ಬ್ರಿಟನ್ ಕಿಂಗ್ ಚಾರ್ಲ್ಸ್ III
ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಬ್ರಿಟನ್ ಕಿಂಗ್ ಚಾರ್ಲ್ಸ್ III ಮಂಗಳವಾರ(ಏ. 28) ನಡೆದ ಶ್ವೇತಭವನದ ಸರ್ಕಾರಿ ಭೋಜನಕೂಟದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ತಮ್ಮದೇ ಶೈಲಿಯಲ್ಲಿ ಕಾಲೆಳೆದಿದ್ದು, ಬ್ರಿಟಿಷರು ಇಲ್ಲದೆ ಹೋಗಿದ್ರೆ ನೀವು(ಅಮೆರಿಕನ್ನರು) ಫ್ರೆಂಚ್ ಮಾತನಾಡ್ತಿದ್ರಿ ಎಂದು ತಮಾಷೆ ಮಾಡಿದ್ದಾರೆ.
250 ವರ್ಷಗಳ ಹಿಂದೆ ಅಮೆರಿಕದ ಸ್ವಾತಂತ್ರ್ಯದ ಮೊದಲು ಪ್ರತಿಸ್ಪರ್ಧಿ ವಸಾಹತುಶಾಹಿ ಶಕ್ತಿಗಳು ಖಂಡದ ನಿಯಂತ್ರಣಕ್ಕಾಗಿ ಹೋರಾಡಿದ ಉತ್ತರ ಅಮೆರಿಕಾದಲ್ಲಿ ಬ್ರಿಟಿಷ್ ಮತ್ತು ಫ್ರೆಂಚ್ ಮೂಲಗಳನ್ನು ಹೊಂದಿರುವ ಸ್ಥಳಗಳ ಮಾತನಾಡುವಾಗ ಕಿಂಗ್, ಟ್ರಂಪ್ ಅವರ ಕಾಲೆಳೆದಿದ್ದಾರೆ.
ಅಧ್ಯಕ್ಷರೇ, ನೀವು ಇತ್ತೀಚೆಗೆ ಅಮೆರಿಕ ಇಲ್ಲದಿದ್ದರೆ ಯುರೋಪಿಯನ್ ದೇಶಗಳು ಜರ್ಮನ್ ಮಾತನಾಡುತ್ತಿದ್ದವು ಎಂದು ಹೇಳಿದ್ದೀರಿ. ನಾವು ಇಲ್ಲದಿದ್ದರೆ ನೀವು ಫ್ರೆಂಚ್ ಮಾತನಾಡುತ್ತಿದ್ದಿರಿ ಎಂದು ನಾನು ಧೈರ್ಯದಿಂದ ಹೇಳುತ್ತೇನೆ ಎಂದಿದ್ದಾರೆ.
ಜನವರಿ ತಿಂಗಳಲ್ಲಿ ದಾವೋಸ್ನಲ್ಲಿ ನಡೆದ ಶೃಂಗಸಭೆಯಲ್ಲಿ ಟ್ರಂಪ್, ಎರಡನೇ ಮಹಾಯುದ್ಧದ ಸಮಯದಲ್ಲಿ ಅಮೆರಿಕ ನಿಮಗೆ ಸಹಾಯ ಮಾಡಿರದಿದ್ರೆ, ನೀವು ಜರ್ಮನ್ ಮತ್ತು ಸ್ವಲ್ಪ ಜಪಾನೀಸ್ ಭಾಷೆ ಮಾತನಾಡ್ತಿದ್ರಿ ಎಂದು ಯುರೋಪ್ ದೇಶಗಳನ್ನುದ್ದೇಶಿಸಿ ಹೇಳಿದ್ದರು.
ಇನ್ನೂ ಇದೇ ಸಭೆಯಲ್ಲಿ ಡೊನಾಲ್ಡ್ ಟ್ರಂಪ್ ತಮ್ಮ ತಾಯಿಗೆ ಕಿಂಗ್ ಚಾರ್ಲ್ಸ್ ಬಗ್ಗೆ ಇದ್ದ ಪ್ರೀತಿ, ಅಭಿಮಾನವನ್ನು ಬಿಚ್ಚಿಟ್ಟಿದ್ದು, ನನ್ನ ತಾಯಿ ಸ್ಕಾಂಡ್ಲೆಂಡನವರು. 10 ವರ್ಷದವರಿದ್ದಾಗ ಅಮೆರಿಕಕ್ಕೆ ಬಂದರು. ಅವರು ಬ್ರಿಟಿಷ್ ರಾಜಮನೆತನದ ಕಟ್ಟಾ ಅಭಿಮಾನಿಯಾಗಿದ್ದರು.
ದೂರದರ್ಶನದಲ್ಲಿ ರಾಜಮನೆತನದ ಕಾರ್ಯಕ್ರಮಗಳನ್ನು ತಪ್ಪದೇ ನೋಡ್ತಿದ್ದರು. ರಾಣಿ ಸಮಾರಂಭದಲ್ಲಿ ಅಥವಾ ಇನ್ನೇನಾದರೂ ಭಾಗವಹಿಸಿದಾಗಲೆಲ್ಲಾ, ನನ್ನ ತಾಯಿ ಟಿವಿಗೆ ಅಂಟಿಕೊಂಡಿರುತ್ತಿದ್ದರು. ನನಗೆ ನೋಡು ಡೊನಾಲ್ಡ್ ಎಂದು ಚೆನ್ನಾಗಿದೆ ಅಲ್ವಾ, ಚಾರ್ಲ್ಸ್ ಎಷ್ಟು ಮುದ್ದಾಗಿದ್ದಾನೆ ಅಲ್ವಾ ಎಂದು ಹೇಳಿದ್ದು ನನಗೆ ನೆನಪಿದೆ ಎಂದಿದ್ದಾರೆ (ಏಜೆನ್ಸೀಸ್).