ನಮ್ಮ ವಾಯುಪ್ರದೇಶದಲ್ಲಿ ಭಾರತೀಯ ವಿಮಾನಗಳು ಹಾರಾಡುವಂತಿಲ್ಲ! ಮತ್ತೇ ನಿಷೇಧ ವಿಸ್ತರಿಸಿದ ಪಾಕಿಸ್ತಾನ | Pakistan Airspace Ban 
ವಿದೇಶ

ನಮ್ಮ ವಾಯುಪ್ರದೇಶದಲ್ಲಿ ಭಾರತೀಯ ವಿಮಾನಗಳು ಹಾರಾಡುವಂತಿಲ್ಲ! ಮತ್ತೇ ನಿಷೇಧ ವಿಸ್ತರಿಸಿದ ಪಾಕಿಸ್ತಾನ | Pakistan Airspace Ban

ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ಕರಾಚಿ ಮತ್ತು ಲಾಹೋರ್ ಎಂಬ ಎರಡು ವಿಮಾನ ಮಾಹಿತಿ ಪ್ರದೇಶಗಳಾಗಿ ವಿಂಗಡಿಸಿದೆ. ಇತ್ತೀಚಿನ ನಿಷೇಧವು ಈ ಎರಡೂ ಪ್ರದೇಶಗಳಿಗೂ ಅನ್ವಯಿಸುತ್ತದೆ.

ನವದೆಹಲಿ: ವೈರಿ ರಾಷ್ಟ್ರ ಪಾಕಿಸ್ತಾನ ಮತ್ತೊಮ್ಮೆ ಭಾರತೀಯ ವಿಮಾನಗಳ ಮೇಲಿನ ವಾಯುಪ್ರದೇಶ ನಿಷೇಧವನ್ನು ವಿಸ್ತರಿಸಿದೆ. ಈ ಬ್ಯಾನ್​ ಇನ್ನೊಂದು ತಿಂಗಳು ಹೀಗೆ ಮುಂದುವರಿಯಲಿದೆ ಎಂದು ಪಾಕಿಸ್ತಾನ ಸರ್ಕಾರವು ತಿಳಿಸಿದೆ.

ಭಾರತದಲ್ಲಿ ನೋಂದಾಯಿಸಲ್ಪಟ್ಟ ವಿಮಾನಗಳ ಜತೆಗೆ, ಭಾರತೀಯ ವಿಮಾನಯಾನ ಸಂಸ್ಥೆಗಳು ಗುತ್ತಿಗೆ ಪಡೆದ ವಿಮಾನಗಳ ಮೇಲೂ ಈ ನಿರ್ಬಂಧಗಳು ಮುಂದುವರಿಯುತ್ತವೆ. ಇದು ಭಾರತೀಯ ಮಿಲಿಟರಿ ವಿಮಾನಗಳಿಗೂ ಅನ್ವಯಿಸುತ್ತದೆ ಎಂದು ಹೇಳಲಾಗಿದೆ. ಮಾಹಿತಿಗಳ ಪ್ರಕಾರ, ಈ ನಿರ್ಬಂಧಗಳು ನವೆಂಬರ್ 24ರ ಬೆಳಗ್ಗೆ 5.59 ರವರೆಗೆ ಜಾರಿಯಲ್ಲಿರಲಿದೆ.

'ಆಪರೇಷನ್ ಸಿಂಧೂರ್‌' ಬಳಿಕ ವಾಯುಪ್ರದೇಶ ನಿಷೇಧ

ಕಳೆದ ವರ್ಷ ಏಪ್ರಿಲ್ 23ರಂದು ಪಾಕಿಸ್ತಾನವು ಭಾರತೀಯ ವಿಮಾನಗಳ ಮೇಲೆ ವಾಯುಪ್ರದೇಶ ನಿಷೇಧವನ್ನು ವಿಧಿಸಿ, ಸಂಪೂರ್ಣ ನಿರ್ಬಂಧಗಳನ್ನು ಹೇರಿತು. ಅಂದಿನಿಂದ ಈ ಬ್ಯಾನ್​ ಅನ್ನು ವಿಸ್ತರಿಸಲಾಗಿದೆ. ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ಕರಾಚಿ ಮತ್ತು ಲಾಹೋರ್ ಎಂಬ ಎರಡು ವಿಮಾನ ಮಾಹಿತಿ ಪ್ರದೇಶಗಳಾಗಿ ವಿಂಗಡಿಸಿದೆ. ಇತ್ತೀಚಿನ ನಿಷೇಧವು ಈ ಎರಡೂ ಪ್ರದೇಶಗಳಿಗೂ ಅನ್ವಯಿಸುತ್ತದೆ.

ಕಳೆದ ವರ್ಷ ಜನವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯ ಬಳಿಕ ಎರಡೂ ದೇಶಗಳ ನಡುವೆ ಉದ್ವಿಗ್ನತೆ ದುಪ್ಪಟ್ಟಾಗಿದ್ದು, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಲು ಭಾರತ 'ಆಪರೇಷನ್ ಸಿಂಧೂರ'ವನ್ನು ಪ್ರಾರಂಭಿಸಿತು. ಅದಾದ ನಂತರ, ಪಾಕ್ ಸೇನೆಯು ಭಾರತದ ಮೇಲೆ ದಾಳಿ ಮಾಡಲು ಪ್ರಯತ್ನಿಸಿದಾಗ, ಭಾರತವು ಕ್ಷಿಪಣಿಗಳು ಮತ್ತು ವಾಯುದಾಳಿಗಳಿಂದ ಪಾಕಿಸ್ತಾನಿ ವಾಯುನೆಲೆಗಳನ್ನು ಛಿದ್ರಗೊಳಿಸಿತು.

ರಾಡಾರ್ ಕೇಂದ್ರಗಳು, ವಿಮಾನ ಹ್ಯಾಂಗರ್‌ಗಳು ಮತ್ತು ರನ್‌ವೇಗಳನ್ನು ಭಾರತೀಯ ಸೇನೆ ಚಿಂದಿ ಉಡಾಯಿಸಿತು. ಅಂದಿನಿಂದ, ಪಾಕಿಸ್ತಾನವು ಈ ನಿಷೇಧವನ್ನು ವಿಸ್ತರಿಸುತ್ತ ಹೋಗುತ್ತಿದೆ. ಈಗ ಮತ್ತೊಮ್ಮೆ ಅದೇ ರೀತಿ ನವೆಂಬರ್​ವರೆಗೂ ವಿಸ್ತರಣೆ ಮಾಡಿದೆ. ಪಾಕಿಸ್ತಾನದ ನಡೆಗೆ ಪ್ರತಿಕ್ರಿಯೆಯಾಗಿ, ಭಾರತವು ಏಪ್ರಿಲ್ 30, 2025ರಿಂದ ಪಾಕ್​ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಅಲ್ಲಿಗೆ, ಎರಡೂ ದೇಶಗಳು ಪರಸ್ಪರ ತಮ್ಮ ವಾಯುಪ್ರದೇಶವನ್ನು ಬ್ಯಾನ್​ ಮಾಡಿವೆ.

ಅಂತಾರಾಷ್ಟ್ರೀಯ ಪ್ರಯಾಣಗಳಿಗೆ ಎಫೆಕ್ಟ್​

ಪಾಕಿಸ್ತಾನದ ವಾಯುಪ್ರದೇಶ ಮುಚ್ಚಿರುವುದರಿಂದ ಭಾರತದ ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಆರ್ಥಿಕವಾಗಿ ಭಾರಿ ಹೊಡೆತ ಬಿದ್ದಿದೆ. ಯುರೋಪ್ ಮತ್ತು ಮಧ್ಯಪ್ರಾಚ್ಯಕ್ಕೆ ವಿಮಾನಗಳನ್ನು ಅರೇಬಿಯನ್ ಸಮುದ್ರದ ಮೇಲೆ ತಿರುಗಿಸಲಾಗುತ್ತಿದ್ದು, ದೆಹಲಿಯಂತಹ ಉತ್ತರ ಭಾರತದ ವಿಮಾನ ನಿಲ್ದಾಣಗಳಿಂದ ಅಂತಾರಾಷ್ಟ್ರೀಯ ವಿಮಾನಗಳು ಹೆಚ್ಚುವರಿ ಸಮಯ ಮತ್ತು ಇಂಧನ ವೆಚ್ಚವನ್ನು ಭರಿಸುವಂತಾಗಿದೆ,(ಏಜೆನ್ಸೀಸ್).