- ದೇಶ-ವಿದೇಶಗಳಿಂದ ಥೈಲ್ಯಾಂಡ್‌ಗೆ ಪ್ರವಾಸಿಗರ ದಂಡು
- ವೀಸಾ ನೀತಿಯಲ್ಲಿ ಮತ್ತು ಒಂದಷ್ಟು ನಿಯಮಗಳಲ್ಲಿ ಬದಲಾವಣೆಗಳು
- ನಿಯಮ ಹೇಳುವುದೇನು? ಯಾಕಾಗಿ ಇದೆಲ್ಲ?
ನವದೆಹಲಿ: ಪ್ರತಿವರ್ಷ ದೇಶ-ವಿದೇಶಗಳಿಂದ ಥೈಲ್ಯಾಂಡ್‌ಗೆ ಪ್ರವಾಸಿಗರ ದಂಡೇ ಹರಿದಬರುತ್ತದೆ. ಇಲ್ಲಿಗೆ ಭೇಟಿ ಕೊಡುವ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ವೀಸಾ ನೀತಿಯಲ್ಲಿ ಮತ್ತು ಒಂದಷ್ಟು ನಿಯಮಗಳಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಹಾಗೂ ಅನಿವಾರ್ಯತೆ ಎದುರಾಗಿದೆ.
ಈ ಬದಲಾವಣೆಗಳನ್ನು ಅರಿಯದೆ ಥೈಲ್ಯಾಂಡ್ ಪ್ರವೇಶಿಸುವ ಭಾರತೀಯರು ಸೇರಿ ಹಲವು ದೇಶಗಳ ಪ್ರವಾಸಿಗರ ಮೇಲೆ ಇದು ಪರಿಣಾಮ ಬೀರುತ್ತಿವೆ. ದೇಶದಲ್ಲಿ ವಲಸೆ ನಿಯಂತ್ರಣಗಳನ್ನು ಬಿಗಿಗೊಳಿಸಲು ಮತ್ತು ದೃಢ ಪ್ರವೇಶ ಪ್ರಕ್ರಿಯೆಯನ್ನು ಜಾರಿಗೆ ತರಲು ಥೈಲ್ಯಾಂಡ್ ಸರ್ಕಾರ ಈ ಬದಲಾವಣೆಗಳನ್ನು ಜಾರಿಗೆ ತರುತ್ತಿರುವಂತೆ ತೋರಿದೆ. ಇತ್ತೀಚೆಗಷ್ಟೇ, ಡಾನ್ ಮುವಾಂಗ್ ವಿಮಾನ ನಿಲ್ದಾಣದಲ್ಲಿ ವಿದೇಶಿ ಪ್ರವಾಸಿಗರಿಗೆ ವಲಸೆ ಅಧಿಕಾರಿಗಳು ಪ್ರವೇಶವನ್ನು ಸಂಪೂರ್ಣವಾಗಿ ನಿರಾಕರಿಸಿದರು. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಯಿತು. ಅಲ್ಲಿಂದ ಕಟ್ಟುನಿಟ್ಟಿನ ರೂಲ್ಸ್ ಬಗ್ಗೆ ಮಾಹಿತಿ ಹಲವರ ಗಮನಕ್ಕೆ ಬರುತ್ತಿದೆ.
ಏನಿದು ಹೊಸ ನಿಯಮ?
ವಾಸ್ತವವಾಗಿ, ಈ ನಿಯಮ ಹೊಸದೇನಲ್ಲ. ಥೈಲ್ಯಾಂಡ್‌ನ ಅಧಿಕೃತ ಪ್ರವೇಶ ನಿಯಮಗಳ ಪ್ರಕಾರ, ದೇಶವನ್ನು ಪ್ರವೇಶಿಸುವ ವಿದೇಶಿ ಪ್ರವಾಸಿಗರು ಸಾಕಷ್ಟು ಆರ್ಥಿಕ ಮಾರ್ಗಗಳ ಪುರಾವೆಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಲಗ್ಗತ್ತಿಸಬೇಕು.
- ಪ್ರತಿ ವ್ಯಕ್ತಿಗೆ ಕನಿಷ್ಠ 20,000 ಥಾಯ್ ಬಹ್ತ್
- ಪ್ರತಿ ಕುಟುಂಬಕ್ಕೆ ಕನಿಷ್ಠ 40,000 ಬಹ್ತ್
ಪ್ರವಾಸಿ ವೀಸಾಗಳಿಗೆ ಅದೇ ಹಣಕಾಸಿನ ದಾಖಲೆಯನ್ನು ಕಡ್ಡಾಯಗೊಳಿಸಲಾಗಿದೆ. ನೀವು ವೀಸಾ ಮನ್ನಾ ನಿಯಮದ ಅಡಿಯಲ್ಲಿ ಪ್ರವೇಶಿಸಿದರೂ ಸಹ, ವಲಸೆ ಅಧಿಕಾರಿಗಳು ಕೇಳಿದರೆ ನೀವು ಈ ರೆಕಾರ್ಡ್ ಅನ್ನು ತೋರಿಸಬೇಕು. ಅಗತ್ಯವಿದ್ದರೆ ಕಾನ್ಸುಲರ್ ಅಧಿಕಾರಿಗಳು ಹೆಚ್ಚುವರಿ ದಾಖಲೆಗಳನ್ನು ಸಹ ಕೋರಿ, ಪರಿಶೀಲಿಸಬಹುದು.
- ವೀಸಾ ಶುಲ್ಕ ಮತ್ತು ಗಡುವು ವಿವರಗಳು
- ಪ್ರವೇಶ ವೀಸಾ ಶುಲ್ಕ: 1,000 ಬಹ್ತ್
- ವೀಸಾ ಸಿಂಧುತ್ವ: 60 ದಿನಗಳ ವಾಸ್ತವ್ಯ ಸಾಧ್ಯಅಗತ್ಯವಿದ್ದರೆ ಬ್ಯಾಂಕಾಕ್ ವಲಸೆ ಬ್ಯೂರೋದಲ್ಲಿ ವಿಸ್ತರಣೆ ಸಾಧ್ಯ
ಹೆಚ್ಚುವರಿಯಾಗಿ, ಕೆಲವು ದೇಶಗಳ ನಾಗರಿಕರು ಥೈಲ್ಯಾಂಡ್‌ಗೆ ಪ್ರಯಾಣಿಸುವ ಮುನ್ನ ತಮ್ಮ ದೇಶದ ಥಾಯ್ ರಾಯಭಾರ ಕಚೇರಿ ಅಥವಾ ದೂತಾವಾಸದಲ್ಲಿ ವೀಸಾಕ್ಕಾಗಿ ಅರ್ಜಿ ಸಲ್ಲಿಸಬೇಕು ಎಂದು ಥಾಯ್ ಎಂಎಫ್ಎ ಶಿಫಾರಸು ಮಾಡುತ್ತದೆ.
ಪ್ರಯಾಣಿಕರ ಗಮನಕ್ಕೆ!
- ಥೈಲ್ಯಾಂಡ್‌ಗೆ ಆಗಮಿಸುವ ಮೊದಲು ಕನಿಷ್ಠ 20,000 ಬಹ್ತ್ (56,570 ರೂ.) ಕ್ಯಾಶ್ ಅಥವಾ ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ನಿಮ್ಮ ಬಳಿ ಇಟ್ಟುಕೊಂಡಿರಬೇಕು.
- ದಾಖಲೆಗಳಲ್ಲಿ ಯಾವುದೇ ದೋಷಗಳು ಇರಬಾರದು.
- ನಿರ್ಗಮಿಸುವ ಮೊದಲು ಹತ್ತಿರದ ಥಾಯ್ ರಾಯಭಾರ ಕಚೇರಿ/ದೂತಾವಾಸದಲ್ಲಿ ಇತ್ತೀಚಿನ ವೀಸಾ ನಿಯಮಗಳನ್ನು ಪರಿಶೀಲಿಸುವುದು ಅತ್ಯಗತ್ಯ.
- ವಿಮಾನ ನಿಲ್ದಾಣಗಳಲ್ಲಿ ವಲಸೆ ತಪಾಸಣೆಯ ಸಮಯದಲ್ಲಿ ಅಧಿಕಾರಿಗಳ ನಿರ್ಧಾರವೇ ಅಂತಿಮ.
ಥೈಲ್ಯಾಂಡ್‌ನಲ್ಲಿ ಜಾರಿಗೆ ಬಂದಿರುವ ಹೊಸ ವೀಸಾ ಮತ್ತು ವಲಸೆ ನಿಯಮಗಳು ಜಾಗತಿಕ ಪ್ರವಾಸಿಗರ ಮೇಲೆ ನೇರ ಪರಿಣಾಮ ಬೀರುತ್ತಿವೆ. ನಿಯಮಗಳನ್ನು ಮುಂಚಿತವಾಗಿ ಅರಿತು ಪ್ರಯಾಣಿಸುವುದು ಉತ್ತಮ ಎನ್ನಲಾಗಿದೆ. ಇದರಿಂದ ಆ ದೇಶಕ್ಕೆ ಹೋದ ಬಳಿಕ ಆಗುವ ಸಮಸ್ಯೆಗಳು ತಪ್ಪುತ್ತದೆ ಎಂದು ಅನೇಕ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).