Prostate Cancer 
ವಿದೇಶ

ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ: ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿಕೆ! | Prostate Cancer

ಜೆರುಸಲೇಂ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (76) ಅವರು ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ (Prostate Cancer) ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ರಹಸ್ಯವಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಇದೀಗ ತಮಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು ಮತ್ತು ಯಶಸ್ವಿ ಚಿಕಿತ್ಸೆಯ ನಂತರ ಈಗ ತಾವು 'ಕ್ಯಾನ್ಸರ್ ಮುಕ್ತ' ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.
ಯುದ್ಧದ ಸಂದರ್ಭದಲ್ಲಿ ಶತ್ರು ರಾಷ್ಟ್ರಗಳು ಈ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂಬ ಕಾರಣಕ್ಕೆ ಚಿಕಿತ್ಸೆಯ ವಿವರಗಳನ್ನು ಇಷ್ಟು ದಿನ ಗುಟ್ಟಾಗಿಡಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪತ್ತೆಯಾಗಿದ್ದು ಹೇಗೆ?

2024ರಲ್ಲಿ ನೆತನ್ಯಾಹು ಅವರಿಗೆ ಪ್ರಾಸ್ಟೇಟ್ ಗ್ರಂಥಿಯ ಬಾವು (Benign Enlargement) ಕಾಣಿಸಿಕೊಂಡಾಗ ಹಡಸ್ಸಾ ವೈದ್ಯಕೀಯ ಕೇಂದ್ರದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆ ಸಮಯದಲ್ಲಿ ಎಲ್ಲವೂ ಸಾಮಾನ್ಯವೆಂದು ಕಂಡುಬಂದಿತ್ತು. ಆದರೆ, ನಂತರದ ನಿಯಮಿತ ತಪಾಸಣೆಯ ವೇಳೆ ನಡೆಸಿದ ಎಂಆರ್‌ಐ (MRI) ಸ್ಕ್ಯಾನ್‌ನಲ್ಲಿ ಕೇವಲ ಒಂದು ಮಿಲಿಮೀಟರ್‌ಗಿಂತಲೂ ಕಡಿಮೆ ಗಾತ್ರದ ಸಣ್ಣ ಗೆಡ್ಡೆ ಇರುವುದು ಪತ್ತೆಯಾಯಿತು. ಹೆಚ್ಚಿನ ಪರೀಕ್ಷೆಗಳ ನಂತರ ಇದು ಪ್ರಾಸ್ಟೇಟ್ ಕ್ಯಾನ್ಸರ್‌ನ ಆರಂಭಿಕ ಹಂತ ಎಂದು ದೃಢಪಟ್ಟಿತ್ತು.

ಇರಾನ್ ಅಪಪ್ರಚಾರದ ಭೀತಿ

ತಮ್ಮ ಅನಾರೋಗ್ಯದ ಸುದ್ದಿಯನ್ನು ತಡವಾಗಿ ಬಹಿರಂಗಪಡಿಸಿದ್ದಕ್ಕೆ ಕಾರಣ ನೀಡಿದ ನೆತನ್ಯಾಹು, "ಯುದ್ಧವು ಉತ್ತುಂಗದಲ್ಲಿದ್ದಾಗ ಈ ವರದಿ ಹೊರಬಂದರೆ ಅದನ್ನು ಇರಾನ್ ತನ್ನ ಪರವಾಗಿ ಪ್ರಚಾರಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇತ್ತು. ಹಾಗಾಗಿ ಚಿಕಿತ್ಸೆ ಮುಗಿಯುವವರೆಗೆ ಇದನ್ನು ಗೌಪ್ಯವಾಗಿಡಲು ನಿರ್ಧರಿಸಿದ್ದೆ. ಇಂದು ನಾನು ಸಂಪೂರ್ಣ ಆರೋಗ್ಯವಂತನಾಗಿದ್ದೇನೆ ಮತ್ತು ದೈಹಿಕವಾಗಿ ಸದೃಢನಾಗಿದ್ದೇನೆ," ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಅವರು ಸುಮಾರು ಎರಡೂವರೆ ತಿಂಗಳ ಕಾಲ ಗುರಿ ಆಧಾರಿತ ವಿಕಿರಣ ಚಿಕಿತ್ಸೆಗೆ (Targeted Radiation Therapy) ಒಳಗಾಗಿದ್ದರು.

ಪ್ರಾಸ್ಟೇಟ್ ಕ್ಯಾನ್ಸರ್: ಪುರುಷರಲ್ಲಿ ಹೆಚ್ಚುತ್ತಿರುವ ಆತಂಕ

ಪ್ರಾಸ್ಟೇಟ್ ಎಂಬುದು ಪುರುಷರ ಮೂತ್ರಕೋಶದ ಕೆಳಭಾಗದಲ್ಲಿರುವ ಸಣ್ಣ ಅಡಿಕೆ ಗಾತ್ರದ ಗ್ರಂಥಿ. ಇದು ವೀರ್ಯದ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಶ್ವದಾದ್ಯಂತ ಪುರುಷರನ್ನು ಕಾಡುವ ಕ್ಯಾನ್ಸರ್‌ಗಳಲ್ಲಿ ಇದು ಎರಡನೇ ಸ್ಥಾನದಲ್ಲಿದೆ.

ಜಾಗತಿಕ ಅಂಕಿ-ಅಂಶಗಳು

ವಾರ್ಷಿಕ ಪ್ರಕರಣಗಳು: ಜಾಗತಿಕವಾಗಿ ಪ್ರತಿ ವರ್ಷ ಅಂದಾಜು 14.7 ಲಕ್ಷ ಹೊಸ ಪ್ರಕರಣಗಳು ವರದಿಯಾಗುತ್ತಿವೆ.
ಅಮೆರಿಕದ ಸ್ಥಿತಿ: 2025ರ ಅಂಕಿ-ಅಂಶಗಳ ಪ್ರಕಾರ, ಅಮೆರಿಕದ ಒಟ್ಟು ಪುರುಷ ಕ್ಯಾನ್ಸರ್ ಪ್ರಕರಣಗಳಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಪಾಲು ಶೇ. 30 ರಷ್ಟಿದೆ. ಅಲ್ಲಿ ಈ ವರ್ಷ 3.13 ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆಯಿದೆ.
ಸಾವಿನ ಪ್ರಮಾಣ: ಅಮೆರಿಕವೊಂದರಲ್ಲೇ ಈ ವರ್ಷ ಅಂದಾಜು 35,770 ಸಾವುಗಳು ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ.
ಜನಾಂಗೀಯ ವ್ಯತ್ಯಾಸ: ಸಂಶೋಧನೆಗಳ ಪ್ರಕಾರ, ಕಪ್ಪು ವರ್ಣೀಯ ಪುರುಷರಲ್ಲಿ (Black men) ಈ ಕ್ಯಾನ್ಸರ್ ಬರುವ ಸಾಧ್ಯತೆ ಮತ್ತು ತೀವ್ರತೆ ಹೆಚ್ಚಾಗಿರುತ್ತದೆ. ಉತ್ತರ ಯುರೋಪ್ ಮತ್ತು ಕೆರಿಬಿಯನ್ ಭಾಗದ ಜನರಲ್ಲಿಯೂ ಇದರ ಪ್ರಮಾಣ ಅಧಿಕವಿದೆ.

ಅಪಾಯದ ಲಕ್ಷಣಗಳೇನು?

ಆರಂಭಿಕ ಹಂತದಲ್ಲಿ ಇದು ಯಾವುದೇ ನೋವು ಅಥವಾ ಲಕ್ಷಣಗಳನ್ನು ತೋರಿಸುವುದಿಲ್ಲ. ಆದರೆ ರೋಗ ಉಲ್ಬಣಗೊಂಡಂತೆ ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಳ್ಳಬಹುದು:
ರಾತ್ರಿ ವೇಳೆ ಪದೇ ಪದೇ ಮೂತ್ರ ವಿಸರ್ಜನೆಯ ತುರ್ತು.
ಮೂತ್ರದ ಹರಿವು ದುರ್ಬಲವಾಗುವುದು ಅಥವಾ ಅಡಚಣೆಯಾಗುವುದು.
ಮೂತ್ರ ವಿಸರ್ಜನೆ ಅಥವಾ ಸ್ಖಲನದ ವೇಳೆ ಉರಿ ಮತ್ತು ನೋವು.
ಮೂತ್ರ ಅಥವಾ ವೀರ್ಯದಲ್ಲಿ ರಕ್ತದ ಅಂಶ ಕಾಣಿಸಿಕೊಳ್ಳುವುದು.
ಕೆಳಬೆನ್ನು, ಸೊಂಟ ಅಥವಾ ಎದೆಯ ಭಾಗದಲ್ಲಿ ಸತತ ನೋವು.

ಪತ್ತೆ ಮತ್ತು ಚಿಕಿತ್ಸೆ

"ಪ್ರಾಸ್ಟೇಟ್ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಪತ್ತೆಯಾದರೆ ಬದುಕುಳಿಯುವ ಸಾಧ್ಯತೆ ಶೇ. 98 ರಿಂದ 100 ರಷ್ಟಿರುತ್ತದೆ," ಎಂದು ವೈದ್ಯಕೀಯ ವರದಿಗಳು ಹೇಳುತ್ತವೆ. ನೆತನ್ಯಾಹು ಅವರ ಪ್ರಕರಣದಲ್ಲಿ ನಿಯಮಿತ ತಪಾಸಣೆ ನಡೆದಿದ್ದರಿಂದ ರೋಗ ಹರಡುವ ಮೊದಲೇ ಪತ್ತೆಹಚ್ಚಲು ಸಾಧ್ಯವಾಯಿತು.

ಯಾವ ವಯಸ್ಸಿನಲ್ಲಿ ತಪಾಸಣೆ ಅಗತ್ಯ?

ಸಾಮಾನ್ಯವಾಗಿ 55 ವರ್ಷ ಮೇಲ್ಪಟ್ಟವರು ನಿಯಮಿತವಾಗಿ 'ಪಿಎಸ್ಎ' (PSA) ಪರೀಕ್ಷೆ ಮಾಡಿಸಿಕೊಳ್ಳಬೇಕು. ಆದರೆ ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಇತಿಹಾಸವಿದ್ದರೆ, ಅಂತಹವರು 40 ವರ್ಷದಿಂದಲೇ ತಪಾಸಣೆಗೆ ಒಳಗಾಗುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ,(ಏಜೆನ್ಸೀಸ್​).