US Iran Conflict 
ವಿದೇಶ

US Iran Conflict: 'ಒಬ್ಬ ಶತ್ರುವೂ ಬದುಕಬಾರದು'; ಭೂಸೇನಾ ದಾಳಿಗೆ ಸಜ್ಜಾಗುವಂತೆ ಇರಾನ್ ಸೇನಾ ಮುಖ್ಯಸ್ಥರ ಖಡಕ್ ಆದೇಶ!

ಪ್ರಮುಖ ಮುಖ್ಯಾಂಶಗಳು

  • ಇರಾನ್-ಅಮೆರಿಕ ಯುದ್ಧ ಭೀತಿ: ಶತ್ರುಗಳ ಸಂಹಾರಕ್ಕೆ ಸೇನೆಗೆ ಆದೇಶ ನೀಡಿದ ಹತಾಮಿ!
  • ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ ಇರಾನ್ ಅಲರ್ಟ್: 'ಬದುಕಿ ಮರಳಬಾರದು ಶತ್ರು ಪಡೆಗಳು'!
  • ಸೇನಾ ಕಮಾಂಡರ್‌ಗಳಿಗೆ ಇರಾನ್ ಬುಲಾವ್: ಭೂಸೇನಾ ದಾಳಿಗೆ ಕ್ಷಣಗಣನೆ?
ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ(US Iran Conflict) ಸಂಘರ್ಷ ತಾರಕಕ್ಕೇರುತ್ತಿರುವ ಬೆನ್ನಲ್ಲೇ, ಇರಾನ್ ಸೇನಾ ಮುಖ್ಯಸ್ಥ ಅಮೀರ್ ಹತಾಮಿ ತಮ್ಮ ಕಮಾಂಡರ್‌ಗಳಿಗೆ ಯುದ್ಧಕ್ಕೆ ಸನ್ನದ್ಧರಾಗಿರುವಂತೆ ಗಂಭೀರ ಸೂಚನೆ ನೀಡಿದ್ದಾರೆ. "ಶತ್ರುಗಳ ಯಾವುದೇ ಚಲನವಲನವನ್ನು ಅತ್ಯಂತ ಜಾಗರೂಕತೆಯಿಂದ ಗಮನಿಸಿ, ಯಾವುದೇ ಕ್ಷಣದಲ್ಲಿ ಭೂಸೇನಾ ದಾಳಿ ಎದುರಾದರೂ ಎದುರಿಸಲು ಸಿದ್ಧರಾಗಿ" ಎಂದು ಅವರು ಆದೇಶಿಸಿದ್ದಾರೆ ಎಂದು ಗುರುವಾರ ವರದಿಯಾಗಿದೆ. 
ಇರಾನ್‌ನ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ವರದಿ ಮಾಡಿರುವಂತೆ, ಸೇನಾ ಮುಖ್ಯಸ್ಥ ಅಮೀರ್ ಹತಾಮಿ ಅವರು ಕಾರ್ಯಾಚರಣಾ ಘಟಕಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. "ಶತ್ರುಗಳ ಚಲನವಲನವನ್ನು ಕೇವಲ ನಿಖರತೆಯಿಂದ ಮಾತ್ರವಲ್ಲ, 'ತೀವ್ರ ಅಪನಂಬಿಕೆ'ಯಿಂದ (Utmost Pessimism) ಗಮನಿಸಿ. ಅವರು ಶಾಂತಿಯ ಮಾತನಾಡಿದರೂ ಅದರ ಹಿಂದೆ ಸಂಚಿರಬಹುದು. ಹಾಗಾಗಿ, ಯಾವುದೇ ರೀತಿಯ ಸನ್ನಿವೇಶ ಎದುರಾದರೂ ತಕ್ಕ ಪ್ರತ್ಯುತ್ತರ ನೀಡಲು ನಮ್ಮ ಪಡೆಗಳು ಸಜ್ಜಾಗಿರಬೇಕು" ಎಂದು ಅವರು ಗುಡುಗಿದ್ದಾರೆ.

ಅಮೆರಿಕದ ಎಚ್ಚರಿಕೆ ಬೆನ್ನಲ್ಲೇ ಇರಾನ್ ಸನ್ನದ್ಧ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ಇರಾನ್ ವಿರುದ್ಧ ಕಠಿಣ ಮಿಲಿಟರಿ ಕ್ರಮ ಕೈಗೊಳ್ಳುವ ಸೂಚನೆ ನೀಡಿದ್ದರು. ಮುಂಬರುವ ವಾರಗಳಲ್ಲಿ ಇರಾನ್ ಮೇಲೆ ಅಮೆರಿಕದ ದಾಳಿ ತೀವ್ರಗೊಳ್ಳಬಹುದು ಎಂಬ ವರದಿಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಅಮೆರಿಕದ ಬೆದರಿಕೆಗೆ ಜಗ್ಗದ ಇರಾನ್, ತನ್ನ ಶಸ್ತ್ರಾಸ್ತ್ರಗಳನ್ನು ಮತ್ತು ಭೂಸೇನಾ ಪಡೆಗಳನ್ನು ಗಡಿ ಭಾಗಗಳಲ್ಲಿ ಜಾಗೃತಗೊಳಿಸಿದೆ.

'ಯಾವ ಶತ್ರುವೂ ಬದುಕುಳಿಯಬಾರದು'

ಸೇನಾ ಕಮಾಂಡರ್‌ಗಳ ಸಭೆಯಲ್ಲಿ ಮಾತನಾಡಿದ ಹತಾಮಿ, ಇರಾನ್‌ನ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಯತ್ನಿಸುವ ಯಾವುದೇ ಶಕ್ತಿಯನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದ್ದಾರೆ. ಒಂದು ವೇಳೆ ಯುದ್ಧ ಸಂಭವಿಸಿದರೆ ಶತ್ರು ಪಡೆಗಳಿಗೆ ಚೇತರಿಸಿಕೊಳ್ಳಲು ಅವಕಾಶ ನೀಡಬಾರದು ಮತ್ತು ಇರಾನ್ ಭೂಪ್ರದೇಶಕ್ಕೆ ಕಾಲಿಡುವ ಶತ್ರು ಸೈನಿಕರು ಬದುಕಿ ಮರಳಬಾರದು ಎಂಬ ಧಾಟಿಯಲ್ಲಿ ಅವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಜಾಗತಿಕ ಮಟ್ಟದಲ್ಲಿ ಆತಂಕ

ಇರಾನ್ ಮತ್ತು ಅಮೆರಿಕ ನಡುವಿನ ಈ ವಾಕ್ಸಮರ ಮತ್ತು ಮಿಲಿಟರಿ ಸಿದ್ಧತೆಗಳು ಜಾಗತಿಕ ಮಾರುಕಟ್ಟೆ ಮತ್ತು ಕಚ್ಚಾ ತೈಲ ಬೆಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈಗಾಗಲೇ ಗಲ್ಫ್ ಪ್ರದೇಶದಲ್ಲಿ ಹಡಗುಗಳ ಸಂಚಾರ ಮತ್ತು ತೈಲ ಪೂರೈಕೆಯ ಮೇಲೆ ನಿಗಾ ಇರಿಸಲಾಗುತ್ತಿದೆ. ಇರಾನ್‌ನ ಈ ಆಕ್ರಮಣಕಾರಿ ನಡೆಯು ಮಧ್ಯಪ್ರಾಚ್ಯದಲ್ಲಿ ಮತ್ತೊಂದು ದೊಡ್ಡ ಮಟ್ಟದ ಯುದ್ಧಕ್ಕೆ ನಾಂದಿ ಹಾಡುತ್ತದೆಯೇ ಎಂಬ ಆತಂಕ ಸೃಷ್ಟಿಯಾಗಿದೆ,(ಏಜೆನ್ಸೀಸ್).