ವಿಶ್ವದ ಖ್ಯಾತ ಟೆನ್ನಿಸ್ ಆಟಗಾರ ಮತ್ತು ದಂತಕತೆ ನೋವಾಕ್ ಜೋಕೋವಿಚ್
Novak Djokovic: ವಿಶ್ವದ ಖ್ಯಾತ ಟೆನ್ನಿಸ್ ಆಟಗಾರ ಮತ್ತು ದಂತಕತೆ ನೋವಾಕ್ ಜೋಕೋವಿಚ್ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಬಾಲ್ಯದ ಕಷ್ಟಗಳನ್ನು ನೆನೆಪಿಸಿಕೊಂಡಿದ್ದಾರೆ. ಅಮೆರಿಕಾಗೆ ಟೆನ್ನಿಸ್ ಆಡಲು ಹೋಗೋಕೆ ತಮ್ಮ ಬಳಿ ಹಣ ಇಲ್ಲದ್ದನ್ನು, ಅದಕ್ಕಾಗಿ ಅಂದು ಹಣ ಹೊಂದಿಸಲು ತಮ್ಮ ತಂದೆ ಮಾಡಿದ ತ್ಯಾಗದ ಮಾತನಾಡಿದ್ದಾರೆ.
ಇತಿಹಾಸದಲ್ಲೇ 24 ಗ್ರ್ಯಾಂಡ್ ಸ್ಲ್ಯಾಮ್ ಟೈಟಲ್ ಗೆದ್ದಿರುವ, ಎಟಿಪಿ ರ್ಯಾಂಕಿಂಗ್ನಲ್ಲಿ ವಿಶ್ವದ ನಂ. 1 ಸ್ಥಾನವನ್ನು ಪಡೆದಿರುವ ಸೆರ್ಬಿಯಾನ್ ಟೆನ್ನಿಸ್ ಆಟಗಾರ ನೋವಾಕ್ ಜೋಕೋವಿಕ್ ಅವರ ಬಾಲ್ಯ ೧೯೯೦ರ ದಶಕದಲ್ಲಿ ಯುಗೋಸ್ಲಾವಿಯಾ ಯುದ್ಧ ಮತ್ತು ಆರ್ಥಿಕ ಸಂಕಷ್ಟದ ನಡುವೆ ಕಠಿಣ ಪರಿಶ್ರಮ ಮತ್ತು ಕುಟುಂಬದ ಬೆಂಬಲದಿಂದ ಇಂದು ಟೆನ್ನಿಸ್ ದಂತಕತೆಯಾಗಿದ್ದಾರೆ.
ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ನೋವಾಕ್, ಟೆನ್ನಿಸ್ ಆಡಲು ನಮ್ಮ ಬಳಿ ಹಣವಿರಲಿಲ್ಲ. ಟೂರ್ನಾಮೆಂಟ್ಗೆ ನಾನು ಅಮೆರಿಕಾಗೆ ಹೋಗಬೇಕಿತ್ತು. ಅಂದಿನ ಪ್ರಯಾಣ ದರ, ವಾಸ್ತವ್ಯಕ್ಕೆ ಹೋಟೆಲ್ ಬಿಲ್ ಸೇರಿ ಸುಮಾರು 5 ಸಾವಿರ ಡಾಲರ್ ಬೇಕಾಗಿತ್ತು. ಅಂದಿನ ಸೆರ್ಬಿಯಾದಲ್ಲಿನ ಪರಿಸ್ಥಿತಿಯಿಂದಾಗಿ ಯಾವುದೇ ಬ್ಯಾಂಕ್ಗಳಲ್ಲಿ ಲೋನ್ ಸಿಗಲಿಲ್ಲ. ಕೊನೆಯದಾಗಿ ನಮ್ಮ ತಂದೆ ಕ್ರಿಮಿನಲ್ಗಳ ಹತ್ತಿರ ಸಾಲ ಕೇಳಲು ಹೋಗಿದ್ದರು.
ಆ ಕ್ರಿಮಿನಲ್ಗಳು 5 ಸಾವಿರ ಡಾಲರ್ಗೆ ಶೇ. 20ರಷ್ಟು ಬಡ್ಡಿ, ಆದರೆ ಈಗ ನೀವು ತುರ್ತಾಗಿ ಬೇಕು ಎಂದು ಕೇಳುತ್ತಿದ್ದೀರಿ. ಶೇ. 30ರಷ್ಟು ಬಡ್ಡಿಯಾಗುತ್ತದೆ ಎಂದು ಹೇಳಿದ್ದರು. ಆಯ್ತು ಕೊಡಿ ನಾನು ಹೇಗಾದರೂ ಮರಳಿ ಪಾವತಿಸುವೆ ಎಂದು ಸಾಲ ತೆಗೆದುಕೊಂಡು ಬಂದಿದ್ದರು.
ಆಗ ನನಗೆ 15 ವರ್ಷ, 5 ಸಾವಿರ ಡಾಲರ್ ಸಾಲ ತೆಗೆದುಕೊಂಡು ಬಂದು ಅಮೆರಿಕಾದಲ್ಲಿ ಜೂನಿಯರ್ ಟೂರ್ನಾಮೆಂಟ್ಗಳಲ್ಲಿ ಆಡಿದೆ. ಐಜಿಎಂ ಸಂಪರ್ಕ ಬೆಳೆಯಿತು. ಆದರೆ ಮುಂದೆ ಸಾಲ ವಾಪಾಸಾತಿಗೆ ತಂದೆ ಕಷ್ಟಗಳನ್ನು ಎದುರಿಸಬೇಕಾಯಿತು. ಕ್ರಿಮಿನಲ್ಗಳಿಂದ ಭಾರೀ ಒತ್ತಡ ಬಂದಿತು. ಕಾರು ಚೇಸ್, ಅಪಘಾತಗಳು ಸಹ ಸಂಭವಿಸಿದವು. ಅಂತಹ ಪರಿಸ್ಥಿತಿಯಿಂದಾಗಿ ನಾನು ಈ ಮಟ್ಟಕ್ಕೆ ಬೆಳೆದ. ಈ ಯಶಸ್ಸಿಗೆ ನಮ್ಮ ತಂದೆಯ ಧೈರ್ಯ, ತ್ಯಾಗ ಮರೆಯಲಾರದ್ದು ಎಂದು ಹೇಳಿದ್ದಾರೆ.
ನಾಲ್ಕನೇ ವಯಸ್ಸಿನಲ್ಲಿ ಟೆನ್ನಿಸ್ ಆಡಲು ಆರಂಭಿಸಿದ ನೋವಾಕ್, ಇತಿಹಾಸದಲ್ಲೇ 24 ಗ್ರ್ಯಾಂಡ್ ಸ್ಲ್ಯಾಮ್ ಟೈಟಲ್ ಗೆದ್ದ ಏಕೈಕ ಆಟಗಾರ. ದಾಖಲೆಯ 10 ಬಾರಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್. ಫ್ರೆಂಚ್ ಓಪನ್, ವಿಂಬಲ್ಡನ್, ಯುಎಸ್ ಓಪನ್‌ಗಳಲ್ಲಿ ಒಟ್ಟು ೨೪ ಟೈಟಲ್‌ಗಳು ಗೆದ್ದಿದ್ದಾರೆ. 2025ರಲ್ಲಿ ಎಲ್ಲ ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್‌ಗಳ ಸೆಮಿಫೈನಲ್ ತಲುಪಿದ ಹಿರಿಯ ಆಟಗಾರ.
ನೋವಾಕ್ 2014ರಲ್ಲಿ ಜೆಲೆನಾ ಅವರನ್ನು ವಿವಾಹವಾಗಿದ್ದು, ದಂಪತಿಗೆ ಸ್ಟೆಫನ್ ಮತ್ತು ತಾರಾ ಎಂಬ ಇಬ್ಬರು ಮಕ್ಕಳಿದ್ದಾರೆ. ಫೌಂಡೇಶನ್ ಮೂಲಕ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುತ್ತಿದ್ದಾರೆ (ಏಜೆನ್ಸೀಸ್).