ಏನಿದು H-1B ವೀಸಾ ಗೊಂದಲ? 
ವಿದೇಶ

ಏನಿದು H-1B ವೀಸಾ ಗೊಂದಲ? ಶುಲ್ಕ ಹೆಚ್ಚಳ ಭಾರತೀಯರ ಕನಸಿಗೆ ಕೊಡಲಿಪೆಟ್ಟು ಹೇಗೆ? ಇಲ್ಲಿದೆ ಪೂರ್ಣ ವಿವರ

ಪ್ರಮುಖ ಮುಖ್ಯಾಂಶಗಳು

  • ಅಮೆರಿಕ ಕನಸು ಕಾಣುತ್ತಿದ್ದ ಭಾರತೀಯ ಟೆಕ್ಕಿಗಳಿಗೆ ಟ್ರಂಪ್ ಮತ್ತೇ ಶಾಕ್
  • H-1B ವೀಸಾ ಶುಲ್ಕ 86 ಲಕ್ಷ ರೂ.ಗೆ ಏರಿಸಿರುವ ಅಮೆರಿಕ ಸರ್ಕಾರ
  • ಟ್ರಂಪ್ ಸರ್ಕಾರದ ಹೊಸ ರೂಲ್ಸ್​ನಿಂದ ಭಾರತೀಯ ಟೆಕ್ಕಿಗಳಿಗೆ ಹೇಗೆ ಪರಿಣಾಮ?
  • ಹೊಸಬರಿಗೆ 86 ಲಕ್ಷ ರೂ. ಬರೆ ಜತೆ 60 ದಿನಗಳ ಗ್ರೇಸ್ ಪೀರಿಯಡ್‌ಗೂ ಕತ್ತರಿ
ವಾಷಿಂಗ್ಟನ್​: ಅಮೆರಿಕದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಕನಸು ಕಾಣುತ್ತಿರುವ ಅದೆಷ್ಟೋ ಭಾರತೀಯ ಟೆಕ್ಕಿಗಳು ಮತ್ತು ನವೋದ್ಯಮಿಗಳಿಗೆ ಇದೀಗ ಮತ್ತೇ ಡೊನಾಲ್ಡ್ ಟ್ರಂಪ್ ಸರ್ಕಾರ​ ಬಿಗ್ ಶಾಕ್ ನೀಡಿದೆ. ಟ್ರಂಪ್ ಆಡಳಿತವು ಹೆಚ್-1ಬಿ (H-1B) ವೀಸಾ ನಿಯಮಗಳಲ್ಲಿ ಅತ್ಯಂತ ಕಠಿಣ ಬದಲಾವಣೆಯನ್ನು ತರಲು ಮುಂದಾಗಿದ್ದು, ಹೊಸ ವೀಸಾಗಳ ಮೇಲೆ 1,03,265 ಅಮೆರಿಕನ್ ಡಾಲರ್ (ಭಾರತೀಯ ಕರೆನ್ಸಿಯಲ್ಲಿ ಸುಮಾರು 86 ಲಕ್ಷಕ್ಕೂ ಹೆಚ್ಚು ರೂ.) ಶಾಶ್ವತ ಶುಲ್ಕ ವಿಧಿಸುವ ಪ್ರಸ್ತಾವಿತ ನಿಯಮವನ್ನು ಜಾರಿಗೊಳಿಸಿದೆ.
ಆರಂಭದಲ್ಲಿ 2ರಿಂದ 5 ಸಾವಿರ ಡಾಲರ್‌ಗಳಷ್ಟಿದ್ದ ಶುಲ್ಕವನ್ನು ಇದೀಗ ಏಕಾಏಕಿ 1 ಲಕ್ಷ ಡಾಲರ್ ಹೆಚ್ಚಿಸಿರುವ ಟ್ರಂಪ್​ ಸರ್ಕಾರದ ನಡೆ ಸದ್ಯ ಭಾರತದ ಯುವ ಟೆಕ್ಕಿಗಳು ಮತ್ತು ಐಟಿ ಸಂಸ್ಥೆಗಳ ಕನಸ್ಸುಗಳಿಗೆ ತಣೀರೆರಚಿದೆ. ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಇಲಾಖೆ (DHS) ಪ್ರಕಟಿಸಿರುವ ಈ ಹೊಸ ನಿಯಮ ಜಾರಿಯಾದರೆ, ವಿದೇಶದಿಂದ ಅಮೆರಿಕಕ್ಕೆ ಹೊಸದಾಗಿ ಹೆಚ್-1ಬಿ ವೀಸಾದಲ್ಲಿ ತೆರಳುವ ಪ್ರತಿಯೊಬ್ಬರಿಗೂ 103,265 ಶಾಶ್ವತ ಶುಲ್ಕ ರೂಲ್ಸ್​ ಅನ್ವಯಿಸಲಿದೆ.

ಯಾರಿಗೆಲ್ಲ ಮಿನಾಯಿತಿ?

ಈ ಬೃಹತ್ ಶುಲ್ಕವು ಈಗಾಗಲೇ ಅಮೆರಿಕದಲ್ಲಿ ವಾಸ್ತವ್ಯ ಹೂಡಿರುವ ಸ್ಟೂಡೆಂಟ್ ವೀಸಾದಿಂದ (F-1) ಹೆಚ್-1ಬಿಗೆ ಬದಲಾಗುವವರಿಗೆ ಮತ್ತು ಪ್ರಸ್ತುತ ವೀಸಾ ನವೀಕರಣ ಮಾಡಿಕೊಳ್ಳುವವರಿಗೆ ಅನ್ವಯಿಸುವುದಿಲ್ಲ. ವಿದೇಶಗಳಿಂದ ಹೊಸ ವೀಸಾ ಮೂಲಕ ನೇಮಕಗೊಳ್ಳುವ ಉದ್ಯೋಗಿಗಳು ಅಥವಾ ಟೆಕ್ಕಿಗಳಿಗೆ ಮಾತ್ರ ಈ 1 ಲಕ್ಷ ಡಾಲರ್​ ಬರೆ ಬೀಳಲಿದೆ.

ಭಾರತೀಯ ಆಕಾಂಕ್ಷಿಗಳಿಗೆ ಎಫೆಕ್ಟ್​ ಹೇಗೆ?

ಆರಂಭಿಕ ಹಂತದ ಇಂಜಿನಿಯರ್‌ಗಳಿಗೆ ಈ ನಿಯಮದಿಂದ ಸದ್ಯ ಬಾಗಿಲು ಬಂದ್ ಆದಂತಿದೆ. ಪ್ರಸ್ತುತ, ಹೆಚ್-1ಬಿ ಲಾಟರಿ ವ್ಯವಸ್ಥೆಯು ಈಗಾಗಲೇ ಹೆಚ್ಚಿನ ವೇತನ ಮತ್ತು ಅನುಭವ ಇರುವವರಿಗೆ ಆದ್ಯತೆ ನೀಡುತ್ತಿದೆ. ಇದರೊಟ್ಟಿಗೆ, ಲಕ್ಷ ಡಾಲರ್ ಶುಲ್ಕ ಬಿದ್ದರೆ, ಹೊಸಬರನ್ನು ನೇಮಿಸಿಕೊಳ್ಳಲು ಅಮೆರಿಕನ್ ಕಂಪನಿಗಳು ಮುಂದೆ ಬಂದರೂ, ಬರುವವರ ಸಂಖ್ಯೆ ಕುಂಠಿತಗೊಳ್ಳಲಿದೆ.

ಸಣ್ಣ ಕಂಪನಿ, ಸ್ಟಾರ್ಟ್‌ಅಪ್‌ಗಳಿಗೆ ಪೆಟ್ಟು

ಗೂಗಲ್ ಅಥವಾ ಮೈಕ್ರೋಸಾಫ್ಟ್‌ನಂತಹ ಬೃಹತ್ ಸಂಸ್ಥೆಗಳು, ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ನೆಲಗಳಿಂದ ಬರುವ ಉದ್ಯೋಗಿಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಈ ವಲಯಗಳಿಗೆ ಇದು ಅಷ್ಟು ಪರಿಣಾಮ ಬೀರದೆ ಹೋದರೂ ಈ ಭಾರಿ ಶುಲ್ಕದಿಂದ ಸಣ್ಣ ಕಂಪನಿಗಳು ಹಾಗೂ ಸ್ಟಾರ್ಟ್‌ಅಪ್‌ಗಳು ವಿದೇಶಿ ಪ್ರತಿಭೆಗಳನ್ನು ಅಮೆರಿಕಕ್ಕೆ ಕರೆಸಿಕೊಳ್ಳುವುದು ಕಷ್ಟಸಾಧ್ಯವಾಗಲಿದೆ.

60 ದಿನಗಳ ಗ್ರಾಸ್ ಪೀರಿಯಡ್ ರದ್ದು ಪ್ರಸ್ತಾವ

ಉದ್ಯೋಗ ಕಳೆದುಕೊಂಡಾಗ ಹೊಸ ಕೆಲಸ ಹುಡುಕಿಕೊಳ್ಳಲು ಸಿಗುತ್ತಿದ್ದ 60 ದಿನಗಳ ಕಾಲಾವಕಾಶವನ್ನೂ (Grace period) ರದ್ದುಗೊಳಿಸಲು ಹೆಚ್‌ಎಸ್‌ಡಿ ಪ್ರಸ್ತಾಪ ಮಾಡಿದ್ದು, ಉದ್ಯೋಗಿಗಳನ್ನು ಸಂಪೂರ್ಣವಾಗಿ ಕಂಪನಿಗಳ ದಯೆಯ ಮೇಲೆ ಇರಿಸುವಂತಿದೆ.

ಕಾನೂನು ಹೋರಾಟ?

ಈ ಪ್ರಸ್ತಾವನೆಯನ್ನು ಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತೆಗಳಿದ್ದು, ಪ್ರಸ್ತುತ ಕೆಳಹಂತದ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ಮೇಲ್ಮನವಿ ನ್ಯಾಯಾಲಯ ಸದ್ಯ ಪರಿಶೀಲಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳ ವರದಿಗಳು ತಿಳಿಸಿವೆ.

ಮುಂದಿನ ದಾರಿ ಏನು?

ಹೆಚ್-1ಬಿ ವೀಸಾದ ಈ ಹೊಸ ಕಠಿಣ ನೀತಿಗಳಿಂದಾಗಿ ಭಾರತೀಯ ಟೆಕ್ಕಿಗಳಿಗೆ ಅಮೆರಿಕ ಕನಸು ದಿನದಿಂದ ದಿನಕ್ಕೆ ದುಬಾರಿ ಹಾಗೂ ಸವಾಲಾಗುತ್ತಿದೆ. ತಜ್ಞರ ಪ್ರಕಾರ, ಭಾರತೀಯ ಅಭ್ಯರ್ಥಿಗಳು ಇನ್ಮುಂದೆ ಕೇವಲ ಅಮೆರಿಕವನ್ನೇ ನಂಬಿಕೊಳ್ಳದೇ, ಇತರ ದೇಶಗಳ ವೀಸಾ ಆಯ್ಕೆಗಳನ್ನು ಪರಿಶೀಲಿಸುವುದು ಸೂಕ್ತ ಎಂಬ ಸಲಹೆಗಳು ವ್ಯಕ್ತವಾಗಿವೆ,(ಏಜೆನ್ಸೀಸ್).