ಭಾರತೀಯರು ವೆರಿ ಗುಡ್ ಆಕ್ಟರ್ಸ್! ಅಮೆರಿಕದ ಈ ನಿಗೂಢ ಹೇಳಿಕೆಯ ಹಿಂದಿರುವ ಅಸಲಿ ರಹಸ್ಯವೇನು..?
ನವದೆಹಲಿ: ಜಾಗತಿಕ ರಾಜತಾಂತ್ರಿಕತೆಯ ಇತಿಹಾಸದಲ್ಲಿ ಭಾರತಕ್ಕೆ ದೊಡ್ಡ ಗೆಲುವು ಸಿಕ್ಕಿದೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಿಚ್ಚು ತೈಲ ಮಾರುಕಟ್ಟೆಯನ್ನು ಸುಡುತ್ತಿರುವ ಹೊತ್ತಿನಲ್ಲೇ, ಅಮೆರಿಕವು ಭಾರತಕ್ಕೆ(India-US Relations) ರಷ್ಯಾ ಕಚ್ಚಾ ತೈಲ ಖರೀದಿಸಲು 30 ದಿನಗಳ ಕಾಲ ತಾತ್ಕಾಲಿಕ ಅನುಮತಿ ನೀಡಿದೆ. ಈ ನಿರ್ಧಾರದ ಬೆನ್ನಲ್ಲೇ ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ಭಾರತೀಯರನ್ನು ವೆರಿ ಗುಡ್ ಆಕ್ಟರ್ಸ್ ಎಂದು ಬಣ್ಣಿಸಿರುವುದು ಈಗ ಜಾಗತಿಕ ಮಟ್ಟದಲ್ಲಿ ಭಾರಿ ಸುದ್ದಿಯಾಗಿದೆ.
ಭಾರತೀಯರನ್ನು ಅಮೆರಿಕ ಹೊಗಳಿದ್ದೇಕೆ..?
ಫಾಕ್ಸ್ ಬಿಸಿನೆಸ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸ್ಕಾಟ್ ಬೆಸೆಂಟ್ ಭಾರತದ ಶಿಸ್ತನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಭಾರತೀಯರು ಅತ್ಯಂತ ಉತ್ತಮವಾಗಿ ವರ್ತಿಸಿದ್ದಾರೆ. ಕಳೆದ ವರ್ಷ ನಾವು ರಷ್ಯಾ ತೈಲ ಖರೀದಿಸಬೇಡಿ ಎಂದು ಕೇಳಿಕೊಂಡಿದ್ದೆವು, ಅವರು ತಕ್ಷಣವೇ ಅದನ್ನು ಪಾಲಿಸಿದರು. ಅಮೆರಿಕದ ತೈಲವನ್ನು ಬಳಸಲು ಒಪ್ಪಿಕೊಂಡಿದ್ದರು. ಆದರೆ ಈಗ ಜಾಗತಿಕವಾಗಿ ತೈಲ ಪೂರೈಕೆಯಲ್ಲಿ ಕೊರತೆಯಿರುವ ಕಾರಣ, ಹಡಗುಗಳಲ್ಲಿ ಸಿಲುಕಿರುವ ರಷ್ಯಾ ತೈಲವನ್ನು ಭಾರತಕ್ಕೆ ಖರೀದಿಸಲು ನಾವೇ ಅನುಮತಿ ನೀಡಿದ್ದೇವೆ ಎಂದು ಹೇಳಿದ್ದಾರೆ.
ಈ ಹೇಳಿಕೆಯು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಪ್ರಾಮಾಣಿಕತೆ ಮತ್ತು ಅಮೆರಿಕದೊಂದಿಗಿನ ಬಲವಾದ ಸ್ನೇಹಕ್ಕೆ ಸಾಕ್ಷಿಯಾಗಿದೆ.
ಏನಿದು 30 ದಿನಗಳ ತಾತ್ಕಾಲಿಕ ವೈವರ್..?
ಪಶ್ಚಿಮ ಏಷ್ಯಾದಲ್ಲಿ ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧದಿಂದಾಗಿ ಜಾಗತಿಕ ತೈಲ ಬೆಲೆ ಗಗನಕ್ಕೇರುತ್ತಿದೆ. ತೈಲ ಬೆಲೆಯನ್ನು ಹತೋಟಿಯಲ್ಲಿಡಲು ಅಮೆರಿಕವು ಭಾರತಕ್ಕೆ ಈ ಕೆಳಗಿನ ರಿಯಾಯಿತಿಗಳನ್ನು ನೀಡಿದೆ.
ಸಿಲುಕಿರುವ ತೈಲಕ್ಕೆ ಮುಕ್ತಿ: ಸಮುದ್ರ ಮಧ್ಯದ ಹಡಗುಗಳಲ್ಲಿ ಸಿಲುಕಿಕೊಂಡಿರುವ ಲಕ್ಷಾಂತರ ಬ್ಯಾರೆಲ್ ರಷ್ಯಾ ತೈಲವನ್ನು ಭಾರತೀಯ ಕಂಪನಿಗಳು ಈಗ ಖರೀದಿಸಬಹುದು.
ಪೂರೈಕೆ ಸರಪಳಿ: ಇರಾನ್‌ನಿಂದ ಹಾರ್ಮುಜ್ ಜಲಸಂಧಿ ಬಂದ್ ಆಗುವ ಭೀತಿಯಿರುವ ಕಾರಣ, ಮಾರುಕಟ್ಟೆಗೆ ತೈಲ ಹರಿವು ಹೆಚ್ಚಿಸಲು ಭಾರತದ ಸಹಾಯವನ್ನು ಅಮೆರಿಕ ಕೋರಿದೆ.
ತೈಲ ಬೆಲೆ ಇಳಿಕೆ: ಭಾರತವು ಈ ತೈಲವನ್ನು ಸಂಸ್ಕರಿಸಿ ಮಾರುಕಟ್ಟೆಗೆ ಬಿಟ್ಟರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿಯಂತ್ರಣಕ್ಕೆ ಬರಲಿದೆ ಎಂದು ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ತಿಳಿಸಿದ್ದಾರೆ.
ಚೀನಾದ ವಿರುದ್ಧ ವಾಗ್ದಾಳಿ - ಭಾರತಕ್ಕೆ ಮನ್ನಣೆ
ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ಅವರು ಚೀನಾವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಚೀನಾ ತನ್ನ ಪೂರೈಕೆದಾರರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ, ಹೀಗಾಗಿ ದಕ್ಷಿಣ ಏಷ್ಯಾದ ಸಮುದ್ರಗಳಲ್ಲಿ ತೈಲ ತುಂಬಿದ ಹಡಗುಗಳು ಸುಮ್ಮನೆ ನಿಂತಿವೆ. ಆದ್ದರಿಂದ ನಾವು ನಮ್ಮ ಸ್ನೇಹಿತರಾದ ಭಾರತಕ್ಕೆ ಹೇಳಿದ್ದೇವೆ. ಆ ತೈಲವನ್ನು ಖರೀದಿಸಿ, ನಿಮ್ಮ ರಿಫೈನರಿಗಳಿಗೆ ತನ್ನಿ ಎಂದು. ಇದರಿಂದ ಇಡೀ ಜಗತ್ತಿಗೆ ಲಾಭವಾಗಲಿದೆ ಎಂದಿದ್ದಾರೆ.
ಭಾರತಕ್ಕೆ ಆಗುವ ಲಾಭಗಳೇನು..?
ಇಂಧನ ಭದ್ರತೆ: ಯುದ್ಧದ ಕಾಲದಲ್ಲೂ ಭಾರತಕ್ಕೆ ಕಚ್ಚಾ ತೈಲದ ಕೊರತೆಯಾಗುವುದಿಲ್ಲ.
ಆರ್ಥಿಕ ಉಳಿತಾಯ: ರಷ್ಯಾದಿಂದ ಸಿಗುವ ಈ ಕಚ್ಚಾ ತೈಲವು ಭಾರತದ ಪಾಲಿಗೆ ವರದಾನವಾಗಲಿದೆ.
ರಾಜತಾಂತ್ರಿಕ ಬಲ: ಅಮೆರಿಕವು ಭಾರತವನ್ನು ಅನಿವಾರ್ಯ ಪಾಲುದಾರ ಎಂದು ಕರೆದಿದೆ, ಇದು ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನವನ್ನು ಹೆಚ್ಚಿಸಿದೆ.
ಅಮೆರಿಕದ ಟ್ರಂಪ್ ಆಡಳಿತವು ಭಾರತದ ಹಿತಾಸಕ್ತಿ ಮತ್ತು ಜಾಗತಿಕ ಇಂಧನ ಮಾರುಕಟ್ಟೆಯ ಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ಈ ಮಾಸ್ಟರ್ ಸ್ಟ್ರೋಕ್ ನೀಡಿದೆ. ಭಾರತದ ತೈಲ ಕಂಪನಿಗಳು ಈಗಾಗಲೇ ಈ ತೈಲವನ್ನು ಖರೀದಿಸಲು ಸಜ್ಜಾಗಿವೆ,(ಏಜೆನ್ಸೀಸ್).