ವಿಡಿಯೋ ಹಂಚಿಕೊಂಡ ಭಾರತೀಯ ಮಹಿಳೆ ಸೋನಲ್​ 
ವಿದೇಶ

ಈ ಮಗುವಿನ ಪ್ರಿಸ್ಕೂಲ್​ ಫೀಸ್ ಕೇಳಿದ್ರೆ ನಿಮ್ಮ ಹುಬ್ಬೇರುತ್ತೆ! 1 ವರ್ಷದ ಶುಲ್ಕಕ್ಕೆ ಲಕ್ಸುರಿ ಕಾರನ್ನೇ ತಗೋಬಹುದು

ಪ್ರಮುಖ ಮುಖ್ಯಾಂಶಗಳು

  • ಅಮೆರಿಕದ ಕನೆಕ್ಟಿಕಟ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಸೋನಲ್ ಚೌಧರಿ ವಿಡಿಯೋ ವೈರಲ್​
  • 2 ವರ್ಷದ ಮಗಳ ಪ್ರಿಸ್ಕೂಲ್ ಫೀಜ್​ ವರ್ಷಕ್ಕೆ ಬರೋಬ್ಬರಿ 9ರಿಂದ10 ಲಕ್ಷ ರೂ.
  • 8 ಜನ ಮಕ್ಕಳಿರುವ ಶಾಲೆಗೆ ಇಬ್ಬರು ಶಿಕ್ಷಕಿಯರು
Preschool Fees: ಇತ್ತೀಚಿನ ದಿನಗಳಲ್ಲಿ ದಿನಸಿ ಪದಾರ್ಥಗಳಿಂದ ಹಿಡಿದು ಬಹುತೇಕ ವಸ್ತುಗಳ ಬೆಲೆಗಳು ಸಿಕ್ಕಾಪಟ್ಟೆ ದುಬಾರಿ ಆಗಿವೆ. ಹೀಗಿರುವಾಗ, ಇನ್ನೂ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದು ಹೇಗೆ ಎನ್ನುವ ಪ್ರಶ್ನೆ ಪೋಷಕರನ್ನು ಬೆಂಬಿಡದೆ ಕಾರಲಾರಂಭಿಸಿದೆ. ಕಾರಣ, ಅಗತ್ಯ ವಸ್ತುಗಳ ದರಗಳು ಮಾತ್ರವಲ್ಲ, ವಿದ್ಯೆ ಕೊಡುವ ಶಾಲಾ-ಕಾಲೇಜುಗಳ ಫೀಜ್​ಗಳು ಸಹ ಗಗನಕ್ಕೇರಿವೆ. ಇದರಿಂದ ಪೋಷಕರು ತಲೆಮೇಲೆ ಕೈಯಿಟ್ಟು ಚಿಂತಿಸುತ್ತಿದ್ದಾರೆ. ಅದರಲ್ಲೂ, 5 ಮತ್ತು 10ನೇ ತರಗತಿಗಳಿಗೆ ಬಿಡಿ, ಕೇವಲ ಪುಟ್ಟ ಕಂದಮ್ಮಗಳನ್ನು ಎಲ್​ಕೆಜಿಗೆ (ಪ್ರಿಸ್ಕೂಲ್​) ಸೇರಿಸುವುದೇ ಕಷ್ಟಸಾಧ್ಯವಾಗಿದೆ.
ಕೇವಲ ಪ್ರಿಸ್ಕೂಲ್ ಶಿಕ್ಷಣಕ್ಕೆ ಒಂದು ಮಗುವಿಗೆ ಬರೋಬ್ಬರಿ 9ರಿಂದ 10 ಲಕ್ಷ ರೂ. ಖರ್ಚಾಗುತ್ತೆ ಎಂಬ ಶಾಕಿಂಗ್ ಸಂಗತಿಯನ್ನು ಅಮೆರಿಕದಲ್ಲಿರುವ ಭಾರತೀಯ ಮಹಿಳೆಯೊಬ್ಬರು ಹೇಳಿದ ವಿಡಿಯೋ ಸದ್ಯ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಯುಎಸ್​ನ ಕನೆಕ್ಟಿಕಟ್‌ನಲ್ಲಿ ಭಾರತೀಯ ಮಹಿಳೆ ಸೋನಲ್ ಚೌಧರಿ ಮಾತನಾಡಿ, ತನ್ನ ಎರಡು ವರ್ಷದ ಮಗಳನ್ನು ಪ್ರಿಸ್ಕೂಲ್​ಗೆ ಸೇರಿಸುವ ಹಣದಲ್ಲಿ ಒಂದು ಲಕ್ಸುರಿ ಕಾರನ್ನೇ ಖರೀದಿ ಮಾಡಬಹುದು. ಅಷ್ಟು ದುಬಾರಿಯಿದೆ ಇಲ್ಲಿನ ಶಿಕ್ಷಣ ವ್ಯವಸ್ಥೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಪೂರ್ತಿ ವಿಡಿಯೋ ಮಾಹಿತಿ ಇಲ್ಲಿದೆ:

ಇಲ್ಲಿನ ಪ್ರಿಸ್ಕೂಲ್‌ನಲ್ಲಿ ಎಂಟು ಮಕ್ಕಳಿಗೆ ಕೇವಲ ಇಬ್ಬರು ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳಿಗೆ ಹಾಡು, ಡಾನ್ಸ್, ಯೋಗ, ಸೃಜನಶೀಲ ಚಟುವಟಿಕೆಗಳು ಸೇರಿ ಆಟೋಟಗಳು ಮತ್ತು ವಯಸ್ಸಿಗೆ ಸೂಕ್ತವಾದ ಕಲಿಕಾ ಕಾರ್ಯಕ್ರಮಗಳನ್ನು ನೀಡಲಾಗುತ್ತದೆ. ಆದರೆ, ಇಷ್ಟನ್ನೆಲ್ಲ ಕೊಡುವ ಶಾಲೆಯ ವರ್ಷದ ಫೀಜ್​ ಎಷ್ಟು ಎಂದು ಕೇಳಿದರೆ, ಅವರೇಳುವುದು 9 ಲಕ್ಷ ರೂ. ಎಂದು. ಇದು ನಿಜಕ್ಕೂ ನನಗೆ ಆಶ್ಚರ್ಯ ಮೂಡಿಸಿತು. ವಾರಕ್ಕೆ ಎರಡು ದಿನ ಪ್ರಿಸ್ಕೂಲ್‌ಗೆ ಕಳುಹಿಸಿದರೆ, ವರ್ಷಕ್ಕೆ ಸುಮಾರು 4 ಲಕ್ಷ ರೂ. ವೆಚ್ಚ. ಅದೇ ವಾರಕ್ಕೆ ಐದು ದಿನ ಕಳುಹಿಸಿದರೆ, 9ರಿಂದ 10 ಲಕ್ಷ ರೂ. ಪಾವತಿ ಮಾಡಬೇಕು ಎಂದು ಹುಬ್ಬೇರಿಸುವ ಸಂಗತಿ ಹಂಚಿಕೊಂಡಿದ್ದಾರೆ.
ಇಲ್ಲಿನ ಶಾಲೆಯ ತರಗತಿಗಳು ಸೆಪ್ಟೆಂಬರ್‌ನಿಂದ ಜೂನ್ ವರೆಗೆ ನಡೆಯುತ್ತವೆ. ಬೆಳಗ್ಗೆ 8.45ಕ್ಕೆ ಪ್ರಾರಂಭವಾಗಿ 11.45ಕ್ಕೆ ಕೊನೆಗೊಳ್ಳುತ್ತವೆ. ಅಂದರೆ ದಿನಕ್ಕೆ ಕೇವಲ ಮೂರು ಗಂಟೆಯಷ್ಟೇ ನೀಡುವ ಶಿಕ್ಷಣಕ್ಕೆ ನಾವು ಇಷ್ಟು ದೊಡ್ಡ ಮೊತ್ತದ ಶುಲ್ಕವನ್ನು ಪಾವತಿ ಮಾಡುವುದು ಎಷ್ಟು ಸರಿ? ಇದೇ 9 ಲಕ್ಷ ರೂ.ಗೆ ಭಾರತದಲ್ಲಿ ಮಾರುತಿ ಸುಜುಕಿಯ ಬ್ರೆಜಾ ಕಾರೇ ಸಿಗುತ್ತದೆ ಎಂದು ವಿಡಿಯೋದಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಸೋನಾಲ್ ಅವರ ವಿಡಿಯೋ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಭಾರತ ಮತ್ತು ಅಮೆರಿಕಾದ ಶಿಕ್ಷಣದ ವೆಚ್ಚದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುತ್ತಿದ್ದಾರೆ. ಒಂದು ವರ್ಷಕ್ಕೆ 9ರಿಂದ 10 ಲಕ್ಷ ರೂ. ಕೇವಲ ಪುಟ್ಟ ಕಂದಮ್ಮಗಳ ಶುಲ್ಕಕ್ಕೆ ಹೋದರೆ, ದೊಡ್ಡ ರಾಷ್ಟ್ರಗಳಲ್ಲಿ ಬದುಕುನ್ನು ಸಾಗಿಸುವುದಾದರೂ ಹೇಗೆ? ಎಂಬ ಕಳವಳಕಾರಿ ಪ್ರಶ್ನೆಗಳು ಕೇಳಿಬಂದಿವೆ,(ಏಜೆನ್ಸೀಸ್).