ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಭವನೀಯ 'ಪರಮಾಣು ಯುದ್ಧ'ವನ್ನು ತಡೆದಿದ್ದೇನೆ ಎಂಬ ತಮ್ಮ ಹಳೆಯ ಪ್ರತಿಪಾದನೆಯನ್ನು ಪುನರುಚ್ಚರಿಸಿದ್ದಾರೆ.
ತಮ್ಮ ಎರಡನೇ ಅವಧಿಯ ಮೊದಲ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶ್ವೇತಭವನ ಬಿಡುಗಡೆ ಮಾಡಿದ "365 ದಿನಗಳಲ್ಲಿ 365 ಸಾಧನೆಗಳು" ವರದಿಯಲ್ಲಿ, ಭಾರತ-ಪಾಕ್ ನಡುವೆ ಕದನ ವಿರಾಮ ಏರ್ಪಡಿಸಿದ್ದು ತಮ್ಮ ದೊಡ್ಡ ಯಶಸ್ಸು ಎಂದು ಉಲ್ಲೇಖಿಸಲಾಗಿದೆ.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಟ್ರಂಪ್, "ಕಳೆದ 10 ತಿಂಗಳಲ್ಲಿ ನಾನು ಎಂಟು ಅಸಾಧ್ಯವಾದ ಯುದ್ಧಗಳನ್ನು ಕೊನೆಗಾಣಿಸಿದ್ದೇನೆ. ಭಾರತ ಮತ್ತು ಪಾಕಿಸ್ತಾನ ಪರಸ್ಪರ ಸಂಘರ್ಷಕ್ಕಿಳಿದಿದ್ದವು. ಎಂಟು ವಿಮಾನಗಳು ಪತನಗೊಂಡಿದ್ದವು. ನನ್ನ ಪ್ರಕಾರ ಅವರು ಪರಮಾಣು ಯುದ್ಧದ ಹಂತಕ್ಕೆ ತಲುಪಿದ್ದರು. ಆ ಸಮಯದಲ್ಲಿ ನಾನು ಮಧ್ಯಪ್ರವೇಶಿಸಿ ಕನಿಷ್ಠ 10 ಮಿಲಿಯನ್ (1 ಕೋಟಿ) ಜನರ ಪ್ರಾಣ ಉಳಿಸಿದ್ದೇನೆ ಎಂದು ಪಾಕ್ ಪ್ರಧಾನಿಯೇ ಹೇಳಿದ್ದಾರೆ," ಎಂದು ತಿಳಿಸಿದರು. ಇದೇ ವೇಳೆ ತಮಗೆ ನೋಬೆಲ್ ಶಾಂತಿ ಪ್ರಶಸ್ತಿ ಸಿಗದಿರುವ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದರು.
'ಆಪರೇಷನ್ ಸಿಂಧೂರ್' 2025ರ ಏಪ್ರಿಲ್‌ನಲ್ಲಿ ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ಉಗ್ರರ ದಾಳಿಗೆ ಪ್ರತಿಯಾಗಿ ಭಾರತವು ಮೇ ತಿಂಗಳಲ್ಲಿ 'ಆಪರೇಷನ್ ಸಿಂಧೂರ್' ನಡೆಸಿತ್ತು. ಪಾಕಿಸ್ತಾನದ ಒಳಗಿರುವ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತ ಈ ಕಾರ್ಯಾಚರಣೆ ನಡೆಸಿತ್ತು.
ಟ್ರಂಪ್ ಅವರ ಈ ಹಕ್ಕುಗಳನ್ನು ಭಾರತ ಸರ್ಕಾರ ಮೊದಲಿನಿಂದಲೂ ಸಾರಾಸಗಟಾಗಿ ತಿರಸ್ಕರಿಸುತ್ತಾ ಬಂದಿದೆ. ಕದನ ವಿರಾಮವು ಉಭಯ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (DGMO) ನಡುವಿನ ನೇರ ಮಾತುಕತೆಯ ಫಲವೇ ಹೊರತು ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ಟ್ರಂಪ್ ವಾದಕ್ಕೆ ಪುಷ್ಟಿಯಿಲ್ಲ
ಮೇ 2025 ರಿಂದಲೇ ಟ್ರಂಪ್ ಈ ಬಗ್ಗೆ ಹೇಳಿಕೆ ನೀಡುತ್ತಿದ್ದರೂ, ದೆಹಲಿ ಇದನ್ನು ನಿರಂತರವಾಗಿ ನಿರಾಕರಿಸುತ್ತಾ ಬಂದಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಯಾವುದೇ ಸಮಸ್ಯೆಯು ದ್ವಿಪಕ್ಷೀಯವಾಗಿಯೇ ಬಗೆಹರಿಯಬೇಕು ಎಂಬುದು ಭಾರತದ ಅಚಲ ನಿಲುವಾಗಿದೆ. ಒಟ್ಟಾರೆಯಾಗಿ, ಅಂತರಾಷ್ಟ್ರೀಯ ವೇದಿಕೆಯಲ್ಲಿ ತಮಗೊಂದು ಶಾಂತಿ ದೂತನ ಪಟ್ಟ ಅಲಂಕರಿಸಲು ಟ್ರಂಪ್ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ,(ಏಜೆನ್ಸೀಸ್).