ಮತ್ತೊಮ್ಮೆ ಆ ಮೂರ್ಖತನ ಮಾಡಿದರೆ..! ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಎದುರೇ ಗುಡುಗಿದ ಇರಾನ್ ಸ್ಪೀಕರ್!
ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್(Ghalibaf Warning) ನಡುವಿನ ಸಶಸ್ತ್ರ ಸಂಘರ್ಷ ಇಡೀ ಜಗತ್ತನ್ನು ಮೂರನೇ ಮಹಾಯುದ್ಧದ ಅಂಚಿಗೆ ತಂದು ನಿಲ್ಲಿಸಿದೆ. ಈ ಭೀಕರ ಬಿಕ್ಕಟ್ಟನ್ನು ಕೊನೆಗಾಣಿಸಲು ಮತ್ತು ಉಭಯ ದೇಶಗಳ ನಡುವೆ ಶಾಂತಿ ಒಪ್ಪಂದ ಮೂಡಿಸಲು ಅಧಿಕೃತ ಮಧ್ಯಸ್ಥಿಕೆದಾರನಾಗಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಶುಕ್ರವಾರ (ಮೇ.22) ಇರಾನ್ ರಾಜಧಾನಿ ಟೆಹ್ರಾನ್‌ಗೆ ಲಗ್ಗೆ ಇಟ್ಟಿದ್ದಾರೆ. ಆದರೆ, ಈ ಅತ್ಯಂತ ನಿರ್ಣಾಯಕ ಮಾತುಕತೆಯ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಇರಾನ್ ನೇರ ಹಾಗೂ ಅತ್ಯಂತ ಕಠಿಣ ಯುದ್ಧದ ಎಚ್ಚರಿಕೆಯನ್ನು ರವಾನಿಸಿದೆ.
ಕದನ ವಿರಾಮದ ಅವಧಿಯಲ್ಲಿ ನಮ್ಮ ಸಶಸ್ತ್ರ ಪಡೆಗಳು ತಮ್ಮ ಶಕ್ತಿಯನ್ನು ನೂರು ಪಟ್ಟು ಹೆಚ್ಚಿಸಿಕೊಂಡಿವೆ. ಅಮೆರಿಕ ಏನಾದರೂ ಮತ್ತೊಮ್ಮೆ ಮೂರ್ಖತನದ ನಿರ್ಧಾರ ಕೈಗೊಂಡು ಯುದ್ಧವನ್ನು ಪುನರಾವರ್ತಿಸಿದರೆ, ಅದರ ಪರಿಣಾಮವು ಯುದ್ಧದ ಮೊದಲ ದಿನಕ್ಕಿಂತಲೂ ಅತ್ಯಂತ ಭೀಕರ, ಕಹಿ ಮತ್ತು ವಿನಾಶಕಾರಿಯಾಗಿರಲಿದೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಹಾಗೂ ಮುಖ್ಯ ಸಂಧಾನಕಾರ ಮೊಹಮ್ಮದ್ ಬಾಗೇರ್ ಗಲಿಬಾಫ್ ಗುಡುಗಿದ್ದಾರೆ.
ಮಧ್ಯರಾತ್ರಿಯವರೆಗೆ ನಡೆದ ಇರಾನ್ ವಿದೇಶಾಂಗ ಸಚಿವರ ರಹಸ್ಯ ಸಭೆ!
ಇರಾನ್ ಸರ್ಕಾರ ಶನಿವಾರ (ಮೇ 23) ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆಯ ಪ್ರಕಾರ, ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರು ಸ್ಪೀಕರ್ ಗಲಿಬಾಫ್ ಅವರನ್ನು ಭೇಟಿಯಾಗುವ ಮುನ್ನ ಇರಾನ್ ವಿದೇಶಾಂಗ ಸಚಿವ ಸೆಯ್ಯದ್ ಅಬ್ಬಾಸ್ ಅರಾಗ್ಚಿ ಅವರೊಂದಿಗೆ ಸುದೀರ್ಘ ರಾಜತಾಂತ್ರಿಕ ಮಂಥನ ನಡೆಸಿದ್ದಾರೆ. ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ 'ಇರ್ನಾ' (IRNA) ನೀಡಿರುವ ವರದಿಯ ಪ್ರಕಾರ, ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯನ್ನು ತಡೆಯುವ ಮತ್ತು ಪ್ರಾದೇಶಿಕ ಶಾಂತಿಯನ್ನು ಮರುಸ್ಥಾಪಿಸುವ ಕುರಿತು ಉಭಯ ನಾಯಕರ ನಡುವಿನ ರಹಸ್ಯ ರಾಜತಾಂತ್ರಿಕ ಚರ್ಚೆಗಳು ಮಧ್ಯರಾತ್ರಿಯವರೆಗೂ ಮುಂದುವರಿದಿದ್ದವು. ಸುಮಾರು ಒಂದೂವರೆ ತಿಂಗಳ ಅವಧಿಯಲ್ಲಿ ಅಸಿಮ್ ಮುನೀರ್ ಅವರು ಟೆಹ್ರಾನ್‌ಗೆ ನೀಡುತ್ತಿರುವ ಎರಡನೇ ತುರ್ತು ಭೇಟಿ ಇದಾಗಿದ್ದು, ಜಾಗತಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಸಾರ್ವಭೌಮತ್ವದ ವಿಷಯದಲ್ಲಿ ರಾಜಿ ಇಲ್ಲ ಎಂದ ಇರಾನ್
ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ ಪಾಕ್ ಸೇನಾ ಪಡೆಗಳ ಮುಖ್ಯಸ್ಥರಿಗೆ ಇರಾನ್ ಕಠಿಣ ಸಂದೇಶವನ್ನೇ ರವಾನಿಸಿದೆ. ಇರಾನ್ ದೇಶದ ಹಿತಾಸಕ್ತಿ, ನಾಗರಿಕರ ಹಕ್ಕುಗಳು ಮತ್ತು ರಾಷ್ಟ್ರೀಯ ಸಾರ್ವಭೌಮತ್ವದ ವಿಷಯದಲ್ಲಿ ತಾವು ಯಾವುದೇ ಕಾರಣಕ್ಕೂ ಯಾರೊಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪೀಕರ್ ಗಲಿಬಾಫ್ ಸ್ಪಷ್ಟಪಡಿಸಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್ ಕಳೆದ ಫೆಬ್ರವರಿ 28 ರಂದು ಜಂಟಿಯಾಗಿ ಇರಾನ್ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದ ನಂತರ ಈ ಯುದ್ಧ ಭುಗಿಲೆದ್ದಿತ್ತು. ಅದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಡೀ ಪ್ರದೇಶದಲ್ಲಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಮೂಲಕ ಪ್ರತಿಕಾರ ತೀರಿಸಿಕೊಂಡಿತ್ತು. ಏಪ್ರಿಲ್ 8 ರಂದು ಜಾರಿಗೆ ಬಂದ ಕದನ ವಿರಾಮದ ನಂತರ ಸದ್ಯ ಪರಿಸ್ಥಿತಿ ಶಾಂತವಾಗಿದೆಯಾದರೂ, ಡೊನಾಲ್ಡ್ ಟ್ರಂಪ್ ನೇತೃತ್ವದ ವೈಟ್ ಹೌಸ್ ಆಡಳಿತವು ಮತ್ತೊಂದು ಸುತ್ತಿನ ದಾಳಿಗೆ ಸಿದ್ಧತೆ ನಡೆಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಇರಾನ್ ಕೆಂಡಾಮಂಡಲವಾಗಿದೆ.
ಹೊರ್ಮುಜ್ ಜಲಸಂಧಿ ಮತ್ತು ಇಂಧನ ಬಿಕ್ಕಟ್ಟಿನ ಮಹಾ ಕಂಟಕ!
ವಿಶ್ವದ ಒಟ್ಟು ಕಚ್ಚಾ ತೈಲ ಮತ್ತು ಇಂಧನ ಪೂರೈಕೆಯ ಐದನೇ ಒಂದು ಭಾಗವನ್ನು ನಿಯಂತ್ರಿಸುವ ಹೊರ್ಮುಜ್ ಜಲಸಂಧಿ ಮೇಲಿನ ಹತೋಟಿ ಮತ್ತು ಇರಾನ್‌ನ ಪರಮಾಣು ಯೋಜನೆಗಳೇ ಸದ್ಯ ಅಮೆರಿಕ-ಇರಾನ್ ನಡುವಿನ ಮಹಾ ಸಂಘರ್ಷಕ್ಕೆ ಮುಖ್ಯ ಕಾರಣಗಳಾಗಿವೆ. ಇರಾನ್ ಈ ಪ್ರಮುಖ ಜಲಮಾರ್ಗವನ್ನು ಸಂಪೂರ್ಣವಾಗಿ ನಿರ್ಬಂಧಿಸಿರುವುದರಿಂದ ಜಾಗತಿಕ ಆರ್ಥಿಕತೆಯ ಮೇಲೆ ಕರಾಳ ಛಾಯೆ ಆವರಿಸಿದೆ.
ಅಮೆರಿಕವು ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರ ಹೊಂದುವುದನ್ನು ಒಪ್ಪುವುದಿಲ್ಲ ಎಂದು ಪಟ್ಟು ಹಿಡಿದಿದ್ದರೆ, ಇರಾನ್ ಮಾತ್ರ ತಾನು ಮಿಲಿಟರಿ ಒತ್ತಡಕ್ಕೆ ಮಣಿದು ಯಾವುದೇ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ಸಾರಿದೆ. ಪಾಕಿಸ್ತಾನ ಮತ್ತು ಕತಾರ್ ದೇಶಗಳು ಜಂಟಿಯಾಗಿ ಈ ಮಹಾ ಯುದ್ಧವನ್ನು ಶಾಶ್ವತವಾಗಿ ಕೊನೆಗಾಣಿಸಲು ತೀವ್ರ ಕಸರತ್ತು ನಡೆಸುತ್ತಿವೆಯಾದರೂ, ಇರಾನ್ ನೀಡಿರುವ ಈ ಭೀಕರ ಬೆದರಿಕೆಯು ಪಶ್ಚಿಮ ಏಷ್ಯಾದಲ್ಲಿ ಯಾವುದೇ ಕ್ಷಣದಲ್ಲಾದರೂ ಮತ್ತೊಮ್ಮೆ ಕದನ ವಿರಾಮ ಮುರಿದು ಬಿದ್ದು, ಮಹಾ ರಕ್ತಪಾತ ಆರಂಭವಾಗುವ ಮುನ್ಸೂಚನೆಯನ್ನು ನೀಡಿದೆ,(ಏಜೆನ್ಸೀಸ್).