Hormuz Strait 
ವಿದೇಶ

ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರಿಕೆ: Hormuz Strait ಬಂದ್ ಮಾಡಿದ ಇರಾನ್!

ತೆಹ್ರಾನ್: ಲೆಬನಾನ್‌ನಲ್ಲಿ ಇಸ್ರೇಲ್ ದಾಳಿಗಳು ಮುಂದುವರಿದಿರುವ ಬೆನ್ನಲ್ಲೇ ಇರಾನ್ ಮಹತ್ವದ ನಿರ್ಧಾರ ಕೈಗೊಂಡಿದೆ. ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹೋರ್ಮುಜ್ ಜಲಸಂಧಿಯನ್ನು(Hormuz Strait) ಬಂದ್ ಮಾಡಿರುವುದಾಗಿ ಶನಿವಾರ ಘೋಷಿಸಿದೆ. ಇದೇ ವೇಳೆ ಅಮೆರಿಕ ಜತೆ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆಯಲಿರುವ ತಾಂತ್ರಿಕ ಮಟ್ಟದ ಮಾತುಕತೆಯಲ್ಲಿ ಹೆಚ್ಚಿನ ಪ್ರಗತಿ ಸಾಧ್ಯತೆ ಕಡಿಮೆ ಎಂದು ತಿಳಿಸಿದೆ.

ಇರಾನ್‌ನ ಜಂಟಿ ಸೇನಾ ಕಮಾಂಡ್ ಈ ಘೋಷಣೆ ಮಾಡಿದ್ದು, ಇಸ್ರೇಲ್ ದಾಳಿಗಳಿಗೆ ಅಮೆರಿಕ ಕೂಡ ಹೊಣೆ ಎಂದು ಆರೋಪಿಸಿದೆ. ಅಮೆರಿಕ ತನ್ನ ಬದ್ಧತೆಗಳನ್ನು ಪಾಲಿಸಿಲ್ಲ ಎಂದು ಹೇಳಿರುವ ಇರಾನ್, ಪರಿಸ್ಥಿತಿ ಬದಲಾಗದಿದ್ದರೆ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಮಾತುಕತೆ

ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇರಾನ್ ಹಾಗೂ ಅಮೆರಿಕದ ತಾಂತ್ರಿಕ ಮಟ್ಟದ ಮಾತುಕತೆ ಭಾನುವಾರ ಸ್ವಿಟ್ಜರ್‌ಲ್ಯಾಂಡ್‌ನ ಬ್ರ್ಗೆನ್‌ಸ್ಟಾಕ್‌ನಲ್ಲಿ ಆರಂಭವಾಗಲಿದೆ. ಕತಾರ್ ಪ್ರತಿನಿಧಿಗಳೂ ಈ ಮಾತುಕತೆಯಲ್ಲಿ ಭಾಗವಹಿಸಲಿದ್ದಾರೆ. ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಹಿರಿಯ ಅಧಿಕಾರಿಗಳಾದ ಜಾರೆಡ್ ಕುಶ್ನರ್ ಮತ್ತು ಸ್ಟೀವ್ ವಿಟ್‌ಕಾಫ್ ಈಗಾಗಲೇ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಇದ್ದು, ಮಾತುಕತೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

"ಮೊದಲು ಬದ್ಧತೆ ಪಾಲಿಸಿ"

ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘಾಯಿ, ಅಮೆರಿಕ ಒಪ್ಪಂದದ ಷರತ್ತುಗಳನ್ನು ಪಾಲಿಸುತ್ತಿದೆ ಎಂಬ ವಿಶ್ವಾಸ ಮೂಡುವವರೆಗೆ ಅಂತಿಮ ಒಪ್ಪಂದದ ಬಗ್ಗೆ ಚರ್ಚೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಒಪ್ಪಂದದ ಪ್ರಮುಖ ಅಂಶಗಳನ್ನು ಜಾರಿಗೆ ತರದಿದ್ದರೆ ಸಂಪೂರ್ಣ ಒಪ್ಪಂದವೇ ಅಪಾಯಕ್ಕೆ ಸಿಲುಕಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಲೆಬನಾನ್‌ನಲ್ಲಿ ಮತ್ತೆ ರಕ್ತಪಾತ

ಇದೇ ವೇಳೆ ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ ಎಂದು ವರದಿಯಾಗಿದೆ. ಲೆಬನಾನ್ ಆರೋಗ್ಯ ಸಚಿವಾಲಯದ ಪ್ರಕಾರ, ಇಸ್ರೇಲ್-ಹಿಜ್ಬುಲ್ಲಾ ಯುದ್ಧದಲ್ಲಿ ಇದುವರೆಗೆ 4,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಕದನ ವಿರಾಮದ ಮೇಲೂ ಗೊಂದಲ

ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಕದನ ವಿರಾಮದ ಬಗ್ಗೆ ಮಾತುಕತೆ ನಡೆದಿದ್ದರೂ, ಎರಡೂ ಕಡೆಯಿಂದ ಪರಸ್ಪರ ಉಲ್ಲಂಘನೆ ಆರೋಪಗಳು ಕೇಳಿಬಂದಿವೆ. ಹಿಜ್ಬುಲ್ಲಾ ಕದನ ವಿರಾಮ ಪಾಲಿಸುವುದಾಗಿ ಹೇಳಿದರೆ, ಇಸ್ರೇಲ್ ತನ್ನ ಪಡೆಗಳ ಮೇಲೆ ದಾಳಿಗಳು ನಡೆದಿವೆ ಎಂದು ಆರೋಪಿಸಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚುವ ಸಾಧ್ಯತೆ ಕಾಣುತ್ತಿದೆ(ಏಜೆನ್ಸೀಸ್​​).