ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಕಾಲ ಅಮೆರಿಕಾದ ಅನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತೈಲ ಬಿಕ್ಕಟ್ಟಿನ ಒತ್ತಡವನ್ನು ಕಡಿಮೆ ಮಾಡಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಶನಿವಾರ(ಮಾ. 07) ಏರ್ ಫೋರ್ಸ್ ಒನ್ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಟ್ರಂಪ್, ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಒತ್ತಡವನ್ನು ಸ್ವಲ್ಪ ಕಡಿಮೆ ಮಾಡಲು ಅಂತಹ ಕ್ರಮಗಳನ್ನು ತೆಗೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ವಿರುದ್ಧ ಕಿಡಿ
ಇರಾನ್ ವಿರುದ್ಧದ ಇಸ್ರೇಲ್-ಅಮೆರಿಕಾ ಮಿಲಿಟರಿ ಕಾರ್ಯಾಚರಣೆಯ ಆರಂಭದಲ್ಲಿ ತಮ್ಮ ಸೇನಾ ನೆಲೆ ಉಪಯೋಗಿಸಿಕೊಳ್ಳಲು ಅವಕಾಶ ನೀಡದ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ವಿರುದ್ಧ, ಯುದ್ಧ ಮುಗಿದ ಮೇಲೆ ಸಹಾಯಕ್ಕೆ ಬರುವವರು ನಮಗೆ ಅಗತ್ಯವಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ.
ಈ ಕುರಿತು ತಮ್ಮ ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿರುವ ಟ್ರಂಪ್, ಇರಾನ್‌ನೊಂದಿಗಿನ ಸಂಘರ್ಷದ ಸಮಯದಲ್ಲಿ ಬ್ರಿಟಿಷ್ ಬೆಂಬಲದ ಕೊರತೆಯನ್ನು ನೆನಪಿಟ್ಟುಕೊಳ್ಳುತ್ತೇನೆ. ಒಂದು ಕಾಲದಲ್ಲಿ ನಮ್ಮ ಬಹುದೊಡ್ಡ ಮಿತ್ರ ರಾಷ್ಟ್ರವಾಗಿದ್ದ ಯುನೈಟೆಡ್ ಕಿಂಗ್‌ಡಮ್, ಅಂತಿಮವಾಗಿ ಮಧ್ಯಪ್ರಾಚ್ಯಕ್ಕೆ ಎರಡು ವಿಮಾನವಾಹಕ ನೌಕೆಗಳನ್ನು ಕಳುಹಿಸುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ. ಯುದ್ಧ ಮುಗಿದ ನಂತರ ಅಮೆರಿಕದೊಂದಿಗೆ ಬರುತ್ತೇವೆ ಎಂದು ಹೇಳುವವರು ತಮಗೆ ಅಗತ್ಯವಿಲ್ಲ ಎಂದಿದ್ದಾರೆ.
ಇನ್ನೂ ಇರಾನ್ ಮೇಲಿನ ಆರಂಭಿಕ ದಾಳಿಗಳನ್ನು ಬೆಂಬಲಿಸಲು ಅಮೆರಿಕದ ಪಡೆಗಳು ಬ್ರಿಟಿಷ್ ನೆಲೆಗಳನ್ನು ಬಳಸಲು ಅವಕಾಶ ನೀಡದಿರುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಕೀರ್ ಸ್ಟಾರ್ಮರ್, ಯಾವುದೇ ಮಿಲಿಟರಿ ಕ್ರಮವು ಕಾನೂನುಬದ್ಧ ಮತ್ತು ಉತ್ತಮವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಮಯ ತೆಗೆದುಕೊಂಡಿತು ಎಂದು ಹೇಳಿದ್ದಾರೆ.
ಬ್ರಿಟನ್ ರಕ್ಷಣಾ ಸಚಿವಾಲಯ ಶನಿವಾರ(ಮಾ. 07) ವಿಮಾನವಾಹಕ ನೌಕೆ ಪ್ರಿನ್ಸ್ ಆಫ್ ವೇಲ್ಸ್ ಅನ್ನು ಮಧ್ಯಪ್ರಾಚ್ಯಕ್ಕೆ ನಿಯೋಜಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಮತ್ತು ಇರಾನ್ ವಿರುದ್ಧ ಕ್ಷಿಪಣಿ ದಾಳಿಗೆ ಬ್ರಿಟನ್ ಸೇನಾ ನೆಲೆಗಳನ್ನು ಬಳಸಿಕೊಳ್ಳಲು ಅನುಮತಿ ನೀಡಿದೆ (ಏಜೆನ್ಸೀಸ್).