ಲೆಬನಾನ್​ ಮೇಲೆ ಇಸ್ರೇಲ್​ ದಾಳಿ; ದಾಳಿಗೆ ಭಾರತ ಸಂತಾಪ  
ವಿದೇಶ

ಲೆಬನಾನ್​ ಮೇಲೆ ಇಸ್ರೇಲ್​ ದಾಳಿ: ನಾಗರಿಕರ ಸಾವಿಗೆ ಭಾರತ ಸಂತಾಪ! India Concerned Israel attacks Lebanon

ಪ್ರಮುಖ ಮುಖ್ಯಾಂಶಗಳು

  • ಲೆಬನಾನ್​ ಮೇಲೆ ಇಸ್ರೇಲ್​ ದಾಳಿ
  • ದಾಳಿಗೆ ಭಾರತ ಸಂತಾಪ
  • ಅಮೆರಿಕದಿಂದ ಮುಂದುವರಿದ ಶಾಂತಿ ಮಾತುಕತೆ
ನವದೆಹಲಿ: ಇಡೀ ವಿಶ್ವವೇ ಶಾಂತಿಗಾಗಿ ಕಾಯುತ್ತಿರುವಾಗ, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಕ್ಷಣಕ್ಷಣಕ್ಕೂ ಭೀಕರವಾಗುತ್ತಿದೆ. ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಮತ್ತು ಅಮೆರಿಕ ನಡುವೆ ಕದನ ವಿರಾಮ ಘೋಷಿಸಿದ್ದರು. ಆದರೆ ಈ ಒಪ್ಪಂದವಾಗಿ ಎರಡು ದಿನ ಕಳೆಯುವ ಮೊದಲೇ ಇಸ್ರೇಲ್ ನಡೆಸಿದ ಭೀಕರ ವೈಮಾನಿಕ ದಾಳಿಯಿಂದ ಲೆಬನಾನ್ ಸ್ಮಶಾನ ಸದೃಶವಾಗಿದೆ. ಈ ಘಟನೆಯ ಬಗ್ಗೆ ಭಾರತ (India Concerned Israel attacks Lebanon) ಈಗ ಗಂಭೀರ ಕಳವಳ ವ್ಯಕ್ತಪಡಿಸಿದೆ.

ಲೆಬನಾನ್‌ನಲ್ಲಿ ರಕ್ತಪಾತ

ಲೆಬನಾನ್‌ನ ರಾಜಧಾನಿ ಬೈರುತ್ ಸೇರಿದಂತೆ ಹಲವು ಭಾಗಗಳ ಮೇಲೆ ಇಸ್ರೇಲ್ ಬುಧವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಬರೋಬ್ಬರಿ 300ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಫೆಬ್ರವರಿ 28ರಂದು ಯುದ್ಧ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ನಡೆದ ದಾಳಿಗಳಲ್ಲಿ ಇದೇ ಅತ್ಯಂತ ಮಾರಕ ದಿನ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.
ಭಾರತಕ್ಕೆ ಯಾಕೆ ಆತಂಕ?
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲೆಬನಾನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಅತ್ಯಂತ ಚಿಂತಾಜನಕವಾಗಿವೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ, ಲೆಬನಾನ್‌ನಲ್ಲಿ ಶಾಂತಿ ಸ್ಥಾಪನೆಗಾಗಿ ವಿಶ್ವಸಂಸ್ಥೆಯ ಮಧ್ಯಂತರ ಪಡೆ (UNIFIL) ನಿಯೋಜಿತವಾಗಿದೆ ಮತ್ತು ಈ ಪಡೆಯಲ್ಲಿ ಭಾರತೀಯ ಸೈನಿಕರು ಕೂಡ ಇದ್ದಾರೆ. ಅಲ್ಲಿನ ಅಸ್ಥಿರತೆ ಭಾರತೀಯ ಯೋಧರ ಸುರಕ್ಷತೆಗೂ ಆತಂಕ ತಂದಿದೆ.
ಜೊತೆಗೆ, ಲೆಬನಾನ್‌ನಲ್ಲಿರುವ ಭಾರತೀಯ ಸಮುದಾಯದ ರಕ್ಷಣೆ ಬಗ್ಗೆಯೂ ರಾಯಭಾರ ಕಚೇರಿ ನಿರಂತರ ಸಂಪರ್ಕದಲ್ಲಿದೆ. ನಾಗರಿಕರ ರಕ್ಷಣೆ ನಮ್ಮ ಮೊದಲ ಆದ್ಯತೆ, ಅಂತರಾಷ್ಟ್ರೀಯ ಕಾನೂನುಗಳನ್ನು ಎಲ್ಲರೂ ಪಾಲಿಸಬೇಕು ಎಂದು ಭಾರತ ಇಸ್ರೇಲ್ ಮತ್ತು ಲೆಬನಾನ್‌ಗೆ ನೆನಪಿಸಿದೆ.

ಮಾತುಕತೆ ನಡುವೆಯೇ ಮಿಸೈಲ್ ದಾಳಿ

ಒಂದೆಡೆ ಮುಂದಿನ ವಾರ ವಾಷಿಂಗ್ಟನ್‌ನಲ್ಲಿ ಇಸ್ರೇಲ್ ಮತ್ತು ಲೆಬನಾನ್ ನಡುವೆ ನೇರ ಮಾತುಕತೆಗಳು ಆರಂಭವಾಗುವ ನಿರೀಕ್ಷೆಯಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳುತ್ತಿದ್ದಾರೆ. ಆದರೆ, ಇನ್ನೊಂದೆಡೆ ಇಸ್ರೇಲ್ ದಾಳಿ ನಿಲ್ಲಿಸುತ್ತಿಲ್ಲ.
ಇದಕ್ಕೆ ಪ್ರತೀಕಾರ ಎಂಬಂತೆ ಹಿಜ್ಬೊಲ್ಲಾ ಸಂಘಟನೆ ಇಸ್ರೇಲ್‌ನ ಅಶ್ಡೋಡ್ ನೌಕಾ ನೆಲೆಯ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಶತ್ರುಗಳು ಕದನ ವಿರಾಮವನ್ನು ಉಲ್ಲಂಘಿಸಿ ಬೈರುತ್ ಮೇಲೆ ದಾಳಿ ಮಾಡುತ್ತಿದ್ದಾರೆ, ಅದಕ್ಕೆ ನಾವು ತಕ್ಕ ಉತ್ತರ ನೀಡಿದ್ದೇವೆ ಎಂದು ಹಿಜ್ಬೊಲ್ಲಾ ಗುಡುಗಿದೆ.

ಟ್ರಂಪ್ ಶಾಂತಿ ಸೂತ್ರಕ್ಕೆ ಇಸ್ರೇಲ್ ಬ್ರೇಕ್?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಂದ ಕದನ ವಿರಾಮ ಯೋಜನೆಯಲ್ಲಿ ಲೆಬನಾನ್ ಸೇರಿಲ್ಲ ಎಂದು ನೆತನ್ಯಾಹು ವಾದಿಸುತ್ತಿದ್ದಾರೆ. ಆದರೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಮೆರಿಕವು ಶಾಂತಿ ಅಥವಾ ಯುದ್ಧದ ನಡುವೆ ಯಾವುದಾದರೂ ಒಂದನ್ನು ಆರಿಸಿಕೊಳ್ಳಬೇಕು, ಇಸ್ರೇಲ್‌ನ ಈ ದ್ವಂದ್ವ ನೀತಿ ನಡೆಯದು ಎಂದು ಅವರು ಟೀಕಿಸಿದ್ದಾರೆ,(ಏಜನ್ಸೀಸ್​).