ಹೊಮುಜ್ ಜಲಸಂಧಿ ಈಗ ಮುಕ್ತವಾಗಿದೆ ಎಂದು ಏ. 17ರಂದು ಇರಾನಿ ವಿದೇಶ ಮಂತ್ರಿ ಸೈಯದ್ ಅಬ್ಬಾಸ್ ಅರಾಗ್ಚಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದರು. ಅಮಾಯಕ ಜಗತ್ತು ನೆಮ್ಮದಿಯ ಉಸಿರುಗರೆಯಿತು. ಜಗತ್ತಿನ ಇಂಧನ ಪೂರೈಕೆಯ 20% ಸಾಗುವ ಹೊಮುಜ್ ಜಲಸಂಧಿಯನ್ನು ಬಂದ್ ಮಾಡಿದ್ದ ದೇಶದ ವಿದೇಶ ಮಂತ್ರಿಯೇ ಹೇಳಿದ ಮೇಲೆ ಇನ್ನೇನು? ಪರ್ಷಿಯನ್ ಕೊಲ್ಲಿಯಲ್ಲಿ ಸಿಕ್ಕಿ ಸ್ತಬ್ಧಗೊಂಡಿದ್ದ ಹಡಗುಗಳು ಎಚ್ಚರಗೊಂಡವು. ‘ಎಲ್ಲವೂ ಸರಿಹೋಯಿತು, ಮುಂದೆ ಅವರು ಬಹುಕಾಲ ಸುಖವಾಗಿ ಬಾಳಿದರು’ ಎಂದು ಅಂತ್ಯಗೊಳ್ಳುವ ಮಕ್ಕಳ ಕಥೆಗಳಂತೆ ಈ ಸಂಕಟವೂ ಕೊನೆಗೊಂಡು ನಾವಿನ್ನು ಸುಖವಾಗಿ ಬಾಳುತ್ತೇವೆ ಎಂದು ಎಲ್ಲರೂ ಅಂದುಕೊಂಡರು. ಬರೇ ಅಂದುಕೊಂಡದ್ದೇ ಬಂತು.
ಮಂತ್ರಿಮಹೋದಯರ ಘೊಷಣೆಯನ್ನು ತಿರಸ್ಕರಿಸುವ ಘೊಷಣೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ (ಐಆರ್ಜಿಸಿ) ಸಂಘಟನೆಯಿಂದ ಬಂತು. ಹೊಮುಜ್ ಜಲಸಂಧಿ ಇನ್ನೂ ಬಂದ್ ಆಗಿಯೇ ಇರುವುದಾಗಿ ಹೇಳಿದ್ದಲ್ಲದೇ ಮಂತ್ರಿ ಅರಾಗ್ಚಿಯವರನ್ನು ‘ಈಡಿಯಟ್’ ಎಂದೂ ಆ ಘೊಷಣೆ ಕರೆಯಿತು. ಅಷ್ಟೇ ಅಲ್ಲ, ತನ್ನ ಘೊಷಣೆಯನ್ನು ಐಆರ್ಜಿಸಿ ವಾಷಿಂಗ್ಟನ್ ಪೋಸ್ಟ್ ಸಹ ಸೇರಿದಂತೆ ಜಾಗತಿಕ ವಾರ್ತಾಸಂಸ್ಥೆಗಳಿಗೆ ಬಿಡುಗಡೆ ಮಾಡಿತು. ತನ್ನದು ಬಂಡವಾಳವಿಲ್ಲದ ಬಡಾಯಿಯೇನಲ್ಲ ಎಂದು ತೋರಿಸಲು ಐಆರ್ಜಿಸಿ ಗನ್ಬೋಟ್ಗಳು ಏ. 18ರಂದು ಹೊಮುಜ್ ಜಲಸಂಧಿಯತ್ತ ಮುನ್ನುಗ್ಗುತ್ತಿದ್ದ ಎರಡು ಭಾರತೀಯ ಹಡಗುಗಳ ಮೇಲೆ ಗುಂಡು ಹಾರಿಸಿದವು. ‘ನಿಮ್ಮ ಆಡಳಿತದಿಂದಲೇ ನಮಗೆ ಅನುಮತಿ ದೊರೆತಿದೆಯಲ್ಲ, ಪಾರ್ಟಿಯಲ್ಲಿ ನಮ್ಮದು ಎರಡನೆಯ ಹೆಸರು’ ಎಂದು ಒಂದು ಭಾರತೀಯ ಹಡಗಿನ ಕ್ಯಾಪ್ಟನ್ ಕಳುಹಿಸಿದ ಸಂದೇಶಕ್ಕೆ ಐಆರ್ಜಿಸಿ ನೌಕೆಯಿಂದ ಬಂದ ಪ್ರತಿಕ್ರಿಯೆ- ‘ನಾವು ಮೂರ್ಖರ ಆದೇಶಗಳನ್ನು ಮಾನ್ಯ ಮಾಡುವುದಿಲ್ಲ.’
ಅತ್ತ ಅಮೆರಿಕಾದಲ್ಲಿ ಅಧ್ಯಕ್ಷ ಟ್ರಂಪ್ ಇಸ್ಲಾಮಾಬಾದ್ನಲ್ಲಿ ಎರಡನೆಯ ಹಂತದ ಶಾಂತಿ ಮಾತುಕತೆ ನಡೆಯುವ ಬಗ್ಗೆ ಸಕಾರಾತ್ಮಕವಾಗಿ ಮಾತಾಡಿ ಹಿಂದಿನ ಅದೇ ನಿಯೋಗ ಅಮೆರಿಕಾವನ್ನು ಪ್ರತಿನಿಧಿಸುವುದಾಗಿ ಹೇಳಿದರು. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರನ್ನು ಗೋಳದ ಈ ಬದಿಗೆ ಕರೆತರಲು ಆಂಡ್ರೂ್ಯಸ್ ಏರ್ಬೇಸ್ನಲ್ಲಿ ಏರ್ಫೋರ್ಸ್ 2 ಸಜ್ಜಾಗಿರುವ ಸುದ್ದಿಯೂ ಬಂತು. ಆದರೆ ಟೆಹರಾನ್ ಕಡೆಯಿಂದ ಶಾಂತಿ ಮಾತುಕತೆ ಬಗ್ಗೆ ‘ಕಭೀ ಹ್ಞಾ, ಕಭೀ ನಾ.’ ಅಂತಿಮವಾಗಿ ನಕಾರವೇ ಮೇಲೆದ್ದು ನಿಂತು, ಯಾವ ಇರಾನಿ ನಿಯೋಗವೂ ಇಸ್ಲಾಮಾಬಾದ್ಗೆ ಹೋಗುತ್ತಿಲ್ಲವೆಂಬುದು ಸ್ಪಷ್ಟವಾಯಿತು. ಅದನ್ನು ಏ. 22ರಂದು ಐಆರ್ಜಿಸಿ ಟೆಹರಾನ್ನಲ್ಲಿ ಭಾರಿ ಸಂಭ್ರಮದಿಂದ ಜಗತ್ತಿಗೆ ಸಾರಿತು. ಆ ಸಂಭ್ರಮಾಚರಣೆಯಲ್ಲಿ ಕದನವಿರಾಮದ ಎರಡು ವಾರಗಳಲ್ಲಿ ತಾನು ಸಿದ್ಧಗೊಳಿಸಿದ್ದ ಹೊಸ ಮಿಸೈಲ್ಗಳನ್ನು ಐಆರ್ಜಿಸಿ ಪ್ರದರ್ಶಿಸಿತು. ಅದರರ್ಥ ಯಾವ ಶಾಂತಿಯೂ ತನಗೆ ಬೇಕಾಗಿಲ್ಲ, ತಾನು ಯುದ್ಧಕ್ಕೆ ತಯಾರಿದ್ದೇನೆ ಎಂದು ಆ ಸೇನೆ ಸ್ಪಷ್ಟವಾಗಿ ಸಾರಿತು. ಮರುದಿನ ಏ. 11ರ ಇಸ್ಲಾಮಾಬಾದ್ ಶಾಂತಿ ಮಾತುಕತೆಯಲ್ಲಿ ಇರಾನಿ ನಿಯೋಗದ ನಾಯಕತ್ವ ವಹಿಸಿದ್ದ ಸಂಸತ್ ಅಧ್ಯಕ್ಷ ಮೊಹಮ್ಮದ್ ಬಘೕರ್ ಘಾಲಿಬಾಫ್ ತಾವು ಈಗ ಯಾವುದೇ ನಿಯೋಗದಲ್ಲಿ ಇಲ್ಲ ಎಂದು ಘೊಷಿಸಿದರು.
ಇದೆಲ್ಲದರ ಪರಿಣಾಮವಾಗಿ, ಪ್ರಸಕ್ತ ಇರಾನಿ ನೇತೃತ್ವದಲ್ಲಿ ಒಡಕು ಮೂಡಿದೆ, ಅದರಲ್ಲಿ ಉದಾರವಾದಿಗಳು ಮತ್ತು ತೀವ್ರವಾದಿಗಳು ಎಂಬ ಎರಡು ಬಣಗಳುಂಟಾಗಿವೆ ಎಂಬ ಅಭಿಪ್ರಾಯ ಜಾಗತಿಕವಾಗಿ ಗಟ್ಟಿಯಾಗತೊಡಗಿತು. ಖುದ್ದು ಅಧ್ಯಕ್ಷ ಟ್ರಂಪ್ ಆ ಬಗ್ಗೆ ಮಾತಾಡಿ, ಆ ಕಾರಣದಿಂದಲೇ ಶಾಂತಿ ಮಾತುಕತೆ ಮುಂದುವರೆಯುತ್ತಿಲ್ಲವೆಂದೂ, ಟೆಹರಾನ್ನಲ್ಲಿ ಒಮ್ಮತ ಮೂಡುವವರೆಗೆ ತಾವೂ ಇಸ್ಲಾಮಾಬಾದ್ಗೆ ಯಾವ ನಿಯೋಗವನ್ನೂ ಕಳುಹಿಸುತ್ತಿಲ್ಲವೆಂದೂ ಹೇಳಿದರು. ಪಾಪ ಟ್ರಂಪಣ್ಣ, ಶಾಂತಿ ಒಪ್ಪಂದಗಳಿಗೆ ಸಹಿ ಹಾಕಲು ತಾವು ಪಾಕಿಸ್ತಾನದತ್ತ ಪಾದ ಬೆಳೆಸಬಹುದು ಎಂದು ನಾಲ್ಕು ದಿನಗಳ ಹಿಂದಷ್ಟೇ ಹೇಳಿಕೊಂಡಿದ್ದರು.
ಅದೇ ದಿನ, ಅಂದರೆ ಏ. 23ರಂದು ಅಧ್ಯಕ್ಷ ಮಸೂದ್ ಪೆಜೆಷ್ಕಿಯಾನ್, ವಿದೇಶ ಮಂತ್ರಿ ಅಬ್ಬಾಸ್ ಅರಾಗ್ಚಿ ಹಾಗೂ ಸಂಸತ್ ಅಧ್ಯಕ್ಷ ಮೊಹಮ್ಮದ್ ಬಘೕರ್ ಘಾಲಿಬಾಫ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದರು. ಮೂವರ ಪೋಸ್ಟ್ಗಳ ಒಕ್ಕಣೆ ಒಂದೇ, ‘ನಮ್ಮಲ್ಲಿ ಉದಾರವಾದಿಗಳು ಮತ್ತು ತೀವ್ರವಾದಿಗಳು ಅಂತೇನೂ ಇಲ್ಲ, ಇರುವುದು ಇರಾನಿಗಳು ಮಾತ್ರ’ ಎಂದು. ಮೂವರ ಪೋಸ್ಟ್ಗಳೂ ಒಂದೇ ತೆರನಾಗಿದ್ದುದು ಸೂಚಿಸಿದ್ದು ಅವುಗಳನ್ನು ಬರೆದದ್ದು ಒಬ್ಬರೇ, ಆತ ಈ ಮೂವರಲ್ಲಿ ಯಾರೂ ಅಲ್ಲ, ಐಆರ್ಜಿಸಿ ಮನುಷ್ಯನೇ ಇರಬೇಕು ಎಂದು. ಆತ ಬರೆದುಕೊಟ್ಟದ್ದನ್ನು ಈ ಮೂವರು ಮಹಾನಾಯಕರೂ ಉಸಿರೆತ್ತದೇ ತಂತಮ್ಮ ಹೆಸರುಗಳಲ್ಲಿ ಪೋಸ್ಟ್ ಮಾಡಿದ್ದಾರೆ, ಅಂದರೆ ಟೆಹರಾನ್ನಲ್ಲಿ ನಿಜವಾದ ಅಧಿಕಾರ ಚಲಾಯಿಸುತ್ತಿರುವುದು ಐಆರ್ಜಿಸಿ ಎನ್ನುವುದು ಅನುಮಾನಕ್ಕೆಡೆಯಿಲ್ಲದಂತೆ ಸಾಬೀತಾಗಿಹೋಯಿತು.
ಅತ್ತ ಅಮೆರಿಕಾದಲ್ಲಿ ಅಧ್ಯಕ್ಷ ಟ್ರಂಪ್ ಕದನವಿರಾಮವನ್ನು ಅನಿರ್ದಿಷ್ಟ ಕಾಲದವರೆಗೆ ಮುಂದುವರೆಸುವ ಘೊಷಣೆ ಮಾಡಿದರು. ಜತೆಗೆ ಇರಾನ್ ಬಂದರುಗಳ ಮೇಲಿನ ದಿಗ್ಬಂಧನವನ್ನು ಇನ್ನೂ ಶಕ್ತಿಯುತಗೊಳಿಸುವ ಮಾತುಗಳನ್ನೂ ಆಡಿದರು. ಆ ಮಾತುಗಳ ಸಂದರ್ಭ ಸಹ ಆಸಕ್ತಿಕರ. ಯುದ್ಧಗಳ ಕುರಿತಾಗಿ ಅಮೆರಿಕಾದ ಅಧ್ಯಕ್ಷರಿಗೆ ಅಪರಿಮಿತ ಅಧಿಕಾರಗಳಿವೆ. ಅಧ್ಯಕ್ಷ ಟ್ರಂಪ್ರ ಆ ಅಧಿಕಾರಗಳನ್ನು ಮಿತಿಗೊಳಿಸುವ ಮಸೂದೆಯೊಂದನ್ನು ಸೆನೇಟ್ 51:47 ಮತಗಳ ಅಂತರದಿಂದ ತಿರಸ್ಕರಿಸಿತು. ಟ್ರಂಪ್ ವಿರುದ್ಧ ಅಂತಹದೊಂದು ಮಸೂದೆ ಸೆನೇಟ್ನಲ್ಲಿ ಬಿದ್ದುಹೋಗುತ್ತಿರುವುದು ಇದು ಐದನೆಯ ಬಾರಿ. ಅಂದರೆ ಟ್ರಂಪ್ ವಿರುದ್ಧದ ದನಿಗಳು ಪ್ರಜಾಪ್ರಭುತ್ವವಾದಿ ಅಮೆರಿಕಾದಲ್ಲಿ ಎದ್ದರೂ ಅದೇ ಪ್ರಜಾಪ್ರಭುತ್ವ ವಿಧಾನದಲ್ಲಿ ಅವು ಬಿದ್ದುಹೋಗುತ್ತಲೂ ಇವೆ. ತಮ್ಮ ಈ ವಿಜಯವನ್ನು ಟ್ರಂಪ್ ದೊಡ್ಡದಾಗೇನೂ ಪ್ರಚಾರ ಮಾಡಿಕೊಳ್ಳಲಿಲ್ಲ, ಇರಾನ್ ಮೇಲೆ ದಾಳಿ ಮಾಡುವುದಾಗಿ ಹೇಳಿದರೂ ಹಾಗೇನೂ ಮಾಡಲಿಲ್ಲ. ಬದಲಿಗೆ ಇರಾನಿ ಬಂದರುಗಳ ಮೇಲಿನ ದಿಗ್ಬಂಧನವನ್ನು ತಣ್ಣಗೆ ಬಲಪಡಿಸಿದರು. ಅದೇಕೆ ಹಾಗೆ?
ಇರಾನ್ನಲ್ಲಿ ಮೂರೂವರೆ ಲಕ್ಷ ಸೈನಿಕರಿರುವ ಸೇನೆ ಇದೆ. ಅದು ಹಿಂದಿನಿಂದಲೂ ಇದೆ ಮತ್ತು 1979ಕ್ಕೆ ಮೊದಲು ಅದು ಪಶ್ಚಿಮ ಏಷ್ಯಾದ ಅತಿ ಬಲಿಷ್ಠ ಸೇನೆಯಾಗಿತ್ತು. ಫೆಬ್ರವರಿ 1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಧರ್ಮಗುರು ಆಯತೊಲ್ಲಾ ಖೊಮೇನಿ ಸೇನೆಯನ್ನು ಗಡಿ ಕಾಯುವುದಕ್ಕಷ್ಟೇ ಸೀಮಿತಗೊಳಿಸಿ ತನ್ನ ಸರ್ಕಾರದ ರಕ್ಷಣೆಗಾಗಿ ಅಂದರೆ ಆಂತರಿಕ ಸುಭದ್ರತೆಗಾಗಿ ಐಆರ್ಜಿಸಿಯನ್ನು ಸೃಷ್ಟಿಸಿದರು. ತಮ್ಮ ವಿರುದ್ಧ ಸೇನೆಯೇನಾದರೂ ಕಿತಾಪತಿ ಮಾಡಿದರೆ ಅದನ್ನೂ ನಿವಾರಿಸುವ ಅಧಿಕಾರ, ಅದಕ್ಕನುಗುಣವಾದ ಸವಲತ್ತುಗಳೂ ಐಆರ್ಜಿಸಿಗೆ ದೊರೆತವು. ಸವೋಚ್ಚ ಧಾರ್ವಿುಕ ನಾಯಕನ ಆಶೀರ್ವಾದದಿಂದ ಕೊಬ್ಬಿದ ಐಆರ್ಜಿಸಿ ತನ್ನ ಆರ್ಥಿಕ ಶಕ್ತಿಯನ್ನು ವ್ಯವಸ್ಥಿತವಾಗಿ ವೃದ್ಧಿಸಿಕೊಳ್ಳತೊಡಗಿತು. ಇಂದು ಅದು ವಿದ್ಯುತ್ ಉತ್ಪಾದನೆ, ವಿವಿಧ ಕೈಗಾರಿಕೆಗಳು, ಸಾರಿಗೆ, ವ್ಯಾಪಾರ ಹಾಗೂ ಇತರ ಅನೇಕ ಕ್ಷೇತ್ರಗಳಲ್ಲಿ ತನ್ನ ಕೈಯಾಡಿಸುತ್ತಿದೆ. ದೇಶದ ವಾರ್ಷಿಕ ಜಿಡಿಪಿಯಲ್ಲಿ ಅರ್ಧದಷ್ಟು ಭಾಗ ಬರುವುದು ಐಆರ್ಜಿಸಿ ಒಡೆತನದ ಆರ್ಥಿಕ ವಹಿವಾಟುಗಳಿಂದಲೇ. ಈ ಸೇನೆ ತೈಲ ವಹಿವಾಟಿನ ಮೇಲೂ ತನ್ನ ನಿಯಂತ್ರಣ ಸ್ಥಾಪಿಸಿಕೊಂಡಿದೆ. ಹೀಗಾಗಿ ಕೇವಲ ಒಂದೂಕಾಲು ಲಕ್ಷದಷ್ಟು ಸೈನಿಕರಿರುವ ಅದು ರಾಷ್ಟ್ರೀಯ ಸೇನೆಗಿಂತಲೂ ಹೆಚ್ಚು ಶಕ್ತಿಯುತ, ಅಧಿಕಾರಯುತ ಹಾಗೂ ಪ್ರಭಾವಶಾಲಿ. ಕೇವಲ ಸವೋಚ್ಚ ಧಾರ್ವಿುಕ ನಾಯಕ ಅಂದರೆ ಆಯತೊಲ್ಲಾಗೆ ಮಾತ್ರ ನಿಷ್ಠವಾಗಿರುವ ಅದರ ಶಕ್ತಿ ಜನರಿಂದ ಚುನಾಯಿತರಾದ ಅಧ್ಯಕ್ಷ, ಮಂತ್ರಿಮಂಡಲ ಹಾಗೂ ಸಂಸತ್ಗಿಂತಲೂ ಅಧಿಕ.
ಆಯತೊಲ್ಲಾ ರುಹೊಲ್ಲಾ ಖೊಮೇನಿ ಕಟ್ಟಿದ ಐಆರ್ಜಿಸಿ 1989ರಿಂದ ಆಯತೊಲ್ಲಾ ಆಲಿ ಖಮೇನಿಯವರ ಪೋಷಣೆಯಲ್ಲಿ ಕೊಬ್ಬಿ ಬೆಳೆಯಿತು. ಆದರೆ ಫೆ. 28ರಂದು ಸವೋಚ್ಚ ನಾಯಕ ಖಮೇನಿ ಮೃತ್ಯುವಶವಾದರು. ಅವರ ಜತೆ ಐಆರ್ಜಿಸಿ ಮುಖ್ಯಸ್ಥ ಸಹ. ವ್ಯವಸ್ಥಿತ ಸಂಘಟನೆಯಾದ ಐಆರ್ಜಿಸಿ ತನ್ನ ನಾಯಕನನ್ನು ಆರಿಸಿಕೊಂಡಿತು, ಉಗ್ರ ಜಿಹಾದಿ ಮನೋಭಾವದ ಜನರಲ್ ಅಹ್ಮದ್ ವಹೀದಿ ಐಆರ್ಜಿಸಿ ಕಮ್ಯಾಂಡರ್-ಇನ್-ಚೀಫ್ ಆದರು. ಆದರೆ ಅಂತಹ ಅದೃಷ್ಟ ದೇಶಕ್ಕಿಲ್ಲ. ಆಲಿ ಖಮೇನಿಯವರ ಪುತ್ರ ಮುಜ್ತಾಬಾ ಖಮೇನಿ ಸಹ ಫೆ. 28ರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡರು. ಅವರ ಕರುಳು ಮತ್ತು ಯಕೃತ್ತಿಗಾದ ಹಾನಿ ಈಗ ವಾಸಿಯಾಗಿದೆ, ಆದರೆ ಕಾಲುಗಳನ್ನು ಕಳೆದುಕೊಂಡ ಅವರಿಗೆ ಕೃತಕ ಕಾಲುಗಳನ್ನು ಜೋಡಿಸಲಾಗುತ್ತಿದೆಯಂತೆ. ಜತೆಗೆ ಮುಖ ಸಂಪೂರ್ಣವಾಗಿ ವಿರೂಪಗೊಂಡು ಪ್ಲಾಸ್ಟಿಕ್ ಸರ್ಜರಿಯ ಅಗತ್ಯವಿದೆಯಂತೆ. ಹೀಗಾಗಿ ಮಾ. 9ರಂದು ಅವರು ಹೊಸ ಆಯತೊಲ್ಲಾ ಆಗಿ ಆಯ್ಕೆಯಾದರೂ ಹೊರಗೆ ಮುಖ ತೋರಿಸಲಾಗುತ್ತಿಲ್ಲ. ಅವರ ಹೇಳಿಕೆಗಳನ್ನು ರಾಷ್ಟ್ರೀಯ ವಾಹಿನಿಯಲ್ಲಿ ಬೇರಾರೋ ಓದುತ್ತಾರೆ. ಅವರು ಟೆಹರಾನ್ ಯೂನಿವರ್ಸಿಟಿಯ ಮೆಡಿಕಲ್ ಕಾಲೇಜಿನ ಐಸಿಯುನಲ್ಲಿದ್ದಾರೆ ಎಂಬ ಸುದ್ದಿ ಒಮ್ಮೆ ಬಂದರೆ ಅವರು ರಷ್ಯಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಇನ್ನೊಮ್ಮೆ ಬರುತ್ತದೆ.
ಇದೆಲ್ಲಾ ಐಆರ್ಜಿಸಿ ಹೊರಗೆ ಹಾಕುವ ಸುದ್ದಿಗಳು. ಆದರೆ ಮುಜ್ತಾಬಾ ಖಮೇನಿ ಫೆ. 28ರಿಂದಲೂ ಕೋಮಾದಲ್ಲಿದ್ದಾರೆ ಎಂದು ಇಸ್ರೇಲ್ ಹೇಳುತ್ತದೆ. ಅದೇ ನಿಜವಾಗಿದ್ದರೆ ತಾನು ಆಯತೊಲ್ಲಾ ಆಗಿದ್ದೇನೆ ಎಂದು ಮುಜ್ತಾಬಾ ಖಮೇನಿಗೆ ಗೊತ್ತೇ ಇಲ್ಲ! ಇದಕ್ಕೆ ಪುಷ್ಟಿ ನೀಡುವ ಅಂಶವೆಂದರೆ ಐಆರ್ಜಿಸಿ ಮುಖ್ಯಸ್ಥ ಅಹ್ಮದ್ ವಹೀದಿ ತಾನೇ ದೇಶದ ಡಿ ಫ್ಯಾಕ್ಟೋ ನಾಯಕ ಎಂಬಂತೆ ವರ್ತಿಸುತ್ತಿರುವುದು; ಅಧ್ಯಕ್ಷ ಪೆಜೆಷ್ಕಿಯಾನ್, ವಿದೇಶ ಮಂತ್ರಿ ಅರಾಗ್ಚಿ ಜತೆಗೆ ಒಂದುಕಾಲದಲ್ಲಿ ಐಆರ್ಜಿಸಿ ಬ್ರಿಗೇಡಿಯರ್ ಜನರಲ್ ಆಗಿದ್ದ ಸಂಸತ್ ಸಭಾಪತಿ ಘಾಲಿಬಾಫ್ ಮೇಲೂ ಸವಾರಿ ಮಾಡುತ್ತಿರುವುದು.
ಇದೆಲ್ಲವನ್ನೂ ಅರಿತಿರಬಹುದಾದ ಟ್ರಂಪ್ ಐಆರ್ಜಿಸಿಯನ್ನು ಮಟ್ಟಹಾಕದೇ ಇರಾನ್ ಅನ್ನು ಶಾಂತಿಗೆ ಒಪ್ಪಿಸಲಾಗದು, ಐಆರ್ಜಿಸಿಯನ್ನು ಶಕ್ತಿಗುಂದಿಸಬೇಕಾದರೆ ಅದರ ಹಣಕಾಸಿನ ಮೂಲವನ್ನು ಬಂದ್ ಮಾಡಬೇಕು ಎಂದು ಲೆಕ್ಕಹಾಕಿ ಅದರಂತೆ ಕಾರ್ಯಯೋಜನೆ ರೂಪಿಸಿದ್ದಾರೆ.
ಈ ಲೇಖನ ಬರೆಯುವ ಹೊತ್ತಿನಲ್ಲಿ ಇರಾನ್ನಲ್ಲಿ ಕೇವಲ 31 ಬಿಲಿಯನ್ ಡಾಲರ್ಗಳು ಮಾತ್ರವಿವೆ. ದಿಗ್ಬಂಧನದ ಕಾರಣ ಹೊರಗಿನಿಂದ ಯಾವ ಆದಾಯವೂ ಬರುತ್ತಿಲ್ಲ. ದಿಗ್ಬಂಧನ ಹೀಗೇ ಮುಂದುವರೆದರೆ ಇನ್ನು ಹೆಚ್ಚೆಂದರೆ ಎರಡು ವಾರಗಳಲ್ಲಿ ಇರಾನ್ ದಿವಾಳಿಯಾಗುತ್ತದೆ. ಆಗ ತನ್ನ ಸೈನಿಕರಿಗೂ ಸಂಬಳ ಕೊಡಲು ಐಆರ್ಜಿಸಿಗೆ ಸಾಧ್ಯವಾಗುವುದಿಲ್ಲ. ಅಂತಹ ಸ್ಥಿತಿ ಈಗಾಗಲೇ ಆರಂಭವಾಗಿದೆಯೆಂದು ಸುದ್ದಿ. ಜತೆಗೆ ಜನಸಾಮಾನ್ಯರೂ ಐಆರ್ಜಿಸಿ ವಿರುದ್ಧ ತಿರುಗಿಬೀಳುತ್ತಿದ್ದಾರೆ. ರಾಜಧಾನಿಯಲ್ಲಿ ಜನ ಅಡುಗೆ ಅನಿಲ ಸಿಲಿಂಡರ್ಗಳನ್ನೇ ಐಆರ್ಜಿಸಿ ಸೈನಿಕರ ವಿರುದ್ಧ ಸ್ಪೋಟಕಗಳಾಗಿ ಬಳಸಿ ದಾಳಿಯೆಸಗುತ್ತಿರುವ ಸುದ್ದಿಗಳು ಬರುತ್ತಿವೆ.
ಆರ್ಥಿಕ ದಿಗ್ಬಂಧನ ಬಿಗಿಯಾಗಿ ಮುಂದುವರೆದರೆ ಐಆರ್ಜಿಸಿ ತಾನೇ ಮಾತುಕತೆಗೆ ಬರಬಹುದು, ಅಡಗಿಸಿಟ್ಟಿರುವ ಸಂಸ್ಕರಿತ ಯುರೇನಿಯಂ ಅನ್ನು ಒಪ್ಪಿಸಬಹುದು, ಹೊಮುಜ್ ಜಲಸಂಧಿಯನ್ನು ತೆರೆಯಬಹುದು ಅಥವಾ ಅದೆಲ್ಲವನ್ನೂ ಮಾಡಲು ರಾಜಕೀಯ ನೇತಾರರಿಗೆ ಅವಕಾಶ ಮಾಡಿಕೊಟ್ಟು ತಾನು ಹಿನ್ನೆಲೆಗೆ ಸರಿಯಬಹುದು. ಇದು ಟ್ರಂಪ್ರ ಲೆಕ್ಕಾಚಾರವಾಗಿರಬಹುದು.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)