ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ  
ವಿದೇಶ

ಜಾಗತಿಕ ವ್ಯಾಪಾರಕ್ಕೆ ಬಿಗ್ ರಿಲೀಫ್:ವಾಣಿಜ್ಯ ಹಡಗುಗಳ ಸಾಗಾಣೆಗೆ ಹೊರ್ಮುಜ್ ಜಲಸಂಧಿ ಓಪನ್​:ಇರಾನ್ ಘೋಷಣೆ | Strait of Hormuz open

ಟೆಹ್ರಾನ್: ಕದನ ವಿರಾಮದ ಉಳಿದ ಅವಧಿಗೆ ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯಲಾಗುತ್ತದೆ ಮತ್ತು ಎಲ್ಲಾ ವಾಣಿಜ್ಯ ಹಡಗುಗಳಿಗೆ ಮಾರ್ಗವು ಮುಕ್ತವಾಗಿರುತ್ತದೆ ಎಂದು ಶುಕ್ರವಾರ(ಏ. 17) ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಘೋಷಣೆ ಮಾಡಿದ್ದಾರೆ.
ಗುರುವಾರ ಲೆಬನಾನ್ ಮತ್ತು ಇಸ್ರೇಲ್ ನಡುವೆ 10 ದಿನಗಳ ಕದನ ವಿರಾಮ ಒಪ್ಪಂದವನ್ನು ಘೋಷಿಸಿದ್ದ ಡೊನಾಲ್ಡ್​ ಟ್ರಂಪ್, ಉಭಯ ದೇಶಗಳ ನಾಯಕರ ನಡುವೆ ಮೊದಲ ಸಭೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದರು. ಅದಕ್ಕೆ ಇಸ್ರೇಲ್ ಮತ್ತು ಲೆಬನಾನ್ ಒಪ್ಪಿಕೊಂಡಿರುವ ಹಿನ್ನಲೆ ಹೋರ್ಮುಜ್ ಜಲಸಂಧಿಯನ್ನು ಇರಾನ್ ತೆರದಿದೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಲೆಬನಾನ್‌ನಲ್ಲಿ ಕದನ ವಿರಾಮಕ್ಕೆ ಅನುಗುಣವಾಗಿ, ಇರಾನ್‌ನ ಇಸ್ಲಾಮಿಕ್ ಪ್ರತಿನಿಧಿಯ ಬಂದರುಗಳು ಮತ್ತು ಕಡಲ ಸಂಸ್ಥೆ ಈಗಾಗಲೇ ಘೋಷಿಸಿದಂತೆ ಉಳಿದ ಕದನ ವಿರಾಮದ ಅವಧಿಗೆ, ಹಾರ್ಮುಜ್ ಜಲಸಂಧಿಯ ಮೂಲಕ ಎಲ್ಲಾ ವಾಣಿಜ್ಯ ಹಡಗುಗಳ ಮಾರ್ಗವನ್ನು ಸಂಪೂರ್ಣವಾಗಿ ಮುಕ್ತವಾಗಿರಿಸಲಾಗಿದೆ ಎಂದು ಹೇಳಿದ್ದಾರೆ.
ಹಾಗೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ, ತಮ್ಮ ಟ್ರೂತ್ ಪೋಸ್ಟ್​ನಲ್ಲಿ,  ಇರಾನ್ ಹೊರ್ಮುಜ್ ಜಲಸಂಧಿ ಸಂಪೂರ್ಣವಾಗಿ ಮುಕ್ತವಾಗಿದೆ ಮತ್ತು ಪೂರ್ಣ ಮಾರ್ಗಕ್ಕೆ ಸಿದ್ಧವಾಗಿದೆ ಎಂದು ಇರಾನ್ ಇದೀಗ ಘೋಷಿಸಿದೆ. ಧನ್ಯವಾದಗಳು ಎಂದು ಪೋಸ್ಟ್ ಮಾಡಿದ್ದಾರೆ.
ಮತ್ತೊಂದು ಪೋಸ್ಟ್​ನಲ್ಲಿ, ಹೊರ್ಮುಜ್ ಜಲಸಂಧಿಯು ತೆರೆದಿದ್ದರೂ, ಇರಾನ್‌ನೊಂದಿಗಿನ ವಹಿವಾಟು ಪೂರ್ಣಗೊಳ್ಳುವವರೆಗೆ ಅಮೆರಿಕದ ನೌಕಾ ದಿಗ್ಬಂಧನವು ಪೂರ್ಣ ಪ್ರಮಾಣದಲ್ಲಿ ಮುಂದುವರಿಯುತ್ತದೆ. ಇರಾನ್ ಹಾರ್ಮುಜ್ ಜಲಸಂಧಿಯನ್ನು ಮತ್ತೆಂದೂ ಮುಚ್ಚುವುದಿಲ್ಲ ಮತ್ತು ಅದನ್ನು ಎಂದಿಗೂ ಪ್ರಪಂಚದ ವಿರುದ್ಧ ಆಯುಧವಾಗಿ ಬಳಸುವುದಿಲ್ಲ ಎಂದು ಹೇಳಿದ್ದಾರೆ.

ಹಾರ್ಮುಜ್ ಜಲಸಂಧಿ ತೆರೆಯುವಿಕೆ ಸ್ವಾಗತಿಸಿದ ಯುಕೆ, ಫ್ರಾನ್ಸ್

ಹೊರ್ಮುಜ್ ಜಲಸಂಧಿಯನ್ನು ಮುಕ್ತವಾಗಿರಿಸಲಾಗಿದೆ ಎಂದು ಇರಾನ್ ಘೋಷಣೆ ಮಾಡಿರುವುದನ್ನು ಫ್ರಾನ್ಸ್ ಮತ್ತು ಯುಕೆ ನಾಯಕರು ಸ್ವಾಗತಿಸಿದ್ದು,  ಅದು ಶಾಶ್ವತವಾಗಿರಬೇಕೆಂದು ಹೇಳಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಸಮುದ್ರ ಭದ್ರತೆಯನ್ನು ಪುನಃಸ್ಥಾಪಿಸಲು ಅಂತರರಾಷ್ಟ್ರೀಯ ಕಾರ್ಯಾಚರಣೆಯನ್ನು ಯೋಜಿಸುವುದನ್ನು ಮುಂದುವರಿಸುವುದಾಗಿ ಹೇಳಿದ್ದು, ಮುಂದಿನ ವಾರ ಲಂಡನ್‌ನಲ್ಲಿ ಮಿಲಿಟರಿ ಯೋಜಕರ ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).