Imran Khan 
ವಿದೇಶ

ಜೈಲಿನಲ್ಲೇ ಪಾಕ್​ ಮಾಜಿ ಪಿಎಂ ಇಮ್ರಾನ್ ಖಾನ್​ ಹತ್ಯೆ! ಅಪ್ಘಾನ್​ ಮಾಧ್ಯಮ ವರದಿ | Imran Khan

ನವದೆಹಲಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್(Imran Khan) ಅವರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಮೂಲಗಳು ಉಲ್ಲೇಖಿಸಿ ಅಪ್ಘಾನಿಸ್ತಾನ್​ ಟೈಮ್ಸ್​ ಬುಧವಾರ ವರದಿ ಮಾಡಿದೆ.
ರಾವಲ್ಪಿಂಡಿಯ ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರ ಸಾವಿನ ಬಗ್ಗೆ ದೃಢೀಕರಿಸದ ಹೇಳಿಕೆಗಳು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್​ ಆಗುತ್ತಿದೆ. ಇಮ್ರಾನ್ ಖಾನ್ ಅವರ ಕುಟುಂಬಕ್ಕೆ ಜೈಲಿನಲ್ಲಿರುವ ಅವರನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ. ಅಲ್ಲದೇ, ಏಕಾಂತ ಬಂಧನದಲ್ಲಿ ಇರಿಸಲಾಗಿದೆ ಎಂಬ ವರದಿಗಳ ಬೆನ್ನಲ್ಲೇ ಸಾವಿನ ವದಂತಿಗಳು ಹೊರಬಿದ್ದಿವೆ.
ಜೈಲಿನೊಳಗೆ "ಇಮ್ರಾನ್​ ಖಾನ್​ ಮೇಲೆ ಕ್ರೂರವಾಗಿ ಹಲ್ಲೆ" ನಡೆಸಲಾಗಿದೆ ಎಂದು ಆರೋಪಿಸಿ ಅಡಿಯಾಲ ಜೈಲಿನ ಹೊರಗೆ ಇಮ್ರಾನ್​​ ಖಾನ್ ಮೂವರು ಸಹೋದರಿಯರಾದ ನೊರೀನ್, ಅಲೀಮಾ ಮತ್ತು ಉಜ್ಮಾ ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನು ಪ್ರತಿಭಟನೆ ವೇಳೆ ಸಹೋದರಿಯರ ಮೇಲೆ ಹಲ್ಲೆ ನಡೆಸಲಾಗಿದೆ. ಕೂದಲು ಹಿಡಿದುಕೊಂಡು ಎಳೆದಾಡಿ ಗಾಯಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಆಗಸ್ಟ್ 2023 ರಿಂದ ಹಲವಾರು ಆರೋಪಗಳೊಂದಿಗೆ ಇಮ್ರಾನ್​ ಖಾನ್​ ಅವರನ್ನು ಜೈಲಿನಲ್ಲಿ ಇಡಲಾಗಿದೆ. ಅಲ್ಲದೆ, ಸರ್ಕಾರ ಅವರನ್ನು ಭೇಟಿ ಮಾಡದಂತೆ ಅಘೋಷಿತ ನಿಷೇಧ ಹೇರಲಾಗಿದೆ. ಅಂದಿನಿಂದ ಅವರ ಸಾವಿನ ಬಗ್ಗೆ ನಕಲಿ ವರದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಪಿಟಿಐ ಹೇಳಿದ್ದೇನು?
ಇಮ್ರಾನ್ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮಾಜಿ ಪ್ರಧಾನಿ ಸಂಪೂರ್ಣ ಪ್ರತ್ಯೇಕತೆ ಮತ್ತು ಏಕಾಂತ ಬಂಧನದಲ್ಲಿದ್ದಾರೆ ಎಂದು ಹೇಳಿಕೊಂಡಿದೆ. ಆದರೆ, 'ಅಫ್ಘಾನಿಸ್ತಾನ್ ಟೈಮ್ಸ್' ತನ್ನ ವರದಿಯಲ್ಲಿ ಪಿಟಿಐ ಅಧ್ಯಕ್ಷರನ್ನು ನಿಗೂಢವಾಗಿ ಕೊಲ್ಲಲಾಗಿದೆ ಮತ್ತು ಅವರ ದೇಹವನ್ನು ಜೈಲಿನಿಂದ ಹೊರಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದೆ. ಆದಾಗ್ಯೂ, ಪಿಟಿಐ ಅದನ್ನು ದೃಢಪಡಿಸಿಲ್ಲ(ಏಜೆನ್ಸೀಸ್​).