Benjamin Netanyahu | ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
Benjamin Netanyahu: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಭೀಕರ ರೂಪ ತಾಳುತ್ತಿರುವ ಬೆನ್ನಲ್ಲೇ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸಾವಿನ ಕುರಿತಾದ ವದಂತಿಗಳು ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದ ಈ ಸುಳ್ಳು ಸುದ್ದಿಗಳಿಗೆ ಸ್ವತಃ ನೆತನ್ಯಾಹು ಅವರೇ ವೀಡಿಯೊ ಮೂಲಕ ಪೂರ್ಣವಿರಾಮ ಇಟ್ಟಿದ್ದಾರೆ.
ತಮ್ಮ ಸಾವಿನ ವದಂತಿಗಳು ತಾರಕಕ್ಕೇರಿರುವಾಗಲೇ ಪ್ರಧಾನಿ ನೆತನ್ಯಾಹು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಅದರಲ್ಲಿನ ವಿಡಿಯೋದಲ್ಲಿ ನೆತನ್ಯಾಹು ಆರಾಮವಾಗಿ ಕುಳಿತು ಕಪ್ ಕಾಫಿ ಸವಿಯುತ್ತಿರುವುದು ಕಂಡುಬಂದಿದೆ. ವದಂತಿಗಳಿಗೆ ಮಾರ್ಮಿಕವಾಗಿ ಉತ್ತರಿಸಿದ ಅವರು, ನಾನು ಕಾಫಿಗಾಗಿ ಸತ್ತಿದ್ದೇನೆ ಎಂದು ಹೇಳುವ ಮೂಲಕ ತಾವು ಜೀವಂತವಾಗಿದ್ದೇವೆ ಮತ್ತು ಆರೋಗ್ಯವಾಗಿದ್ದೇವೆ ಎಂಬ ಸಂದೇಶವನ್ನು ಶತ್ರು ರಾಷ್ಟ್ರಗಳಿಗೆ ರವಾನಿಸಿದ್ದಾರೆ.
ನೆತನ್ಯಾಹು ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಇರಾನಿನ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣದ ಬಳಕೆದಾರರು ಹರಡಿದ್ದರು. ನೆತನ್ಯಾಹು ಮಗ ಯಾಯಿರ್ ನೆತನ್ಯಾಹು ಹಲವು ದಿನಗಳಿಂದ ಎಕ್ಸ್ನಲ್ಲಿ ಸಕ್ರಿಯರಾಗಿಲ್ಲದ ಕಾರಣ ಈ ಅನುಮಾನಗಳು ದಟ್ಟವಾಗಿದ್ದವು. ಊಹಾಪೋಹದ ಸುದ್ದಿಗಳಿಗೆ ತಕ್ಷಣವೇ ಕಾರ್ಯಪ್ರವೃತ್ತವಾದ ಇಸ್ರೇಲ್ ಪ್ರಧಾನಿ ಕಚೇರಿ, ಇವೆಲ್ಲವೂ ನಕಲಿ ಸುದ್ದಿ ಎಂದು ಸ್ಪಷ್ಟಪಡಿಸಿದೆ.
ಈ ಬೆಳವಣಿಗೆಗಳ ಮಧ್ಯೆಯೇ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೆತನ್ಯಾಹು ವಿರುದ್ಧ ಅತ್ಯಂತ ಉಗ್ರವಾದ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ನೆತನ್ಯಾಹುರನ್ನು ಮಕ್ಕಳನ್ನು ಕೊಲ್ಲುವ ಅಪರಾಧಿ ಎಂದು ಕರೆದಿದೆ. ಒಂದು ವೇಳೆ ನೆತನ್ಯಾಹು ಬದುಕಿದ್ದರೆ, ಅವರನ್ನು ಪೂರ್ಣ ಬಲದಿಂದ ಬೆನ್ನಟ್ಟಿ ಕೊಲ್ಲುತ್ತೇವೆ ಎಂದು ಇರಾನ್ ಪಡೆಗಳು ಬೆದರಿಕೆ ಹಾಕಿವೆ.
ಯುದ್ಧದ ಹಿನ್ನೆಲೆ
ಇತ್ತೀಚಿನ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಗಳ ಬಳಿಕ ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಹತ್ಯೆ ಮಾಡಲಾಯಿತು. ಇದಾದ ಬೆನ್ನಲ್ಲೇ ಸಂಘರ್ಷ ತೀವ್ರಗೊಂಡಿದೆ. ಇರಾನ್ ಪ್ರತೀಕಾರವಾಗಿ ಅಮೆರಿಕದ ನೆಲೆಗಳು ಹಾಗೂ ಸೌದಿ ಅರೇಬಿಯಾ, ಯುಎಇ ಮತ್ತು ಕತಾರ್‌ನಲ್ಲಿರುವ ಅಮೆರಿಕ ಸಂಬಂಧಿತ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡಿದೆ.‘
ಇರಾನ್ ಸಂಪೂರ್ಣವಾಗಿ ನಾಶವಾಗಿದೆ ಮತ್ತು ಯುದ್ಧ ಕೊನೆಗೊಳ್ಳುವ ಹಂತದಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರೂ, ಹಗೆತನ ಮುಂದುವರಿದಿದೆ(ಏಜೆನ್ಸೀಸ್).