ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಜನಾಂಗೀಯ ದಾಳಿ? WEB
ವಿದೇಶ

ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಜನಾಂಗೀಯ ದಾಳಿ? ಮಹಿಳೆ ಮೇಲೆ ಮೊಟ್ಟೆ ಎಸೆದ ವಿಡಿಯೋ ವೈರಲ್ | Australia

ವಿದೇಶಗಳಲ್ಲಿ ನೆಲೆಸಿರುವ ಭಾರತೀಯರ ಮೇಲೆ ಜನಾಂಗೀಯ ದ್ವೇಷದ ಘಟನೆಗಳು ನಡೆಯುತ್ತಿವೆಯೇ ಎಂಬ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಆಸ್ಟ್ರೇಲಿಯಾದಲ್ಲಿ ರಸ್ತೆ ಬದಿಯ ಆಹಾರ ಮಳಿಗೆಯ ಬಳಿ ಕುಳಿತು ಊಟ ಮಾಡುತ್ತಿದ್ದ ಭಾರತೀಯ ಕುಟುಂಬದ ಮೇಲೆ ಚಲಿಸುತ್ತಿದ್ದ ವಾಹನದಿಂದ ಮೊಟ್ಟೆಗಳನ್ನು ಎಸೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.Australia

ಸಿಡ್ನಿ: ವಿದೇಶಗಳಲ್ಲಿ ನೆಲೆಸಿರುವ ಭಾರತೀಯರ ಮೇಲೆ ಜನಾಂಗೀಯ ದ್ವೇಷದ ಘಟನೆಗಳು ನಡೆಯುತ್ತಿವೆಯೇ ಎಂಬ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಆಸ್ಟ್ರೇಲಿಯಾದಲ್ಲಿ ರಸ್ತೆ ಬದಿಯ ಆಹಾರ ಮಳಿಗೆಯ ಬಳಿ ಕುಳಿತು ಊಟ ಮಾಡುತ್ತಿದ್ದ ಭಾರತೀಯ ಕುಟುಂಬದ ಮೇಲೆ ಚಲಿಸುತ್ತಿದ್ದ ವಾಹನದಿಂದ ಮೊಟ್ಟೆಗಳನ್ನು ಎಸೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯನ್ನು ವಿವರಿಸಿ ಭಾರತೀಯ ಮೂಲದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಭಾರತೀಯ ಕುಟುಂಬದ ಮೇಲೆ ಮೊಟ್ಟೆ ಎಸೆದ ದುಷ್ಕರ್ಮಿಗಳು

ಸಿಡ್ನಿಯಲ್ಲಿ ವಾಸಿಸುತ್ತಿರುವ ಅಂಜಲಿ ಶರ್ಮಾ ಎಂಬ ಮಹಿಳೆ ಎರಡು ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ತಾವು ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಕಣ್ಣಿಗೆ ಬಿದ್ದಿದೆ ಎಂದು ಅವರು ತಿಳಿಸಿದ್ದಾರೆ. ರಸ್ತೆ ಬದಿಯ ಫುಡ್ ಟ್ರಕ್ ಬಳಿ ಭಾರತೀಯ ಕುಟುಂಬವೊಂದು ಕುಳಿತು ಊಟ ಮಾಡುತ್ತಿತ್ತು. ಕುಟುಂಬದಲ್ಲಿ ಮಕ್ಕಳು ಸೇರಿದಂತೆ ವಯಸ್ಕರೂ ಇದ್ದರು. ಎಲ್ಲರೂ ತಮ್ಮ ಪಾಡಿಗೆ ತಾವು ಸಮಯ ಕಳೆಯುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಯುಟ್ ಟ್ರಕ್ (Ute Truck) ಎಂಬ ವಾಹನದಲ್ಲಿದ್ದವರು ಕುಟುಂಬದವರ ಮೇಲೆ ಮೊಟ್ಟೆಗಳನ್ನು ಎಸೆದು ಮುಂದೆ ಸಾಗಿದ್ದಾರೆ ಎಂದು ಅಂಜಲಿ ಆರೋಪಿಸಿದ್ದಾರೆ.

ಇದು ಜನಾಂಗೀಯ ದ್ವೇಷವೇ?

ಘಟನೆಯನ್ನು ಕಂಡು ತಮಗೆ ತುಂಬಾ ಬೇಸರವಾಯಿತು ಎಂದು ಅಂಜಲಿ ವಿಡಿಯೋದಲ್ಲಿ ಹೇಳಿದ್ದಾರೆ. ಇದನ್ನು ಜನಾಂಗೀಯ ದ್ವೇಷ ಎಂದು ಕರೆಯಬೇಕೋ ಅಥವಾ ಭಾರತೀಯರ ಮೇಲಿನ ದ್ವೇಷ ಎಂದು ಕರೆಯಬೇಕೋ ಗೊತ್ತಿಲ್ಲ. ಆದರೆ ಈ ಘಟನೆ ನೋಡಿ ನನಗೆ ತುಂಬಾ ನೋವಾಯಿತು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಆ ಕುಟುಂಬದವರು ಯಾರಿಗೂ ತೊಂದರೆ ನೀಡದೆ ತಮ್ಮಷ್ಟಕ್ಕೆ ತಾವು ಕುಳಿತಿದ್ದರು. ಆದರೂ ಅವರ ಮೇಲೆ ಈ ರೀತಿ ವರ್ತಿಸಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಘಟನೆ ಕುರಿತು ಪೊಲೀಸರಿಗೂ ಕರೆ ಮಾಡಿರುವುದಾಗಿ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಪೊಲೀಸರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದು ತಮಗೆ ಖಚಿತವಿಲ್ಲ ಎಂದಿದ್ದಾರೆ.ವಿಡಿಯೋದಲ್ಲಿ ಯಾರೂ ಇಂತಹ ವರ್ತನೆಗೆ ಅರ್ಹರಲ್ಲ. ಪರಸ್ಪರ ಗೌರವ ನೀಡುವುದು ಕನಿಷ್ಠ ಮಾನವೀಯತೆ' ಎಂಬ ಸಂದೇಶವನ್ನೂ ಹಂಚಿಕೊಳ್ಳಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ

ಅಂಜಲಿ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ವಿದೇಶಗಳಲ್ಲಿ ಭಾರತೀಯರ ವಿರುದ್ಧ ಇಂತಹ ಘಟನೆಗಳು ನಡೆಯುತ್ತಿರುವ ಬಗ್ಗೆ ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಘಟನೆಯನ್ನು ಖಂಡಿಸಿದ್ದಾರೆ. ಕೆಲವು ಕಾಮೆಂಟ್‌ಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳೂ ಕಾಣಿಸಿಕೊಂಡಿವೆ.

ಇದನ್ನೂ ಓದಿ : ಒಂದೇ ದಿನ 19 ಮದುವೆಗಳ ಸಂಭ್ರಮ: ದಕ್ಷಿಣ ದೆಹಲಿಯಲ್ಲಿ ಭಾರಿ ಟ್ರಾಫಿಕ್ ಆತಂಕ, ಸವಾರರಿಗೆ ಅಲರ್ಟ್!South Delhi traffic

ಬ್ರಿಸ್ಬೇನ್‌ನಲ್ಲೂ ಭಾರತೀಯ ಕುಟುಂಬಕ್ಕೆ ಕಿರುಕುಳ

ಇದಕ್ಕೂ ಮೊದಲು ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ಭಾರತೀಯ ಕುಟುಂಬವೊಂದು ಜನಾಂಗೀಯ ನಿಂದನೆಗೆ ಗುರಿಯಾಗಿತ್ತು. ಈ ಘಟನೆಯಿಂದ ಕುಟುಂಬದ ಸದಸ್ಯರು ತೀವ್ರ ಭಯಕ್ಕೊಳಗಾಗಿದ್ದು, ತಮ್ಮ ಬಾಡಿಗೆ ಮನೆಯನ್ನು ಖಾಲಿ ಮಾಡಿ ಭಾರತಕ್ಕೆ ಮರಳುವ ಬಗ್ಗೆಯೂ ಯೋಚಿಸುತ್ತಿದ್ದಾರೆ ಎಂದು ವರದಿಯಾಗಿತ್ತು.

ಈ ಪ್ರಕರಣದಲ್ಲಿ 19 ವರ್ಷದ ಹಾರ್ಲಿ ಆಡಮ್ಸ್ ಎಂಬ ಯುವಕನನ್ನು ಪೊಲೀಸರು ಬಂಧಿಸಿ, ದ್ವೇಷಾಪರಾಧಕ್ಕೆ ಸಂಬಂಧಿಸಿದ ಆರೋಪಗಳನ್ನು ದಾಖಲಿಸಿದ್ದರು. ಬ್ರಿಸ್ಬೇನ್‌ನ ಪೂರ್ವ ಭಾಗದಲ್ಲಿರುವ ಮಾರ್ನಿಂಗ್‌ಸೈಡ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಕುಟುಂಬದ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದಲ್ಲದೆ, ಅವರು ನೆಲೆಸಿದ್ದ ಅಪಾರ್ಟ್‌ಮೆಂಟ್ ಕಟ್ಟಡವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಆರೋಪವೂ ಆತನ ಮೇಲಿದೆ.

ಆಸ್ಟ್ರೇಲಿಯಾದಲ್ಲಿ ಭಾರತೀಯ ಕುಟುಂಬಗಳ ವಿರುದ್ಧ ವರದಿಯಾಗುತ್ತಿರುವ ಇಂತಹ ಘಟನೆಗಳು ವಿದೇಶಗಳಲ್ಲಿ ನೆಲೆಸಿರುವ ಭಾರತೀಯರ ಸುರಕ್ಷತೆ ಮತ್ತು ಜನಾಂಗೀಯ ತಾರತಮ್ಯದ ಕುರಿತು ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿವೆ.