ಮೊಜ್ತಾಬಾ ಖಮೇನಿ ಎಲ್ಲಿದ್ದಾರೆಂದು ನನಗೆ ಗೊತ್ತು, ಆದರೆ ಹೇಳಲ್ಲ! ಅಮೆರಿಕ ಅಧ್ಯಕ್ಷರ ರಹಸ್ಯ ಮಾತಿನ ಮರ್ಮವೇನು?
ವಾಷಿಂಗ್ಟನ್: ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಅವರ ಸದ್ಯದ ಪರಿಸ್ಥಿತಿ ಮತ್ತು ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಜಾಗತಿಕ ಮಟ್ಟದಲ್ಲಿ ಭಾರಿ ಕುತೂಹಲ ಮೂಡಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Trump About Mojtaba Khamenei) ಅತ್ಯಂತ ಮಹತ್ವದ ಹಾಗೂ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಮೊಜ್ತಾಬಾ ಖಮೇನಿ ಎಲ್ಲಿದ್ದಾರೆ ಎಂಬುದು ಬಹುಶಃ ನನಗೆ ಗೊತ್ತು. ಅಷ್ಟೇ ಅಲ್ಲ, ಅವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಟ್ರಂಪ್ ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಸುದ್ದಿಸಂಸ್ಥೆ ಎನ್‌ಬಿಸಿ ನ್ಯೂಸ್'ನ ಮೀಟ್ ದಿ ಪ್ರೆಸ್' ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ಇರಾನ್ ನಾಯಕನ ನಿಗೂಢ ನಡೆಗಳ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನನಗೆ ಗೊತ್ತು, ಆದರೆ ಹೇಳಲ್ಲ!
ಮೊಜ್ತಾಬಾ ಖಮೇನಿ ಸದ್ಯ ಎಲ್ಲಿದ್ದಾರೆ ಮತ್ತು ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂದು ಮಾಧ್ಯಮದವರು ಪ್ರಶ್ನಿಸಿದಾಗ ಉತ್ತರಿಸಿದ ಟ್ರಂಪ್, ಅವರು ಎಲ್ಲಿದ್ದಾರೆ ಎಂದು ನಾನು ನೇರವಾಗಿ ಹೇಳಲು ಇಷ್ಟಪಡುವುದಿಲ್ಲ. ಆದರೆ, ಅವರು ಇರುವ ಜಾಗದ ಬಗ್ಗೆ ನನಗೆ ನಿಖರವಾದ ಮಾಹಿತಿ ಇರುವ ದೊಡ್ಡ ಸಾಧ್ಯತೆ ಇದೆ ಎಂದಿದ್ದಾರೆ.
ಖಮೇನಿ ಅವರು ಇರಾನ್ ದೇಶದ ಒಳಗೇ ಇದ್ದಾರೆಯೇ ಎಂದು ಪತ್ರಕರ್ತರು ಒತ್ತಾಯಿಸಿ ಕೇಳಿದಾಗ, ಅದನ್ನು ಈಗಲೇ ಬಹಿರಂಗಪಡಿಸಲು ನಾನು ಸಿದ್ಧನಿಲ್ಲ ಎಂದು ರಹಸ್ಯ ಕಾಯ್ದುಕೊಂಡಿದ್ದಾರೆ.
ಖಮೇನಿ ತೀವ್ರ ಗಾಯಗೊಂಡಿದ್ದಾರೆ: ಟ್ರಂಪ್
ಇರಾನ್ ನಾಯಕನ ದೈಹಿಕ ಸ್ಥಿತಿಯ ಬಗ್ಗೆ ಮಾತನಾಡಿದ ಟ್ರಂಪ್, ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಆದರೂ ಅಂತಹ ಸ್ಥಿತಿಯಲ್ಲಿಯೂ ಅವರು ಸಾರ್ವಜನಿಕವಾಗಿ ಲಿಖಿತ ಸಂದೇಶಗಳನ್ನು ನೀಡುತ್ತಾ ದೇಶದ ಬೆಳವಣಿಗೆಗಳ ಬಗ್ಗೆ ಮಾತನಾಡುತ್ತಿರುವುದು ಅವರಲ್ಲಿರುವ ಧೈರ್ಯವನ್ನು ತೋರಿಸುತ್ತದೆ. ಅಷ್ಟೊಂದು ಭೀಕರವಾಗಿ ಗಾಯಗೊಂಡಿರುವ ಯಾವುದೇ ಸಾಮಾನ್ಯ ವ್ಯಕ್ತಿಯಾಗಿದ್ದರೆ, ಅಮೆರಿಕದೊಂದಿಗಿನ ಸಂಬಂಧ ಬಗ್ಗೆ ಯೋಚಿಸುತ್ತಿರಲಿಲ್ಲ. ತಮ್ಮ ಪ್ರಾಣ ಉಳಿಸಿಕೊಳ್ಳುವ ಕಡೆಗಷ್ಟೇ ಗಮನ ಹರಿಸುತ್ತಿದ್ದರು ಎಂದು ಖಮೇನಿ ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ.
ಅಲ್ಲದೆ, ಮೊಜ್ತಾಬಾ ತಮ್ಮ ತಂದೆಗಿಂತ ವಯಸ್ಸಿನಲ್ಲಿ ಕಿರಿಯರು ಹಾಗೂ ಹೆಚ್ಚು ತಾರ್ಕಿಕವಾಗಿ ಯೋಚಿಸುವ ವ್ಯಕ್ತಿ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.
ಫೆಬ್ರವರಿ 28 ರಿಂದ ನಾಪತ್ತೆಯಾಗಿದ್ದ ನಾಯಕ!
ಕಳೆದ ಫೆಬ್ರವರಿ 28 ರಂದು ನಡೆದ ಭೀಕರ ಯುದ್ಧದ ಆರಂಭದ ದಾಳಿಯಲ್ಲಿ ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಮತ್ತು ಇರಾನ್‌ನ ಹಲವು ಹಿರಿಯ ಸೇನಾ ಕಮಾಂಡರ್‌ಗಳು ಮೃತಪಟ್ಟಿದ್ದರು. ಅದೇ ದಾಳಿಯಲ್ಲಿ ಮೊಜ್ತಾಬಾ ಖಮೇನಿ ಕೂಡ ಗಂಭೀರವಾಗಿ ಗಾಯಗೊಂಡಿದ್ದರು. ಅಂದಿನಿಂದ ಇಂದಿನವರೆಗೆ ಅವರು ಒಮ್ಮೆಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಅಥವಾ ಅವರ ಧ್ವನಿ ಕೇಳಿಬಂದಿಲ್ಲ. ಕೇವಲ ಅವರ ಹೆಸರಿನಲ್ಲಿ ಹೊರಬರುತ್ತಿರುವ ಲಿಖಿತ ಸಂದೇಶಗಳನ್ನು ಇರಾನ್ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಹೀಗಾಗಿ ಅವರು ಬದುಕಿದ್ದಾರೆಯೇ ಇಲ್ಲವೇ ಎಂಬ ಸಂಶಯ ಇಡೀ ಜಗತ್ತನ್ನು ಕಾಡುತ್ತಿತ್ತು.
ಇದೇ ವೇಳೆ, ಇರಾನ್ ಜೊತೆ ಮಾತುಕತೆ ನಡೆಸಿ ಅಲ್ಲಿನ ಪರಮಾಣು ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಇರಾನ್ ಒಪ್ಪಿಕೊಂಡಿದೆ ಎಂದು ಟ್ರಂಪ್ ಇತ್ತೀಚೆಗೆ ಪ್ರತಿಪಾದಿಸಿದ್ದರು. ಆದರೆ, ಇರಾನ್ ಸರ್ಕಾರ ಇದನ್ನು ತಕ್ಷಣವೇ ನಿರಾಕರಿಸಿತ್ತು. ಈಗ ಟ್ರಂಪ್ ನೀಡಿರುವ ಈ ಹೊಸ ಹೇಳಿಕೆ ಜಾಗತಿಕ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ,(ಏಜೆನ್ಸೀಸ್).