ಈಜಿಪ್ಟ್‌ನಲ್ಲಿ ದೊರೆತ ಭಾರತೀಯ ಭಾಷೆಯ ಶಾಸನಗಳು
- ಭಾರತೀಯ ಭಾಷೆಗಳು ಮತ್ತು ಸಂಸ್ಕೃತಿ ಇತಿಹಾಸದಷ್ಟೇ ಪುರಾತನವಾಗಿವೆ
- ಈಜಿಪ್ಟ್‌ನಲ್ಲಿ ಭಾರತೀಯ ಭಾಷೆಗಳಲ್ಲಿ ಬರೆಯಲಾದ 30 ಶಾಸನಗಳು ಪತ್ತೆ
- 20 ಶಾಸನಗಳು ತಮಿಳು ಮತ್ತು 10 ಶಾಸನಗಳು ಸಂಸ್ಕೃತ ಭಾಷಡಯಲ್ಲಿ ದೊರೆತಿವೆ
ಈಜಿಪ್ಟ್: ಭಾರತೀಯ ಭಾಷೆಗಳು ಮತ್ತು ಸಂಸ್ಕೃತಿ ಇತಿಹಾಸದಷ್ಟೇ ಪುರಾತನವಾದದ್ದೂ ಮತ್ತು ಭಾರತೀಯರು ಒಂದು ಕಾಲದಲ್ಲಿ ಪ್ರಪಂಚಾದದ್ಯಂತ ಸಂಪರ್ಕವನ್ನು ಹೊಂದಿದ್ದರು ಎಂದು ಹೇಳಲಾಗುತ್ತದೆ.
ಈ ಮಾತುಗಳಿಗೆ ಪುಷ್ಠಿ ಎಂಬಂತೆ ಇತ್ತೀಚೆಗೆ, ಪ್ರಾಚೀನ ಈಜಿಪ್ಟ್‌ನಲ್ಲಿ ಭಾರತೀಯ ಭಾಷೆಗಳಲ್ಲಿ ಬರೆಯಲಾದ ಸುಮಾರು 30 ಶಾಸನಗಳು (Inscriptions) ದೊರೆತಿದ್ದು ಇವು ಸುಮಾರು 2,000 ವರ್ಷಗಳಷ್ಟು ಪುರಾತನವಾಗಿವೆ ಎಂದು ಹೇಳಲಾಗುತ್ತಿದೆ.
ಫೇರೋಗಳ ಸಮಾಧಿಗಳಿಗೆ ಹೆಸರುವಾಸಿಯಾದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಈಜಿಪ್ಟ್‌ನ ರಾಜರ ಕಣಿವೆಯ ಶಿಲಾ ಕೆತ್ತನೆಯ ಸಮಾಧಿಗಳ ಒಳಗೆ ಈ ಶಾಸನಗಳು ಪತ್ತೆಯಾಗಿದ್ದು, ಇದು ಭಾರತ ಮತ್ತು ಈಜಿಪ್ಟ್ ನಡುವಿನ ಸಮುದ್ರ ವ್ಯಾಪಾರ ನಡೆದಿತ್ತು ಎನ್ನುವುದಕ್ಕೆ ದೊರೆತ ಪುರಾವೆಯಾಗಿದೆ.
ಭಾರತೀಯ ಉಪಖಂಡ ಮತ್ತು ಈಜಿಪ್ಟ್ ನಡುವಿನ ಸಂಬಂಧಕ್ಕೆ ಸಿಕ್ಕ ಪುರಾವೆ
ಪ್ರಾಚೀನ ಥೀಬ್ಸ್‌ನಲ್ಲಿರುವ ರಾಜರ ಕಣಿವೆಯಲ್ಲಿರುವ ಆರು ಶಿಲಾ ಕೆತ್ತನೆಯ ಸಮಾಧಿಗಳಿಂದ ಸುಮಾರು 30 ಶಾಸನಗಳನ್ನು ದಾಖಲಿಸಲಾಗಿದೆ. ಇವುಗಳಲ್ಲಿ, 20 ತಮಿಳು (ತಮಿಳು-ಬ್ರಾಹ್ಮಿ) ಭಾಷೆಯಲ್ಲಿದ್ದರೆ, ಉಳಿದ 10 ಸಂಸ್ಕೃತ ಮತ್ತು ಪ್ರಾಕೃತ ಭಾಷೆಯಲ್ಲಿವೆ. ಶಾಸನಗಳು ಕ್ರಿ.ಶ. 1 ಮತ್ತು 3 ನೇ ಶತಮಾನಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತಿದೆ. ಈ ಅವಧಿಯಲ್ಲಿ ಭಾರತೀಯ ಉಪಖಂಡದ ವಿವಿಧ ಭಾಗಗಳಿಂದ ಜನರು ಮಸಾಲೆಗಳು ಮತ್ತು ಇತರ ಅಮೂಲ್ಯ ವಸ್ತುಗಳ ವ್ಯಾಪಾರಕ್ಕಾಗಿ ಈಜಿಪ್ಟ್‌ಗೆ ಪ್ರಯಾಣಿಸುತ್ತಿದ್ದರು ಎನ್ನುವುದನ್ನು ಇದು ಸೂಚಿಸುತ್ತದೆ.
ಈಜಿಪ್ಟ್‌ನಲ್ಲಿ ತಮಿಳು, ಸಂಸ್ಕೃತ ಶಾಸನಗಳ ಆವಿಷ್ಕಾರ
ಸ್ವಿಟ್ಜರ್‌ಲ್ಯಾಂಡ್‌ನ ಲೌಸನ್ನೆಯಲ್ಲಿರುವ ಸ್ಲಾವಿಕ್ ಮತ್ತು ದಕ್ಷಿಣ ಏಷ್ಯಾ ಅಧ್ಯಯನ ವಿಭಾಗದ (SLAS) ಪ್ರೊಫೆಸರ್ ಇಂಗೋ ಸ್ಟ್ರಾಚ್ ಮತ್ತು ಫ್ರಾನ್ಸ್‌ನ ಪ್ಯಾರಿಸ್‌ನ ಪ್ರೊಫೆಸರ್ ಷಾರ್ಲೆಟ್ ಸ್ಕ್ಮಿಡ್ ಅವರು ಈ ಸಂಶೋಧನೆಗಳನ್ನು ಬಹಿರಂಗಪಡಿಸಿದ್ದಾರೆ. ವರದಿಗಳ ಪ್ರಕಾರ, ತಮಿಳುನಾಡು ರಾಜ್ಯ ಪುರಾತತ್ವ ಇಲಾಖೆ (TNSDA) ಆಯೋಜಿಸಿದ್ದ ತಮಿಳು ಶಿಲಾಶಾಸನದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಈ ಘೋಷಣೆ ಮಾಡಲಾಗಿದೆ.
ಈಜಿಪ್ಟ್‌ನಲ್ಲಿ ತಮಿಳು ಶಾಸನಗಳನ್ನು ನೋಡಿದ್ದು ನಾನು ನಂಬಲು ಸಾಧ್ಯವಾಗಲಿಲ್ಲ. ಸಮಾಧಿಗಳಿಗೆ ಲಕ್ಷಾಂತರ ಜನರು ನಿಯಮಿತವಾಗಿ ಭೇಟಿ ನೀಡಿದ್ದಾರೆ, ಆದರೆ ಯಾರೂ ಅವುಗಳನ್ನು ಕಂಡುಕೊಂಡಿಲ್ಲ. ಆದರೆ ಸಮಾಧಿ ಸಂಖ್ಯೆ 14 ರಲ್ಲಿ ಭಾರತೀಯ ಭಾಷೆಯಲ್ಲಿ ಕೆತ್ತನೆ ಮಾಡಿರುವುದು ಕಂಡುಬಂದಿದೆ ಎಂದು ಪ್ರೊಫೆಸರ್ ಇಂಗೋ ಸ್ಟ್ರಾಚ್ ತಿಳಿಸಿದ್ದಾರೆ.
ಭಾರತ ಮತ್ತು ಪಶ್ಚಿಮದ ನಡುವಿನ ವ್ಯಾಪಾರ ಪ್ರಯಾಣ ಬಹಿರಂಗ
ಟಿಎನ್‌ಎಸ್‌ಡಿಎಯ ಸಲಹೆಗಾರ ಪ್ರೊ. ಕೆ.ರಾಜನ್ ಪ್ರಾಚೀನ ಭಾರತವು ಸಿಂಧೂ ಕಣಿವೆ ನಾಗರಿಕತೆಯಿಂದ ಆರಂಭಗೊಂಡು ಆರಂಭಿಕ ಐತಿಹಾಸಿಕ ಅವಧಿಯವರೆಗೆ ವ್ಯಾಪಕವಾದ ಸಮುದ್ರ ಮತ್ತು ಸಾಗರದಾಚೆಯ ವ್ಯಾಪಾರ ಜಾಲಗಳನ್ನು ನಿರ್ವಹಿಸುತ್ತಿತ್ತು ಎಂದು ಹೇಳಿದರು. ಭಾರತದಿಂದ ಪಶ್ಚಿಮಕ್ಕೆ ಸರಕುಗಳು ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದಕ್ಕೆ ಈ ಶಾಸನಗಳೇ ಪುರಾವೆಗಳಾಗಿವೆ ಎಂದು ಅವರು ಹೇಳಿದರು.
ಸಿಂಧೂ ಕಣಿವೆ ನಾಗರಿಕತೆಯ ನಂತರ, ಭಾರತದ ಪಶ್ಚಿಮ ಮತ್ತು ಪೂರ್ವ ಕರಾವಳಿಗಳಲ್ಲಿ ಆರಂಭಿಕ ಐತಿಹಾಸಿಕ ಯುಗದಲ್ಲಿ ವ್ಯಾಪಾರದ ಭಾಷೆಯಾಗಿ ಸಂಸ್ಕೃತ ಮತ್ತು ತಮಿಳನ್ನು ಬಳಸಲಾಗುತ್ತಿತ್ತು ಎಂದು ಈ ಸಂಶೋಧನೆ ತಿಳಿಸಿದೆ ಎಂದು ಹೇಳಿದರು,(ಏಜನ್ಸೀಸ್).