ವಿಡಿಯೋದಲ್ಲಿ ಅಮೆರಿಕದ ವೈದ್ಯರು ಪಡೆಯುವ ಚಿಕಿತ್ಸಾ ವೆಚ್ಚ ರಿವೀಲ್ ಮಾಡಿದ ಭಾರತೀಯ
ಅಮೆರಿಕ: ನಮಗೆಲ್ಲ ಗೊತ್ತಿರುವಂತೆ ಸಾಮಾನ್ಯವಾಗಿ ಭಾರತದಲ್ಲಿ ಒಂದು ಹಲ್ಲು ಕೀಳಿಸಲು (Tooth Extraction) 500ರಿಂದ 1000 ರೂ. ತಗಲುತ್ತದೆ. ಆದರೆ, ಅದೇ ಅಮೆರಿಕದಂತ ವಿದೇಶಿ ನೆಲಗಳಲ್ಲಿ ವೈದ್ಯರು ಭಾರತೀಯರ ನಿರೀಕ್ಷೆಗೂ ಮೀರಿದ ಮೊತ್ತವನ್ನು ಫೀಜ್ ರೂಪದಲ್ಲಿ ಪಡೆಯುತ್ತಾರೆ ಎಂಬುದು ಸದ್ಯ ಭಾರಿ ಅಚ್ಚರಿ ಮೂಡಿಸುವ ಸಂಗತಿ. ಇದಕ್ಕೆ ವಲಸೆ ಭಾರತೀಯ ಹಂಚಿಕೊಂಡಿರುವ ವಿಡಿಯೋ ಜ್ವಲಂತ ಸಾಕ್ಷಿ.
ವಿಡಿಯೋದಲ್ಲಿ ಅಮೆರಿಕದಲ್ಲಿರುವ ಭಾರತೀಯ, ನಮ್ಮ ದೇಶದಲ್ಲಿ ಒಂದು ಹಲ್ಲು ಕೀಳಿಲು ಸುಮಾರು 1000 ರೂ. ಪಡೆಯುತ್ತಾರೆ. ಆದರೆ, ಅಮೆರಿಕಾದಲ್ಲಿ ಅದೇ ಒಂದು ಹಲ್ಲಿಗೆ 7 ಲಕ್ಷ ರೂ. ಚಾರ್ಜ್ ಮಾಡಿದ್ದಾರೆ. ಇದು ನಿಜಕ್ಕೂ ಶಾಕಿಂಗ್ ಆಗಿದೆ. ಭಾರತಕ್ಕಿಂತ ತುಂಬ ದುಬಾರಿ ಆಗಿದೆ ಇಲ್ಲಿನ ಚಿಕಿತ್ಸಾ ವೆಚ್ಚ ಎಂದು ನಿತಿನ್ ಮಲ್ಹೋತ್ರಾ ತಮ್ಮ ಇನ್ಸ್ಟಾ ವಿಡಿಯೋದಲ್ಲಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ವಿಪರೀತ ಹಲ್ಲು ನೋವು ಕಾಣಿಸಿಕೊಂಡ ಕಾರಣ, ನಾನು ಇಲ್ಲಿನ ಡೆಂಟಲ್ ಕ್ಲಿನಿಕ್ಗೆ ಹೋಗಿದ್ದೆ. ಅವರು ಹಲ್ಲನ್ನು ಕೀಳಲು ಮತ್ತು ಹೆಚ್ಚಿನ ಚಿಕಿತ್ಸೆಗೆ 8,000 ಡಾಲರ್ ಕೇಳಿದರು. ಅಂದಾಜು 7 ಲಕ್ಷ ರೂ. ಆಗುತ್ತೆ. ನನ್ನ ಬಳಿ ಆರೋಗ್ಯ ವಿಮೆಯಿದ್ದ ಹಿನ್ನೆಲೆ, ಅದನ್ನು ಬಳಸಿಕೊಂಡ ಬಳಿಕ ಚಿಕಿತ್ಸಾ ವೆಚ್ಚವು 2,000 ಡಾಲರ್ (2.37 ಲಕ್ಷ ರೂ.)ಗೆ ಬಂದಿಳಿಯಿತು. ಜತೆಗೆ ಎಕ್ಸ್ ರೇಗಾಗಿಯೇ ಸುಮಾರು 17 ಸಾವಿರ ರೂ. ಖರ್ಚು ಮಾಡಿದ್ದೇನೆ. ಈ ಹಣಕ್ಕೆ ನಾನು ಭಾರತಕ್ಕೆ ಬಂದು ಚಿಕಿತ್ಸೆ ಪಡೆದು, ವಾಪಾಸ್ ಆಗಬಹುದಿತ್ತು ಎಂದು ವಿಡಿಯೋದಲ್ಲಿ ಬೇಸರ ಹೊರಹಾಕಿದ್ದಾರೆ.
ನಿತಿನ್ ಹಂಚಿಕೊಂಡ ವಿಡಿಯೋ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ ಅಮೆರಿಕಾದಲ್ಲಿ ನೆಲೆಸಿರುವ ಅನೇಕರು ಇದು ನಿಜ ಎಂದು ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಮುಕ್ತವಾಗಿ ಕಮೆಂಟ್ ಬಾಕ್ಸ್ನಲ್ಲಿ ವ್ಯಕ್ತಪಡಿಸಿದ್ದಾರೆ. ಅನೇಕ ವಲಸಿಗರು ಭಾರತ ಮತ್ತು ವಿದೇಶಗಳ ನಡುವಿನ ಆರೋಗ್ಯದ ವೆಚ್ಚದಲ್ಲಿನ ಭಾರಿ ವ್ಯತ್ಯಾಸಗಳ ಬಗ್ಗೆ ವಿಡಿಯೋ ಮೂಲಕ ಜನರಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).