ರಾತ್ರಿ ಗಾಢ ನಿದ್ರೆಯಲ್ಲಿರುವಾಗ ಮನೆಗೆ ನುಗ್ಗಿದ ಕಿರಾತಕ: ಲಂಡನ್​ನಲ್ಲಿ ಭಾರತೀಯ ಮಹಿಳೆಯ ಬರ್ಬರ ಹತ್ಯೆ! Indian woman  
ವಿದೇಶ

ರಾತ್ರಿ ಗಾಢ ನಿದ್ರೆಯಲ್ಲಿರುವಾಗ ಮನೆಗೆ ನುಗ್ಗಿದ ಕಿರಾತಕ: ಲಂಡನ್​ನಲ್ಲಿ ಭಾರತೀಯ ಮಹಿಳೆಯ ಬರ್ಬರ ಹತ್ಯೆ! Indian woman

ಪ್ರಮುಖ ಮುಖ್ಯಾಂಶಗಳು

  • ಲಂಡನ್‌ನಲ್ಲಿ ಭಾರತೀಯ ಮೂಲದ ಮಹಿಳೆಯ ಭೀಕರ ಕೊಲೆ ನಿದ್ದೆಯಲ್ಲೇ ನವಜಾತ ಶಿಶುವಿನ ತಾಯಿಯ ಹತ್ಯೆ
  • ಭಾರತೀಯ ಮೂಲದ ಮಹಿಳೆ ಕೊಲೆ ಪ್ರಕರಣ ಶಂಕಿತ ಆರೋಪಿ ಡೇನಿಯಲ್ ಸೀನ್ ಜೇಮ್ಸ್ ಬಂಧನ
  • ಸಿ ಕಿರಣ್‌ದೀಪ್ ಕೌರ್ ಕೊಲೆ ಪ್ರಕರಣ ತನಿಖೆ ಚುರುಕುಗೊಳಿಸಿದ ಮೆಟ್ರೋಪಾಲಿಟನ್ ಪೊಲೀಸರು
ಲಂಡನ್‌: ಇಲ್ಲಿನ ಭಾರತೀಯ ಮೂಲದ ಮಹಿಳೆಯೊಬ್ಬರ ( Indian woman ) ಭೀಕರ ಕೊಲೆ ಇಡೀ ಅನಿವಾಸಿ ಭಾರತೀಯ ಸಮುದಾಯವನ್ನು ಬೆಚ್ಚಿಬೀಳಿಸಿದೆ. ತಡರಾತ್ರಿ ಮನೆಯೊಳಗೆ ನುಗ್ಗಿದ ದುಷ್ಕರ್ಮಿಯೊಬ್ಬ ನವಜಾತ ಶಿಶುವಿನ ತಾಯಿಯನ್ನು ನಿದ್ದೆಯಲ್ಲೇ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದು, ಜಾಗತಿಕ ಮಟ್ಟದಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿದೆ.
ಪಶ್ಚಿಮ ಲಂಡನ್‌ನ ಹೇಸ್‌ನಲ್ಲಿರುವ ನಿವಾಸದಲ್ಲಿ ಭಾನುವಾರ ಮುಂಜಾನೆ ಈ ಘೋರ ದುರಂತ ಸಂಭವಿಸಿದೆ. ಮೃತರನ್ನು 24 ವರ್ಷದ ಕಿರಣ್‌ದೀಪ್ ಕೌರ್ ಎಂದು ಗುರುತಿಸಲಾಗಿದೆ. ಕಿರಣ್‌ದೀಪ್ ಅವರು ತಮ್ಮ ಮನೆಯಲ್ಲಿ ಗಾಢ ನಿದ್ದೆಯಲ್ಲಿದ್ದಾಗ ಒಳನುಗ್ಗಿದ ಹಂತಕ, ಹರಿತವಾದ ಆಯುಧದಿಂದ ಅವರ ಮೇಲೆ ಹಿಂಸಾತ್ಮಕವಾಗಿ ದಾಳಿ ನಡೆಸಿದ್ದಾನೆ. ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಿಂದಾಗಿ ಕಿರಣ್‌ದೀಪ್ ಕೌರ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಈ ಭೀಕರ ದಾಳಿಯ ಸಂದರ್ಭದಲ್ಲಿ ಕಿರಣ್‌ದೀಪ್ ಅವರ ಪತಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಇದೇ ವೇಳೆ, ಕೇವಲ ಕೆಲವು ವಾರಗಳ ಹಿಂದಷ್ಟೇ ಜನಿಸಿದ್ದ ಈ ದಂಪತಿಯ ನವಜಾತ ಶಿಶು ಪ್ರಾಣಾಪಾಯದಿಂದ ಪಾರಾಗಿದೆಯೇ ಅಥವಾ ಮಗುವಿನ ಸದ್ಯದ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಅಧಿಕಾರಿಗಳು ಇನ್ನು ಯಾವುದೇ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ.
ಈ ಘಟನೆಗೆ ಸಂಬಂಧಿಸಿದಂತೆ ಲಂಡನ್ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ, 44 ವರ್ಷದ ಡೇನಿಯಲ್ ಸೀನ್ ಜೇಮ್ಸ್ ಎಂಬ ಶಂಕಿತ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಈಗಾಗಲೇ ವಿಲ್ಲೆಸ್ಡನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆ ಒಳಪಡಿಸಲಾಗಿದೆ.
ಮತ್ತೊಂದೆಡೆ, ಮೃತ ಕಿರಣ್‌ದೀಪ್ ಕೌರ್ ಅವರ ಕುಟುಂಬಸ್ಥರು ಇದು ಕೋಮು ದ್ವೇಷದಿಂದ ನಡೆದ ದಾಳಿ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಲಂಡನ್ ಮೆಟ್ರೋಪಾಲಿಟನ್ ಪೊಲೀಸರು, ಪ್ರಸ್ತುತ ಇದು ದ್ವೇಷದ ಅಪರಾಧ (ಹೇಟ್ ಕ್ರೈಮ್) ಎಂಬುದಕ್ಕೆ ಯಾವುದೇ ಪ್ರಾಥಮಿಕ ಸಾಕ್ಷ್ಯಗಳು ಸಿಕ್ಕಿಲ್ಲ ಮತ್ತು ಎಲ್ಲಾ ಆಯಾಮಗಳಿಂದಲೂ ಪ್ರಕರಣದ ಸಮಗ್ರ ತನಿಖೆಯನ್ನು ಮುಂದುವರಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್​).