ಇಮ್ರಾನ್ ಖಾನ್ ಬೆಂಬಲಿಸಿ ಪ್ರತಿಭಟನೆ
Imran Khan: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಲ್ಲಿ ಸಾವಿನ ವದಂತಿಯನ್ನು ಅಲ್ಲಗೆಳೆದಿರುವ ಅಧಿಕಾರಿಗಳು, ಇಂದು(ಡಿ. 08) ಪಿಟಿಐ( ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್) ಪ್ರತಿಭಟನೆಯ ಬೆದರಿಕೆ ಹಿನ್ನೆಲೆ ಇಮ್ರಾನ್ ಸಹೋದರರಿಯಲ್ಲಿ ಒಬ್ಬರಿಗೆ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿದೆ ಎಂದು ವರದಿಯಾಗಿದೆ.
ಇಮ್ರಾನ್ ಖಾನ್ ಅವರ ಮೂವರು ಸಹೋದರಿಯರಲ್ಲಿ ಒಬ್ಬರಾದ ಉಜ್ಮಾ ಖಾನ್ ಅವರಿಗೆ ಇಮ್ರಾನ್ ಭೇಟಿ ಮಾಡಲು ಜೈಲಿನ ಒಳಗೆ ಹೋಗಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಕಳೆದ ಕೆಲವು ದಿನಗಳಿಂದ ಕೋರ್ಟ್ ಆದೇಶದ ಹೊರತಾಗಿಯೂ ಅವರನ್ನು ಭೇಟಿ ಮಾಡಲು ಜೈಲಿನ ಅಧಿಕಾರಿಗಳು ಬಿಡುತ್ತಿಲ್ಲ ಎಂದು ಸಹೋದರಿಯರು ಆರೋಪಿಸಿದ್ದರು.
ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಇಮ್ರಾನ್ ಖಾನ್ರನ್ನು ಜೈಲಿನ ಒಳಗೆ ಕೊಲೆ ಮಾಡಲಾಗಿದೆ ಎಂದು ಅಫ್ಘಾನಿಸ್ತಾನ ಮೂಲದ ಸುದ್ದಿ ಮಾಧ್ಯಮವೊಂದು ವರದಿ ಮಾಡಿ ವಿಶ್ವದಾದ್ಯಂತ ಸಂಚಲನ ಮೂಡಿಸಿತ್ತು. ಆದರೆ ಅದನ್ನು ಅಡಿಯಾಲ ಜೈಲು ಅಧಿಕಾರಿಗಳು ನಿರಾಕರಿಸಿದ್ದು, ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದರು.
ಇನ್ನೂ ಇಮ್ರಾನ್ ಖಾನ್ ಸಹೋದರಿಯರನ್ನು ಭೇಟಿ ಮಾಡಲು ನಿರಾಕರಿಸಿದ ಜೈಲು ಅಧಿಕಾರಿಗಳ ವಿರುದ್ಧ ಪಿಟಿಐ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ರಾವಲ್ಪಿಂಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆ ಮಧ್ಯಾಹ್ನದ ವೇಳೆಗೆ ಇಮ್ರಾನ್ ಸಹೋದರಿಗೆ ಉಜ್ಮಾ ಅವರಿಗೆ ಭೇಟಿಗೆ ಅವಕಾಶ ನೀಡಿದ್ದು, ಜೈಲಿನೊಳಗೆ ಕರೆದೊಯ್ದಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ (ಏಜೆನ್ಸೀಸ್).