ನರೇಂದ್ರ ಮೋದಿ-ವ್ಲಾಡಿಮಿರ್ ಪುಟಿನ್
- ಅಮೆರಿಕ ತೈಲ ಖರೀದಿಸಬಹುದು. ಅದೇ ಭಾರತ ಖರೀದಿಸಿದ್ರೆ ತಪ್ಪೇ?
- ಮೋದಿ ಯಾರ ಒತ್ತಡಕ್ಕೂ ಮಣಿಯುವುದಿಲ್ಲ
- ಸಂದರ್ಶನದಲ್ಲಿ ಪುಟಿನ್ರ ಪ್ರಮುಖ ಹೇಳಿಕೆಗಳು ಇಲ್ಲಿವೆ ನೋಡಿ
ನವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಭಾರತಕ್ಕೆ ಎಂಟ್ರಿಕೊಟ್ಟಿದ್ದು, ಡಿ.4 ಮತ್ತು 5ರಂದು ಇಲ್ಲೇ ಉಳಿಯಲಿದ್ದಾರೆ. ನಾಲ್ಕು ವರ್ಷಗಳಲ್ಲಿ ಪುಟಿನ್ ಅವರ ಮೊದಲ ಭಾರತ ಭೇಟಿ ಇದಾಗಿದ್ದು, ಭಾರತ-ರಷ್ಯಾ ನಡುವೆ ಹೆಚ್ಚಿನ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ. ರಕ್ಷಣೆ, ಇಂಧನ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಹಲವಾರು ಒಪ್ಪಂದಗಳ ಕುರಿತು ಮಾತುಕತೆ ನಡೆಯಲಿದೆ. ಈ ಮಧ್ಯೆ, ಸಂದರ್ಶನದಲ್ಲಿ ಮಾತನಾಡಿದ ವ್ಲಾಡಿಮಿರ್, ಯುಕ್ರೇನ್‌ನಲ್ಲಿನ ಯುದ್ಧ, ಅಮೆರಿಕದ ನಿಲುವು ಮತ್ತು ಪಾಶ್ಚಿಮಾತ್ಯ ದೇಶಗಳ ನಡವಳಿಕೆಯನ್ನು ಟೀಕಿಸಿ, ಮಾತನಾಡಿದರು.
ಅಮೆರಿಕ ರಷ್ಯಾದಿಂದ ತೈಲ ಖರೀದಿಸಲು ಅವಕಾಶವಿದೆ ಎಂದಮೇಲೆ ಅದ್ಯಾಕೆ ಭಾರತ ತೈಲವನ್ನು ಖರೀದಿಸಬಾರದು? ಅದನ್ನೇಕೆ ಯುಎಸ್ ಪ್ರಶ್ನಿಸುವುದು? ಎಂದು ಟ್ರಂಪ್ ವಿರುದ್ಧ ಚಾವಟಿ ಬೀಸಿದರು. "ಅಮೆರಿಕ ತನ್ನ ಸ್ವಂತ ವಿದ್ಯುತ್ ಸ್ಥಾವರಗಳಿಗೆ ರಷ್ಯಾದಿಂದ ಪರಮಾಣು ಇಂಧನವನ್ನು ಮತ್ತು ಅಮೆರಿಕದ ರಿಯಾಕ್ಟರ್‌ಗಳಿಗೆ ಯುರೇನಿಯಂ ಅನ್ನು ಖರೀದಿಸುತ್ತಿದೆ. ಇದೇ ಹಕ್ಕು ಭಾರತಕ್ಕೂ ಇದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಜತೆ ರಷ್ಯಾ ಚರ್ಚಿಸಲು ಸಿದ್ಧವಿದೆ" ಎಂದರು.
"ಯುಕ್ರೇನ್‌ಗೆ ಶಾಂತಿ ತರಲು ಟ್ರಂಪ್ ಅವರ ಪ್ರಾಮಾಣಿಕ ಪ್ರಯತ್ನಗಳು ನನಗೆ ಖುಷಿ ತಂದಿದೆ. ಅಸಲಿಗೆ ಇದರಲ್ಲಿ ರಾಜಕೀಯ ಮತ್ತು ಆರ್ಥಿಕ ಎರಡೂ ಪ್ರಯೋಜನಗಳಿವೆ. ಭಾರತ-ರಷ್ಯಾ ಸಂಬಂಧಗಳು ಎಂದಿಗೂ ಇತರರಿಗೆ ತೊಂದರೆ ಮಾಡಿಲ್ಲ. ನನ್ನ ಮೇಲೆ ಅಥವಾ ಪ್ರಧಾನಿ ಮೋದಿ ಮೇಲೆ ಯಾರೇ ಒತ್ತಡ ಹೇರಿದರೂ, ನಾವು ನಮ್ಮ ಸಹಕಾರವನ್ನು ಯಾರ ವಿರುದ್ಧವೂ ಬಳಸಿಲ್ಲ. ಟ್ರಂಪ್ ತಮ್ಮದೇ ಆದ ಕಾರ್ಯಸೂಚಿಯನ್ನು ಹೊಂದಿದ್ದಾರೆ" ಎಂದು ಹೇಳಿದರು.
ಇನ್ನು ಭಾರತ-ರಷ್ಯಾ ವ್ಯಾಪಾರದ ಬಗ್ಗೆ ಪ್ರತಿಕ್ರಿಯಿಸಿದ ಪುಟಿನ್, "ಒಟ್ಟಾರೆ ವ್ಯಾಪಾರ ಸ್ಥಿರವಾಗಿದೆ ಮತ್ತು ರಷ್ಯಾದ ತೈಲ ಕಂಪನಿಗಳು ಭಾರತವನ್ನು ವಿಶ್ವಾಸಾರ್ಹ ಗ್ರಾಹಕ ಎಂದು ಪರಿಗಣಿಸಿವೆ. ಯುಕ್ರೇನ್ ವಿರುದ್ಧದ ಯುದ್ಧಕ್ಕೂ ಮೊದಲು ರಷ್ಯಾ ವ್ಯಾಪಾರ ಕಂಪನಿಗಳು ಭಾರತದೊಂದಿಗೆ ಬಲವಾದ ಇಂಧನ ಪಾಲುದಾರಿಕೆಯನ್ನು ಸ್ಥಾಪಿಸಿದ್ದವು" ಎಂದು ಪುಟಿನ್ ನುಡಿದಿದ್ದಾರೆ,(ಏಜೆನ್ಸೀಸ್).