ಮಧ್ಯಪ್ರಾಚ್ಯದ ವಿಮಾನ ನಿಲ್ದಾಣಗಳು ಬಂದ್ 
ವಿದೇಶ

ಮಧ್ಯಪ್ರಾಚ್ಯದ ವಿಮಾನ ನಿಲ್ದಾಣಗಳು ಬಂದ್! ಯುದ್ಧ ಭೂಮಿಯಲ್ಲಿ ಭಾರತೀಯ ಸ್ಟಾರ್​ ಸೆಲೆಬ್ರಿಟಿಗಳ ಪರದಾಟ

ಟೆಹ್ರಾನ್​: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿರುವ ಭಾರಿ ದಾಳಿಯಿಂದಾಗಿ ಮಧ್ಯಪ್ರಾಚ್ಯದಾದ್ಯಂತ ವಿಮಾನಯಾನ ಸೇವೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಈ ಭಾಗದ ಹಲವು ದೇಶಗಳು ತಮ್ಮ ವಾಯುಪ್ರದೇಶವನ್ನು ಮುಚ್ಚಿವೆ. ಯುರೋಪ್, ಆಫ್ರಿಕಾ ಮತ್ತು ಪಶ್ಚಿಮದಿಂದ ಏಷ್ಯಾವನ್ನು ಸಂಪರ್ಕಿಸುವ ಪ್ರಮುಖ ವಿಮಾನ ನಿಲ್ದಾಣಗಳ ಮೇಲೆಯೂ ನೇರ ದಾಳಿಗಳು ನಡೆದಿವೆ.

ಇದರಿಂದಾಗಿ ವಿಶ್ವದಾದ್ಯಂತ ಲಕ್ಷಾಂತರ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲೇ ಅತಂತ್ರರಾಗಿದ್ದಾರೆ. ಇಸ್ರೇಲ್, ಕತಾರ್, ಸಿರಿಯಾ, ಇರಾನ್, ಇರಾಕ್, ಕುವೈತ್, ಬಹ್ರೇನ್ ಮತ್ತು ಯುಎಇ ತಮ್ಮ ವಾಯುಪ್ರದೇಶಗಳನ್ನು ಮುಚ್ಚಿವೆ. ದುಬೈ, ಅಬುಧಾಬಿ ಮತ್ತು ದೋಹಾದ ಪ್ರಮುಖ ವಿಮಾನಯಾನ ಹಬ್​ಗಳು ಮುಚ್ಚಲ್ಪಟ್ಟಿವೆ. ಎಮಿರೇಟ್ಸ್, ಕತಾರ್ ಏರ್​ವೇಸ್, ಇತಿಹಾದ್​ನಂತಹ ಪ್ರಮುಖ ಸಂಸ್ಥೆಗಳು 1,800ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿವೆ.

ಏರ್ ಇಂಡಿಯಾ ಹಾರಾಟ ಸ್ಥಗಿತ

ಭಾರತದ ನಾಗರಿಕ ವಿಮಾನಯಾನ ಸಂಸ್ಥೆಯು ಜೋರ್ಡಾನ್, ಸೌದಿ ಅರೇಬಿಯಾ ಮತ್ತು ಲೆಬನಾನ್ ಸೇರಿದಂತೆ ಮಧ್ಯಪ್ರಾಚ್ಯದ ಹೆಚ್ಚಿನ ಭಾಗಗಳನ್ನು ‘ಅಪಾಯದ ವಲಯ’ ಎಂದು ಘೊಷಿಸಿದೆ. ಏರ್ ಇಂಡಿಯಾ ಮಧ್ಯಪ್ರಾಚ್ಯಕ್ಕೆ ತೆರಳುವ ತನ್ನೆಲ್ಲಾ ವಿಮಾನಗಳನ್ನು ರದ್ದುಗೊಳಿಸಿದೆ. ವಿಶ್ವದ ಬಹುತೇಕ ಏರ್​ಲೈನ್​ಗಳು ಸೇವೆಯನ್ನು ಬಂದ್ ಮಾಡಿವೆ.

ಮಾರ್ಗ ಬದಲಾವಣೆ ಮಾಡಿದರೆ ಹೊರೆ

ಮಧ್ಯಪ್ರಾಚ್ಯವನ್ನು ದಾಟುವ ವಿಮಾನಗಳು ಈಗ ಸೌದಿ ಅರೇಬಿಯಾದ ಮೂಲಕ ಸುತ್ತುವರಿದು ಸಾಗಬೇಕಿದೆ. ಇದರಿಂದ ಪ್ರಯಾಣದ ಸಮಯ ಹೆಚ್ಚಾಗಲಿದ್ದು, ವಿಮಾನಯಾನ ಸಂಸ್ಥೆಗಳಿಗೆ ಇಂಧನದ ವೆಚ್ಚವೂ ಅಧಿಕವಾಗಲಿದೆ. ಯುದ್ಧ ದೀರ್ಘಕಾಲ ಮುಂದುವರಿದರೆ ವಿಮಾನಯಾನ ಟಿಕೆಟ್ ದರಗಳೂ ದುಬಾರಿಯಾಗುವ ಸಾಧ್ಯತೆಯಿದೆ.

ವಿದೇಶಿ ಪ್ರಜೆಗಳ ವೀಸಾ ಅವಧಿ ವಿಸ್ತರಣೆ

ಯುದ್ಧ ಪರಿಸ್ಥಿತಿಯಿಂದಾಗಿ ವಿಮಾನಯಾನ ವ್ಯತ್ಯಯಗೊಂಡಿರುವ ಹಿನ್ನೆಲೆಯಲ್ಲಿ, ಭಾರತದಲ್ಲಿ ಸಿಲುಕಿರುವ ವಿದೇಶಿ ಪ್ರಜೆಗಳ ವೀಸಾ ಅವಧಿ ವಿಸ್ತರಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ನೂರಾರು ಅಂತರಾಷ್ಟ್ರೀಯ ವಿಮಾನಗಳು ರದ್ದಾಗಿರುವ ಕಾರಣ ಭಾರತ ಪ್ರವಾಸದಲ್ಲಿರುವ ಅನೇಕ ವಿದೇಶಿ ಪ್ರಜೆಗಳು ತಮ್ಮ ದೇಶಗಳಿಗೆ ಮರಳಲಾಗದೆ ಇಲ್ಲಿಯೇ ಉಳಿಯುವಂತಾಗಿದೆ. ಅಂತಹ ಪ್ರಜೆಗಳ ವೀಸಾ ಅವಧಿ ಮುಕ್ತಾಯವಾಗುತ್ತಿದ್ದರೆ, ಅವರು ತಕ್ಷಣವೇ ಹತ್ತಿರದ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯನ್ನು ಸಂರ್ಪಸುವಂತೆ ವಿದೇಶಾಂಗ ಸಚಿವಾಲಯ ಸೂಚಿಸಿದೆ.

ಮಧ್ಯದಲ್ಲೇ ಮಾರ್ಗ ಬದಲಿಸಿದ 145 ವಿಮಾನಗಳು!

ಶನಿವಾರ ಮುಂಜಾನೆ ಟೆಲ್ ಅವಿವ್ ಮತ್ತು ದುಬೈನತ್ತ ತೆರಳುತ್ತಿದ್ದ ಕನಿಷ್ಠ 145 ವಿಮಾನಗಳನ್ನು ಮಾರ್ಗಮಧ್ಯೆ ಅಥೆನ್ಸ್, ಇಸ್ತಾಂಬುಲ್ ಅಥವಾ ರೋಮ್ ನಗರಗಳ ವಿಮಾನ ನಿಲ್ದಾಣಗಳತ್ತ ತಿರುಗಿಸಲಾಗಿದೆ. ಅಮೆರಿಕದ ಫಿಲಡೆಲ್ಪಿಯಾದಿಂದ ಹೊರಟಿದ್ದ ವಿಮಾನವೊಂದು ಸ್ಪೇನ್​ವರೆಗೂ ಬಂದು, ಬಳಿಕ ಮುಂದೆ ಸಾಗಲಾಗದೆ ಸತತ 15 ಗಂಟೆಗಳ ಹಾರಾಟದ ನಂತರ ಮತ್ತೆ ವಾಪಸ್ಸಾಗಿದೆ.

ರಕ್ಷಣೆಗಾಗಿ ಪ್ರಧಾನಿಗೆ ಮೊರೆ ಇಟ್ಟ ಸೋನಲ್

ಮಧ್ಯಪ್ರಾಚ್ಯ ದೇಶಗಳಲ್ಲಿ ವಿಮಾನಗಳು ರದ್ದಾಗಿರುವ ಕಾರಣ ಬಾಲಿವುಡ್ ನಟಿ ಸೋನಲ್ ಚವಾಣ್ ದುಬೈನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ರಕ್ಷಣೆಗೆ ಧಾವಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ನಟಿ ವಿನಂತಿಸಿದ್ದಾರೆ. ಸೋನಲ್ ಚವಾಣ್ ಜಾಲತಾಣದ ಮೂಲಕ ಮನವಿ ಮಾಡಿದ್ದು, ‘ಸದ್ಯ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ದುಬೈನಲ್ಲಿ ಸಿಲುಕಿಕೊಂಡಿದ್ದೇನೆ. ಭಾರತಕ್ಕೆ ಮರಳಲು ಅನಿಶ್ಚತತೆ ಎದುರಾಗಿದೆ. ಸುರಕ್ಷಿತವಾಗಿ ಮನೆಗೆ ಮರಳಲು ಸರ್ಕಾರದ ಸಹಾಯ ಕೋರುತ್ತೇನೆ’ ಎಂದು ಪ್ರಧಾನಿಗೆ ವಿನಂತಿಸಿಕೊಂಡಿದ್ದಾರೆ. ಇನ್ನೋರ್ವ ಬಂಗಾಳಿ ನಟಿ ಶುಭಶ್ರೀ ಗಂಗೂಲಿ ಮತ್ತು ಪುತ್ರ ದುಬೈನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ಅಜಿತ್ ಸೇಫ್: ಕಾರ್ ರೇಸಿಂಗ್ ತರಬೇತಿ ಪಡೆಯಲು ಅಬುಧಾಬಿಗೆ ತೆರಳಿರುವ ತಮಿಳು ನಟ ಅಜಿತ್ ಕುಮಾರ್ ಸುರಕ್ಷಿತವಾಗಿದ್ದಾರೆ ಎಂದು ಅವರ ವ್ಯವಸ್ಥಾಪಕ ಖಚಿತಪಡಿಸಿದ್ದಾರೆ. ನಟ ಚೆನ್ನೈಗೆ ಮರಳಲು ಮುಂದಾಗಿರುವಾಗ ವಿಮಾನಗಳು ರದ್ದುಗೊಂಡಿವೆ. ಇದೀಗ ಅವರು ಸುರಕ್ಷಿತವಾಗಿದ್ದಾರೆ ಎಂದು ಮ್ಯಾನೇಜರ್ ಖಚಿತಪಡಿಸಿದ್ದಾರೆ. ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಹಾಗೂ ಅವರ ಕೋಚ್ ಸಹ ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದು, ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ.