ಭಾರತೀಯ ಮೂಲದ ಹರ್ದೀಪ್ ಸಿಂಗ್ ತೂರ್
- ಭಾರತೀಯ ಮೂಲದ ಕ್ಯಾಬ್ ಚಾಲಕನಿಗೆ ಕೆನಡಾಡದಲ್ಲಿ ಅಪರೂಪದ ಅನುಭವ
- ಇಬ್ಬರನ್ನು ಪಿಕಪ್ ಮಾಡಿ ಮೂವರನ್ನು ಡ್ರಾಪ್ ಮಾಡಿದ ಹರ್ದೀಪ್ ಸಿಂಗ್ ತೂರ್
- ನನ್ನ ಜೀವನದ ಮೊದಲ ಅನುಭವ ಮತ್ತು ಹೆಮ್ಮೆಯ ಕ್ಷಣ ಎಂದು ಕ್ಯಾಬ್ ಡ್ರೈವರ್ ತೂರ್
ಟೊರೊಂಟೋ: ಇಬ್ಬರನ್ನು ಪಿಕಪ್ ಮಾಡಿದ ಭಾರತೀಯ ಮೂಲದ ಕ್ಯಾಬ್ ಚಾಲಕ ( Cab Driver ) ಆಸ್ಪತ್ರೆ ಬಳಿ ಡ್ರಾಪ್ ಮಾಡಿದ್ದು ಮಾತ್ರ ಮೂವರನ್ನ. ಇದನ್ನು ಕೇಳಿ ನಿಮಗೆ ಆಶ್ಚರ್ಯ ಎನಿಸಬಹುದು. ಇದೊಂದು ಅಪರೂಪದಲ್ಲೇ ಅಪರೂಪದ ಘಟನೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯುವ ಕುತೂಹಲ ನಿಮ್ಮಲ್ಲಿದ್ದರೆ ಈ ಸ್ಟೋರಿಯನ್ನು ಪೂರ್ತಿ ಓದಿ.
ಭಾರತೀಯ ಮೂಲದ ಹರ್ದೀಪ್ ಸಿಂಗ್ ತೂರ್ ಎಂಬುವರು ಕೆನಡಾದ ಕಲಗರಿ ನಗರದಲ್ಲಿ ಕ್ಯಾಬ್ ಡ್ರೈವರ್ ಆಗಿದ್ದಾರೆ. ಕಳೆದ ಶನಿವಾರ ತಡರಾತ್ರಿ ತೂರ್ಗೆ ಒಂದು ಕರೆ ಬಂತು. ಆ ಕಡೆಯಿಂದ ಮಾತನಾಡಿದವರು ಇದು ಎಮರ್ಜೆನ್ಸಿ, ಆಸ್ಪತ್ರೆಗೆ ಕರೆದೊಯ್ಯಬೇಕಿದೆ. ಎಷ್ಟು ಸಾಧ್ಯವೋ ಅಷ್ಟು ಬೇಗ ಬನ್ನಿ ಎಂದು ಹೇಳಿದರು. ವಾಸ್ತವವಾಗಿ ಏನಾಗಿತ್ತು ಅಂದರೆ, ಗಂಡ-ಹೆಂಡತಿ ಕಷ್ಟದ ಪರಿಸ್ಥಿತಿಯಲ್ಲಿದ್ದರು. ಏಕೆಂದರೆ, ಹೆಂಡತಿ ಹೆರಿಗೆ ನೋವಿನಿಂದ ನರಳುತ್ತಿದ್ದಳು ಎಂದು ಗ್ಲೋಬಲ್ ನ್ಯೂಸ್ ಬುಧವಾರ ವರದಿ ಮಾಡಿದೆ.
ಈ ಬಗ್ಗೆ ಮಾತನಾಡಿರುವ ತೂರ್, ಕರೆ ಮಾಡಿದ ಕೂಡಲೇ ಆ ಸ್ಥಳಕ್ಕೆ ಹೋದೆ. ಅಲ್ಲಿ, ಗರ್ಭಿಣಿ ಇದ್ದಳು. ಆಕೆ ಹರಿಗೆ ನೋವಿನಿಂದ ನರಳುತ್ತಿದ್ದಳು. ಈ ವೇಳೆ ಆಕೆಯ ಗಂಡ, ಆಕೆಯನ್ನು ಹಿಡಿದು ಕ್ಯಾಬ್ ಒಳಗೆ ಕೂರಿಸಲು ಪ್ರಯತ್ನಿಸುತ್ತಿದ್ದನು. ಆ ದಂಪತಿ ತುಂಬಾ ಸಂಕಷ್ಟದಲ್ಲಿರುವುದನ್ನು ನೋಡಿದ ನನಗೆ ಆ ಪರಿಸ್ಥಿತಿಯ ಎಮರ್ಜೆನ್ಸಿ ಏನೆಂದು ಅರಿವಾಯಿತು. ತಕ್ಷಣ ಆಂಬ್ಯುಲೆನ್ಸ್ಗೆ ಕರೆ ಮಾಡುವ ಯೋಚನೆ ಬಂತು ಆದರೆ, ಹವಮಾನ ಪರಿಸ್ಥಿತಿಯನ್ನು ನೋಡಿದಾಗ ಕರೆ ಮಾಡುವುದು ಸರಿಯಲ್ಲ ಅನಿಸಿತು ಎಂದು ತೂರ್ ಹೇಳಿದ್ದಾಗಿ ಸಿಟಿವಿ ವರದಿ ಮಾಡಿದೆ.
ಇನ್ನು ಸಾಕಷ್ಟು ಸಮಯ ಇಲ್ಲ ಅನ್ನೋದು ಗರ್ಭಿಣಿಯ ಬಾಡಿ ಲಾಂಗ್ವೇಜ್ ನೋಡಿ ನನಗೆ ಗೊತ್ತಾಯಿತು. ಹೀಗಾಗಿ, ನಾನೇ ಡ್ರೈವ್ ಮಾಡಿಕೊಂಡು ಹೋಗಲು ನಿರ್ಧಾರ ಮಾಡಿದೆ. ಸುಮಾರು 30 ನಿಮಿಷದ ಪ್ರಯಾಣ ಅದು. ದಾರಿಯುದ್ದಕ್ಕೂ ಗರ್ಭಿಣಿ ನೋವಿನಿಂದ ಕಿರುಚಾಡುತ್ತಾ, ಸೀಟಿನ ಹಿಂಬದಿಗೆ ಒದೆಯುತ್ತಿದ್ದಳು. ಇದರ ನಡುವೆ ಮಾರ್ಗ ಮಧ್ಯೆ ಬರುತ್ತಿದ್ದ ರೆಡ್ ಸಿಗ್ನಲ್ ಲೈಟ್ಸ್ ಆತಂಕವನ್ನು ಹೆಚ್ಚಿಸುತ್ತಿತ್ತು. ಆ ಸಮಯದಲ್ಲಿ ವಾತಾವರಣದ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇತ್ತು. ಅಲ್ಲದೆ, ಬಿರುಗಾಳಿಯ ಹವಾಮಾನ ಮತ್ತು ಜಾರುವ ರಸ್ತೆಗಳಿಂದಾಗಿ ಡ್ರೈವ್ ಮಾಡುವುದು ತುಂಬಾ ಸವಾಲಿನದ್ದಾಗಿತ್ತು. ಆದರೆ, ನನ್ನ ಗಮನವೆಲ್ಲ ಆದಷ್ಟು ಬೇಗ ಗರ್ಭಿಣಿಯನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದರ ಮೇಲಿತ್ತು ಎಂದು ತೂರ್ ಹೇಳಿದ್ದಾಗಿ ಗ್ಲೋಬಲ್ ನ್ಯೂಸ್ ವರದಿ ಮಾಡಿದೆ.
ಆಸ್ಪತ್ರೆಯಿಂದ ಸ್ವಲ್ಪ ದೂರದಲ್ಲಿರುವ ಪೀಟರ್ ಲೌಘೀಡ್ ಸೆಂಟರ್‌ನಲ್ಲಿ, ಹಿಂಬದಿಯ ಸೀಟಿಗೆ ಒದೆಯುವುದು ಮತ್ತು ಕಿರುಚಾಡುವುದು ತಕ್ಷಣ ನಿಂತಿತು. ಏನಾಯಿತು ಎಂದು ಹಿಂದೆ ತಿರುಗಿ ನೋಡಿದಾಗ ಮಗು ಜನಿಸಿತ್ತು. ಆದರೆ, ನಾನು ಕಾರು ಚಲಾಯಿಸುವುದನ್ನು ನಿಲ್ಲಿಸಲಿಲ್ಲ. ಎಷ್ಟು ಸಾಧ್ಯವೋ ಅಷ್ಟು ಬೇಗ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಸೂಕ್ತ ಚಿಕಿತ್ಸೆ ಕೊಡಿಸುವುದು ಒಳಿತು ಅನ್ನೋದು ನನ್ನ ಮನಸ್ಸಿನಲ್ಲಿತ್ತು. ಆಸ್ಪತ್ರೆಗೆ ತಲುಪುತ್ತಿದ್ದಂತೆ, ಅಲ್ಲಿನ ಸಿಬ್ಬಂದಿ ಓಡಿ ಬಂದು ಬಾಣಂತಿ ಹಾಗೂ ಮಗುವನ್ನು ಒಳಗೆ ಕರೆದೊಯ್ದರು. ಆ ಬಳಿಕ ಮಗು ಹಾಗೂ ತಾಯಿ ಆರೋಗ್ಯವಾಗಿ ಇರುವುದಾಗಿ ಆಸ್ಪತ್ರೆ ಸಿಬ್ಬಂದಿ ತಿಳಿಸಿದರು ಎಂದು ತೂರ್ ಹೇಳಿದ್ದಾರೆ.
ಇಬ್ಬರನ್ನು ಪಿಕಪ್ ಮಾಡಿ ಮೂವರನ್ನು ಡ್ರಾಪ್ ಮಾಡಿದ್ದು ನನ್ನ ಜೀವನದ ಮೊದಲ ಅನುಭವ ಎಂದು ನಾಲ್ಕು ವರ್ಷಗಳಿಂದ ಕೆನಡಾದಲ್ಲಿ ಕ್ಯಾಬ್ ಓಡಿಸುತ್ತಿರುವ ತೂರ್ ಹೇಳಿದರು. ಅಲ್ಲದೆ, ಇದೊಂದು ಹೆಮ್ಮೆಯ ಕ್ಷಣ ಅಂತಾನೂ ತಿಳಿಸಿದರು, (ಏಜೆನ್ಸೀಸ್).