ಡೊನಾಲ್ಡ್ ಟ್ರಂಪ್ 
ವಿದೇಶ

ಇರಾನ್ ನಮಗೆ ಯುರೇನಿಯಂ ದಾಸ್ತಾನು ಹಸ್ತಾಂತರಿಸಲು ಒಪ್ಪಿಕೊಂಡಿದೆ; ಶೀಘ್ರದಲ್ಲೇ ಶಾಂತಿ ಒಪ್ಪಂದ: ಡೊನಾಲ್ಡ್ ಟ್ರಂಪ್ | Donald Trump

ವಾಷಿಂಗ್ಟನ್​: ಇರಾನ್ ಮತ್ತು ಅಮೆರಿಕ ಶಾಂತಿ ಒಪ್ಪಂದಕ್ಕೆ ಬರಲು ಬಹಳ ಹತ್ತಿರದಲ್ಲಿದ್ದು, ಇರಾನ್ ತಾನು ದಾಸ್ತಾನು ಮಾಡಿದ ಯುರೇನಿಯಂ ಅನ್ನು ನಮಗೆ ಹಸ್ತಾಂತರಿಸಲು ಒಪ್ಪಿಕೊಂಡಿದೆ ಎಂದು ಗುರುವಾರ(ಏ. 16) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಹೇಳಿದ್ದಾರೆ. 
ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಟೆಹ್ರಾನ್ ಜೊತೆಗಿನ ಮಾತುಕತೆಗಳು ಉತ್ತಮವಾಗಿ ಪ್ರಗತಿಯಲ್ಲಿವೆ. ಮತ್ತು ಮಾತುಕತೆಗಳು ಅತ್ಯಂತ ಯಶಸ್ವಿಯಾಗಿವೆ. ಅವರು ತಾವು ಸಿದ್ದಪಡಿಸಲು ಉದ್ದೇಶಿಸಿರುವ ಪರಮಾಣು ಶೇಖರಣೆಯನ್ನು ನೀಡಲು ಒಪ್ಪಿಕೊಂಡಿದ್ದಾರೆ. ಒಪ್ಪಂದ ಮಾಡಿಕೊಳ್ಳಲು ಉತ್ತಮ ಅವಕಾಶವಿದೆ ಎಂದು ತಿಳಿಸಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವಿನ ಮುಂದಿನ ಸುತ್ತಿನ ಮಾತುಕತೆ ಈ ವಾರಾಂತ್ಯದಲ್ಲಿ ನಡೆಯಲಿದೆ. ಇರಾನ್ ಮಾತುಕತೆಗಳಲ್ಲಿ ಹೆಚ್ಚು ಹೊಂದಿಕೊಳ್ಳುವಂತಿದೆ. ನಂಬಲು ಕಷ್ಟವಾದರೂ, ನಾವು ಈಗ ಇರಾನ್ ಜೊತೆ ಉತ್ತಮ ಸಂಬಂಧವನ್ನು ಹೊಂದಿದ್ದೇವೆ. ಇದು ಸುಮಾರು ನಾಲ್ಕು ವಾರಗಳ ಬಾಂಬ್ ದಾಳಿ ಮತ್ತು ಅತ್ಯಂತ ಶಕ್ತಿಶಾಲಿ ದಿಗ್ಬಂಧನದ ಸಂಯೋಜನೆಯಾಗಿದೆ ಎಂದಿದ್ದಾರೆ.
ಎರಡು ದೇಶಗಳು ಒಪ್ಪಂದ ಯಶಸ್ವಿಯಾದ್ರೆ, ಅದು ನಮಗೆ ಉಚಿತ ತೈಲ, ಉಚಿತ ಹೊರ್ಮುಜ್ ಜಲಸಂಧಿಯನ್ನು ನೀಡುತ್ತದೆ. ಮತ್ತು ತೈಲ ಬೆಲೆ ಮೊದಲಿಗಿಂತ ಕಡಿಮೆಯಾಗಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಟ್ರಂಪ್ ಒಪ್ಪಂದ ಹೇಳಿಗೆ ಇರಾನ್ ಅಪಹಾಸ್ಯ

ಅಮೆರಿಕವು ಇರಾನ್ ಜೊತೆ ಒಪ್ಪಂದ ಮಾಡಿಕೊಳ್ಳಲು ಹತ್ತಿರದಲ್ಲಿದೆ, ಅದು ಅಮೆರಿಕಕ್ಕೆ ಉಚಿತ ತೈಲ ಮತ್ತು ಮುಕ್ತ ಹಾರ್ಮುಜ್ ಜಲಸಂಧಿಯನ್ನು ನೀಡುತ್ತದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಇರಾನ್‌ನ ಅಪಹಾಸ್ಯ ಮಾಡಿದೆ.
ಟ್ರಂಪ್ ಹೇಳಿಕೆಯನ್ನು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಇರಾನ್‌ನ ಸರ್ಕಾರಿ ಸ್ವಾಮ್ಯದ ಪ್ರಸಾರಕ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್‌ಕಾಸ್ಟಿಂಗ್ (ಐಆರ್‌ಐಬಿ), ಅಮೆರಿಕ ನಾಯಕ ಗಾಳಿಯಲ್ಲಿ ಕೋಟೆಗಳನ್ನು ನಿರ್ಮಿಸುತ್ತಿದ್ದಾರೆ. ಒಂಟೆ ಹತ್ತಿ ಬೀಜದ ಕನಸು ಕಾಣುತ್ತೆ, ಕೆಲವೊಮ್ಮೆ ಅದನ್ನು ನುಂಗುತ್ತೆ, ಕೆಲವೊಮ್ಮೆ ಒಂದೊಂದೇ ಧಾನ್ಯ ತಿನ್ನುತ್ತೆ ಎಂದು ವ್ಯಂಗ್ಯವಾಡಿದೆ (ಏಜೆನ್ಸೀಸ್).