇನು..?
ಇರಾನ್ ಬಳಿ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಬೃಹತ್ ಸಂಗ್ರಹವಿದೆ ಹಾಗೂ ದಿನನಿತ್ಯ ಬಳಕೆಯಾಗುವ ಅಥವಾ ಪ್ರಯೋಗಿಸುವ ಸಂಖ್ಯೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಅವುಗಳನ್ನು ಪ್ರತಿದಿನ ತಯಾರಿಸಲಾಗುತ್ತಿದೆ ಎಂದಿರುವ ನಖ್ದಿ, ಒಂದು ವೇಳೆ ಅಮೆರಿಕವು ಇರಾನ್ ವಿರುದ್ಧ ಪರಮಾಣು ಆಯುಧವನ್ನು ಬಳಸಲು ನಿರ್ಧರಿಸಿದರೆ ಏನು ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಎರಡನೇ ಮಹಾಯುದ್ಧದ ಸಮಯಕ್ಕಿಂತ ಈಗಿನ ಪರಿಸ್ಥಿತಿ ಭಿನ್ನವಾಗಿದ್ದು, ಇಂತಹ ಘಟನೆ ನಡೆಯಲು ಜಗತ್ತು ಎಂದಿಗೂ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ಅಲ್ಲದೆ, ಇರಾನ್‌ಗೆ ಅಮೆರಿಕದ ಜನರ ಮೇಲೆ ಯಾವುದೇ ಶತ್ರುತ್ವವಿಲ್ಲ ಮತ್ತು ಅಮೆರಿಕಕ್ಕೆ ಸಾವು (Death to America) ಎಂಬ ಘೋಷಣೆಯು ಅಲ್ಲಿನ ನಾಯಕತ್ವಕ್ಕೆ ಸಂಬಂಧಿಸಿದ್ದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ಇದನ್ನು ಸ್ಪಷ್ಟವಾಗಿ ಹೇಳುತ್ತೇನೆ. ದೌರ್ಜನ್ಯದ ವಿರುದ್ಧ ಹೋರಾಡುವ ಮೂಲಕ ನಾವು ಗೆದ್ದುಕೊಂಡಿರುವ ಜಗತ್ತಿನ ಜನರ ಹೃದಯವೇ ನಮಗೆ ಪರಮಾಣು ಬಾಂಬ್ ಆಗಿದೆ. ಇಸ್ಲಾಮಿಕ್ ಮೌಲ್ಯಗಳು ಮತ್ತು ಇಸ್ಲಾಮಿಕ್ ಕ್ರಾಂತಿಯ ದೈವಿಕ ಮೌಲ್ಯಗಳು ಜಗತ್ತನ್ನು ಆವರಿಸುತ್ತಿವೆ. ನಮಗೆ ಪ್ರತ್ಯೇಕವಾಗಿ ಪರಮಾಣು ಬಾಂಬ್‌ಗಳ ಅಗತ್ಯವಿಲ್ಲ ಹಾಗೂ ಯಾವುದೇ ನರಮೇಧದ ಅಗತ್ಯವೂ ಇಲ್ಲ ಎಂದು ಮೊಹಮ್ಮದ್ ರೇಜಾ ನಖ್ದಿ ಹೇಳಿದ್ದಾರೆ(ಏಜೆನ್ಸೀಸ್).