ಭಾರತೀಯ ಮೂಲದ ವಕೀಲ ನೀಲ್ ಕಟ್ಯಾಲ್, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ 
ವಿದೇಶ

ಅಮೆರಿಕ ಸುಪ್ರೀಂ ಕೋರ್ಟ್‌ನಲ್ಲಿ ಟ್ರಂಪ್‌ಗೆ ಶಾಕ್ ಕೊಟ್ಟ ಭಾರತೀಯ ಮೂಲದ ವಕೀಲ! ಯಾರು ಈ ನೀಲ್ ಕಟ್ಯಾಲ್? Neal Katyal

ಪ್ರಮುಖ ಮುಖ್ಯಾಂಶಗಳು

  • ಟ್ರಂಪ್​ ಟಾರೀಫ್​ಗೆ ಅಮೆರಿಕದ ಸುಪ್ರೀಂ ಕೋರ್ಟ್​ ಬ್ರೇಕ್​
  • ಅಧ್ಯಕ್ಷ ಟ್ರಂಪ್​ಗೆ ಭಾರತೀಯ ಮೂಲದ ನೀಲ್ ಕಟ್ಯಾಲ್ ರಿಂದ ಮುಖಭಂಗ
  • ಅಮೆರಿಕಾದಲ್ಲಿ ಅಧ್ಯಕ್ಷರಿಗಿಂತ ಸಂವಿಧಾನವೇ ಫವರ್​ಫುಲ್​ ಎಂದ ನೀಲ್ ಕಟ್ಯಾಲ್
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 'ಅಮೇರಿಕಾ ಫಸ್ಟ್' ನೀತಿಗೆ ಸುಪ್ರೀಂ ಕೋರ್ಟ್ ದೊಡ್ಡ ಬ್ರೇಕ್ ಹಾಕಿದೆ. ಜಗತ್ತಿನಾದ್ಯಂತ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಟ್ರಂಪ್ ವಿಧಿಸಿದ್ದ ಭಾರಿ ಸುಂಕಗಳನ್ನು ಅಸಂವಿಧಾನಿಕ ಎಂದು ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಆದರೆ ಟ್ರಂಪ್‌ ವಿರುದ್ಧದ ಈ ಕಾನೂನು ಸಮರದಲ್ಲಿ ಗೆಲುವನ್ನು ತಂದು ಕೊಟ್ಟಿದ್ದು ಭಾರತೀಯ ಮೂಲದ ವಕೀಲ ಎನ್ನುವುದು ಗೊತ್ತೆ?

ಯಾರು ಈ ನೀಲ್ ಕಟ್ಯಾಲ್?

ಭಾರತೀಯ ವಲಸಿಗ ದಂಪತಿಗಳಿಗೆ ಚಿಕಾಗೋದಲ್ಲಿ ಜನಿಸಿದ ನೀಲ್ ಕಟ್ಯಾಲ್ (Neal Katyal), ಇಂದು ಅಮೆರಿಕದ ಕಾನೂನು ಜಗತ್ತಿನ ಸೂಪರ್ ಸ್ಟಾರ್. ಯೇಲ್ ಕಾನೂನು ಶಾಲೆಯಲ್ಲಿ ಪದವಿ ಪಡೆದ ಇವರು, ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ ಬರೋಬ್ಬರಿ 50ಕ್ಕೂ ಹೆಚ್ಚು ಪ್ರಕರಣಗಳನ್ನು ವಾದಿಸಿದ ದಾಖಲೆ ಹೊಂದಿದ್ದಾರೆ.
ಈ ಹಿಂದೆ ಅಧ್ಯಕ್ಷ ಬರಾಕ್ ಒಬಾಮಾ ಅವಧಿಯಲ್ಲಿ ಹಂಗಾಮಿ ಸಾಲಿಸಿಟರ್ ಜನರಲ್ ಆಗಿ ಕೆಲಸ ಮಾಡಿದ್ದ ನೀಲ್, ಇದೀಗ ಟ್ರಂಪ್ ಅವರ ಸುಂಕದ ನಿರ್ಧಾರದ ವಿರುದ್ಧ ಸಣ್ಣ ಉದ್ಯಮಿಗಳ ಪರವಾಗಿ ವಾದ ಮಂಡಿಸಿ ಐತಿಹಾಸಿಕ ಜಯ ತಂದುಕೊಟ್ಟಿದ್ದಾರೆ.

ಸಂವಿಧಾನವೇ ಸುಪ್ರೀಂ ಎಂದ ಕಟ್ಯಾಲ್

ಸುಪ್ರೀಂ ಕೋರ್ಟ್‌ನ ಈ 6-3 ಬಹುಮತದ ತೀರ್ಪಿನ ನಂತರ ಮಾತನಾಡಿದ ನೀಲ್ ಕಟ್ಯಾಲ್, ಇಂದು ಕಾನೂನಿನ ನಿಯಮ ಗೆದ್ದಿದೆ. ಅಧ್ಯಕ್ಷರು ಎಷ್ಟೇ ಶಕ್ತಿಶಾಲಿಯಾಗಿರಲಿ, ನಮ್ಮ ಸಂವಿಧಾನ ಅವರಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ಮತ್ತೊಮ್ಮೆ ಜಗತ್ತಿದೆ ಸಾಬೀತಾಗಿದೆ. ಜನರ ಮೇಲೆ ತೆರಿಗೆ ವಿಧಿಸುವ ಅಧಿಕಾರ ಕೇವಲಸಂಸತ್ತಿಗೆ ಇದೆಯೇ ಹೊರತು ಅಧ್ಯಕ್ಷರಿಗಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಕೆಂಡಾಮಂಡಲವಾದ ಟ್ರಂಪ್: ಮುಂದೇನು?
ಸುಪ್ರೀಂ ಕೋರ್ಟ್‌ನ ಈ ನಿರ್ಧಾರ ಹೊರಬೀಳುತ್ತಿದ್ದಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೊಚ್ಚಿಗೆದ್ದಿದ್ದಾರೆ. ಇದನ್ನು ಅಮೆರಿಕಕ್ಕೆ ಆದ ಅವಮಾನ ಎಂದು ಕರೆದ ಅವರು, ತಾವೇ ನೇಮಿಸಿದ ಇಬ್ಬರು ನ್ಯಾಯಾಧೀಶರು ಈ ತೀರ್ಪಿನ ಪರವಾಗಿರುವುದು ಅಧ್ಯಕ್ಷರ ಆಕ್ರೋಶಕ್ಕೆ ಕಾರಣವಾಗಿದೆ. ನ್ಯಾಯಾಲಯ ವಿದೇಶಿ ಹಿತಾಸಕ್ತಿಗಳಿಗೆ ಮಣಿದಿದೆ ಎಂಬ ಗಂಭೀರ ಆರೋಪವನ್ನು ಅವರು ಮಾಡಿದ್ದಾರೆ.
ಆದರೆ ಟ್ರಂಪ್ ಸುಪ್ರೀಂ ಕೋರ್ಟ್ ತೀರ್ಪು ಬಂದ ಬೆನ್ನಲ್ಲೇ ಮತ್ತೊಂದು ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವ ಅವರು, ಬೇರೆ ಕಾನೂನಿನ ಅಡಿಯಲ್ಲಿ ತಾತ್ಕಾಲಿಕವಾಗಿ ಶೇ. 10 ರಷ್ಟು ಜಾಗತಿಕ ಸುಂಕವನ್ನು ವಿಧಿಸಿದ್ದಾರೆ. ಇದರೊಂದಿಗೆ ಅಮೆರಿಕದ ವ್ಯಾಪಾರ ಯುದ್ಧವು ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.

ಜಾಗತಿಕ ಮಾರುಕಟ್ಟೆ ಮೇಲೆ ಪರಿಣಾಮ

ನೀಲ್ ಕಟ್ಯಾಲ್ ಅವರ ಈ ಕಾನೂನು ಜಯದಿಂದ ಭಾರತ ಸೇರಿದಂತೆ ಹಲವು ದೇಶಗಳ ಉದ್ಯಮಿಗಳಿಗೆ ಸದ್ಯಕ್ಕೆ ನಿರಾಳತೆ ಸಿಕ್ಕಂತಾಗಿದೆ. ಆದರೆ ಟ್ರಂಪ್ ಅವರ ಹೊಸ ಪಟ್ಟುಗಳು ಜಾಗತಿಕ ಆರ್ಥಿಕತೆಯ ಮೇಲೆ ಯಾವ ರೀತಿ ಪರಿಣಾಮ ಬೀರಲಿವೆ ಎಂಬುದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ,(ಏಜನ್ಸೀಸ್​).