ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​  
ವಿದೇಶ

ಸುಪ್ರೀಂ ಲೀಡರ್​ ಆಗುವಂತೆ ಕೇಳಿಕೊಂಡಿತ್ತು ಇರಾನ್​​! ಆದ್ರೆ, ನಾನು... ಟ್ರಂಪ್​ ಕೊಟ್ಟ ಉತ್ತರ ವೈರಲ್​

ಪ್ರಮುಖ ಮುಖ್ಯಾಂಶಗಳು

  • ಫೆ.28ರಿಂದ ಆರಂಭವಾದ ಅಮೆರಿಕ-ಇರಾನ್ ಯುದ್ಧ
  • ಅಮೆರಿಕ ದಾಳಿಗೆ, ಮಾತಿಗೆ ಬಗ್ಗೆ ಇರಾನ್​
  • ಸುಪ್ರೀಂ ಲೀಡರ್​ ಆಗುವಂತೆ ಆಫರ್​ ಕೊಟ್ಟಿದ್ದರು ಎಂದ ಡೊನಾಲ್ಡ್ ಟ್ರಂಪ್​
ವಾಷಿಂಗ್ಟನ್​: ಫೆ.28ರಂದು ಇಸ್ರೇಲ್​ ಜತೆಗೂಡಿ ಇರಾನ್​ ಮೇಲೆ ಕ್ಷಿಪಣಿ ದಾಳಿ ನಡೆಸಿದ ಅಮೆರಿಕ, 169ಕ್ಕೂ ಹೆಚ್ಚು ಅಮಾಯಕ ಮಕ್ಕಳನ್ನು ಬಲಿಪಡೆದಿದ್ದಲ್ಲದೇ, ಇರಾನಿನ ಸುಪ್ರೀಂ ನಾಯಕ ಅಯೊತಲ್ಲಾ ಖಮೇನಿ ಅವರನ್ನು ಹತ್ಯೆಗೈದಿತು. ಇದಕ್ಕೆ ಪ್ರತೀಕಾರವಾಗಿ ದಾಳಿ ನಡೆಸುತ್ತಿರುವ ಇರಾನ್​, ತಮ್ಮ ಸಂಪೂರ್ಣ ಅಸ್ತ್ರವನ್ನೆಲ್ಲ ಬಳಸಿಕೊಂಡು ಅಮೆರಿಕಕ್ಕೆ ತಕ್ಕ ಪೈಪೋಟಿ ನೀಡುತ್ತಿದೆ. ಇಲ್ಲಿಯವರೆಗೂ ಪರಸ್ಪರ ದಾಳಿ ನಡೆಸುತ್ತಲೇ ಬಂದಿರುವ ಎರಡೂ ರಾಷ್ಟ್ರಗಳು, ಯುದ್ಧ ನಿಲ್ಲಿಸುವ ಮಾತೇ ಇಲ್ಲ ಎಂಬ ಮುನ್ಸೂಚನೆಯನ್ನು ನೀಡಿವೆ.  
ಅಮೆರಿಕ-ಇಸ್ರೇಲ್​ ಮತ್ತು ಇರಾನ್​ ಯುದ್ಧ ಭಾರತ ಸೇರಿದಂತೆ ಇತರೆ ರಾಷ್ಟ್ರಗಳ ಮೇಲೆ ಭಾರೀ ಪರಿಣಾಮ ಬೀರಿವೆ. ಇಷ್ಟಾದರೂ ತಮ್ಮ ದ್ವೇಷದ ಕಿಚ್ಚನ್ನು ಮುಂದುವರಿಸಿರುವ ಯುಎಸ್​ ಅಧ್ಯಕ್ಷ ಡೊನಾಲ್ಡ್ ಟ್ರಂಪ್​, ಯಾವುದೇ ಕಾರಣಕ್ಕೂ ಇರಾನ್​ಗೆ ಬುದ್ಧಿ ಕಲಿಸದೆ ನಾನು ಇಟ್ಟ ಹೆಜ್ಜೆ ವಾಪಾಸ್​ ತೆಗೆಯುವುದಿಲ್ಲ ಎನ್ನುವಂತೆ ಪಣತೊಟ್ಟು ನಿಂತಿರುವುದು ನಿಜಕ್ಕೂ ದುರಂತ. ಈ ಮಧ್ಯೆ, ಇತ್ತೀಚೆಗೆ ಇರಾನ್ ಜೊತೆ ಮಾತುಕತೆ ನಡೆಸುತ್ತಿರುವುದಾಗಿ ಮತ್ತು ಯುದ್ಧವನ್ನು ಕೊನೆಗೊಳಿಸಲು ಮಾತುಕತೆ ನಡೆಸಿದ್ದಾಗಿ ಟ್ರಂಪ್​ ಹೇಳಿದ್ದಾರೆ.
ಇದನ್ನು ತಳ್ಳಿಹಾಕಿರುವ ಇರಾನ್, ನಾವು ಟ್ರಂಪ್​ ಅವರೊಂದಿಗೆ ಯಾವುದೇ ಮಾತುಕತೆಯನ್ನು ಮಾಡಿಲ್ಲ ಎಂದಿದೆ. ಈ ಗೊಂದಲದ ನಡುವೆಯೇ, ಟ್ರಂಪ್​ರಿಂದ ಮತ್ತೊಂದು ಅಚ್ಚರಿ ಹೇಳಿಕೆ ಸದ್ಯ ಹಲವರ ಚರ್ಚೆಗೆ ಕಾರಣವಾಗಿದೆ. ಕೆಲವು ಇರಾನಿಯನ್ನರು ನನಗೆ, ನೀವೇ ಇರಾನ್‌ನ ಸರ್ವೋಚ್ಚ ನಾಯಕ ಸ್ಥಾನವನ್ನು ಅಲಂಕರಿಸಿ ಎಂದು ಕೇಳಿಕೊಂಡರು. ಅದಕ್ಕೆ ನಾನು, ಇಲ್ಲ. ವಿಶ್ವದ ಯಾವುದೇ ನಾಯಕರು ಇರಾನ್‌ನ ಸುಪ್ರೀಂ ಲೀಡರ್​ ಆಗಲು ಬಯಸುವುದಿಲ್ಲ" ಎಂದು ಹೇಳಿದೆ ಎಂದರು. 
ಅಮೆರಿಕವು ಇರಾನ್ ಅನ್ನು ಸಂಪೂರ್ಣವಾಗಿ ಮಣಿಸಿದೆ. ನಾವು ಹಿಂದೆಂದೂ ನೋಡಿರದ ಗೆಲುವನ್ನು ಸಾಧಿಸುತ್ತಿದ್ದೇವೆ. ಇರಾನ್ ಈಗ ಬಹಳ ಬೇಗ ಒಪ್ಪಂದಕ್ಕೆ ಮುಂದಾಗಿದೆ. ಅವರು ತುಂಬಾ ಭಯಪಡುತ್ತಿದ್ದಾರೆ. ಒಪ್ಪಂದಕ್ಕೆ ಬಂದರೆ, ತನ್ನದೇ ಜನರು ದೇಶವನ್ನು ಧ್ವಂಸ ಮಾಡುತ್ತಾರೆ ಎಂಬ ಭಯ. ಈ ಸಮಯದಲ್ಲಿ, ಹೆಜ್ಬೊಲ್ಲಾದಂತಹ ಗುಂಪು​ಗಳನ್ನು ಬೆಂಬಲಿಸುವುದನ್ನು ಇರಾನ್​ ಮೊದಲು ನಿಲ್ಲಿಸಬೇಕು. ಮತ್ತು ಹಾರ್ಮುಜ್ ಜಲಸಂಧಿಯನ್ನು ತಕ್ಷಣಕ್ಕೆ  ತೆರೆಯಬೇಕು ಎಂದು ಒತ್ತಾಯಿಸುವ 15 ಅಂಶಗಳ ಪ್ರಸ್ತಾವನೆಯನ್ನು ಅಮೆರಿಕ ಈಗಾಗಲೇ ಇರಾನ್‌ಗೆ ಕಳುಹಿಸಿದೆ" ಎಂದು ಟ್ರಂಪ್ ಹೇಳಿದರು. 
ಟ್ರಂಪ್ ಅವರ ಹೇಳಿಕೆಗಳು ಸದ್ಯ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇರಾನ್‌ನ ಸರ್ವೋಚ್ಚ ನಾಯಕನ ಅವಕಾಶವನ್ನು ಅಮೆರಿಕ ಅಧ್ಯಕ್ಷನಿಗೆ ನೀಡಿದ್ದರ ಬಗ್ಗೆ ಇರಾನ್ ಇಲ್ಲಿಯವರೆಗೆ ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸಿಲ್ಲ. ಏನು ಹೇಳುತ್ತೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).