- ಹೊಸ ವರ್ಷದ ಹಿಂದಿನ ದಿನ ನಾಪತ್ತೆಯಾಗಿದ್ದ ಭಾರತೀಯ ಮೂಲದ ಯುವತಿ ಶವವಾಗಿ ಪತ್ತೆ
- ಅಮೆರಿದಕ ಮೇರಿಲ್ಯಾಂಡ್ನಲ್ಲಿರುವ ಮಾಜಿ ಬಾಯ್ಫ್ರೆಂಡ್ ಅಪಾರ್ಟ್ಮೆಂಟ್ನಲ್ಲಿ ಮೃತದೇಹ
- ಮಾಜಿ ಬಾಯ್ಫ್ರೆಂಡ್ ವಿರುದ್ಧ ಪ್ರಥಮ ಮತ್ತು ದ್ವಿತೀಯ ಹಂತದ ಕೊಲೆ ಆರೋಪ
ನ್ಯೂಯಾರ್ಕ್: ಹೊಸ ವರ್ಷದ ಹಿಂದಿನ ದಿನ ಅಂದರೆ, ಡಿ.31ರಂದು ನಾಪತ್ತೆಯಾಗಿದ್ದ ಭಾರತೀಯ ಮೂಲದ ಯುವತಿಯ ( Indian Woman ) ಮೃತದೇಹ ಇರಿತದ ಗಾಯಗಳೊಂದಿಗೆ ಅಮೆರಿದಕ ಮೇರಿಲ್ಯಾಂಡ್ನಲ್ಲಿರುವ ಆಕೆಯ ಮಾಜಿ ಬಾಯ್ಫ್ರೆಂಡ್ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿದೆ.
ಮೃತಳನ್ನು ನಿಕಿತಾ ಗೋಡಿಶಾಲಾ (27) ಎಂದು ಗುರುತಿಸಲಾಗಿದೆ. ಈಕೆ ಎಲ್ಲಿಕಾಟ್ ನಗರದಲ್ಲಿ ಡೇಟಾ ಮತ್ತು ಸ್ಟ್ರಾಟೆಜಿ ವಿಶ್ಲೇಷಕಿಯಾಗಿ ಕೆಲಸ ಮಾಡುತ್ತಿದ್ದಳು. ಆಕೆಯ ಮೃತದೇಹ 26 ವರ್ಷದ ಮಾಜಿ ಬಾಯ್ಫ್ರೆಂಡ್ ಅರ್ಜುನ್ ಶರ್ಮ ಒಡೆತನದ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿದೆ ಎಂದು ಹೋವರ್ಡ್ ಕೌಂಟಿ ಪೊಲೀಸರು ತಿಳಿಸಿದ್ದಾರೆ.
ತನಿಖಾಧಿಕಾರಿಗಳು ಮಾಜಿ ಬಾಯ್ಫ್ರೆಂಡ್ ವಿರುದ್ಧ ಪ್ರಥಮ ಮತ್ತು ದ್ವಿತೀಯ ಹಂತದ ಕೊಲೆ ಆರೋಪ ಹೊರಿಸಿ ಬಂಧನ ವಾರಂಟ್ ಅನ್ನು ಪಡೆದಿದ್ದಾರೆ. ಇನ್ನು ಆರೋಪಿ ಶರ್ಮ ಜನವರಿ 2ರಂದೇ ನಿಕಿತಾ ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದ. ಅಲ್ಲದೆ, ಆಕೆಯನ್ನು ಕೊನೆಯದಾಗಿ ಡಿ.31ರಂದು ನೋಡಿದ್ದಾಗಿ ಹೇಳಿದ್ದ. ಜನವರಿ 3 ರಂದು, ತನಿಖಾಧಿಕಾರಿಗಳು ಅದೇ ಅಪಾರ್ಟ್ಮೆಂಟ್ನಲ್ಲಿ ಶೋಧ ಕಾರ್ಯಾಚರಣೆ ನಡೆಸಿದಾಗ ನಿಕಿತಾ ಗೋಡಿಶಾಲಾ ಮೃತದೇಹ ಇರಿತದ ಗಾಯಗಳೊಂದಿಗೆ ಪತ್ತೆಯಾಗಿದೆ.
ಗೋಡಿಶಾಲಾ ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ ದಿನವೇ ಅರ್ಜುನ್ ಶರ್ಮ ಭಾರತಕ್ಕೆ ಎಸ್ಕೇಪ್ ಆಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ, ಡಿ.31 ರಂದು ಸಂಜೆ 7 ಗಂಟೆಯ ಬಳಿಕ ಶರ್ಮ, ನಿಕಿತಾಳನ್ನು ಕೊಲೆ ಮಾಡಿದ್ದಾನೆಂದು ಪೊಲೀಸರು ಹೇಳಿದ್ದಾರೆ. ಸದ್ಯ ತನಿಖೆ ಮುಂದುವರೆದಿದ್ದು, ಕೊಲೆಗೆ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.
ಅರ್ಜುನ್ ಶರ್ಮನನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಫೆಡರಲ್ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿರುವುದಾಗಿ ಹೊವಾರ್ಡ್ ಕೌಂಟಿ ಪೊಲೀಸರು ಹೇಳಿದ್ದಾರೆ. ಅಲ್ಲದೆ, ನಿಕಿತಾ ಅವರ ಕುಟುಂಬದೊಂದಿಗೆ ಭಾರತೀಯ ರಾಯಭಾರ ಕಚೇರಿ ಸಂಪರ್ಕದಲ್ಲಿದ್ದು, ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ ತಿಳಿಸಿದ್ದಾರೆ, (ಏಜೆನ್ಸೀಸ್).