ಅಮೆರಿಕಕ್ಕೆ ಭಾರಿ ಪೆಟ್ಟು: ಒಂದೇ ಕ್ಷಣದಲ್ಲಿ 2.000 ಕೋಟಿ ಸಮುದ್ರ ಪಾಲು! ಇರಾನ್ ಗಡಿಯಲ್ಲಿ ಪತನವಾಯ್ತು ದೊಡ್ಡಣ್ಣನ ಅತ್ಯಂತ ದುಬಾರಿ ಡ್ರೋನ್​! 
ವಿದೇಶ

ಅಮೆರಿಕಕ್ಕೆ ಭಾರಿ ಪೆಟ್ಟು: ಒಂದೇ ಕ್ಷಣದಲ್ಲಿ 2.000 ಕೋಟಿ ಸಮುದ್ರ ಪಾಲು! ಇರಾನ್ ಗಡಿಯಲ್ಲಿ ಪತನವಾಯ್ತು ದೊಡ್ಡಣ್ಣನ ಅತ್ಯಂತ ದುಬಾರಿ ಡ್ರೋನ್​! MQ4C Triton

ವಾಷಿಂಗ್ಟನ್: ಇರಾನ್ ಜೊತೆಗಿನ ಸಂಘರ್ಷದ ನಡುವೆ ಅಮೆರಿಕದ ಮಿಲಿಟರಿ ಶಕ್ತಿಯ ಸಂಕೇತವೆಂದೇ ಪರಿಗಣಿಸಲಾಗಿದ್ದ ಅತ್ಯಂತ ದುಬಾರಿ MQ-4C Triton ಕಣ್ಗಾವಲು ಡ್ರೋನ್ ಪರ್ಷಿಯನ್ ಕೊಲ್ಲಿಯ ಆಳಕ್ಕೆ ಬಿದ್ದಿದೆ. ಇದರ ಮೌಲ್ಯ ಸುಮಾರು 2,000 ಕೋಟಿ ರೂಪಾಯಿಗಳಿಗೂ ಅಧಿಕ ಎಂದು ಅಂದಾಜಿಸಲಾಗಿದ್ದು, ಇದು ಅಮೆರಿಕದ ಇತ್ತೀಚಿನ ವರ್ಷಗಳ ಅತಿದೊಡ್ಡ ರಕ್ಷಣಾ ನಷ್ಟಗಳಲ್ಲಿ ಒಂದಾಗಿದೆ.

ಏನಿದು ಘಟನೆ..?

ಕಳೆದ ಏಪ್ರಿಲ್ 9 ರಂದು ಅಮೆರಿಕ ನೌಕಾಪಡೆಗೆ ಸೇರಿದ ಈ ಮಾನವರಹಿತ ವಿಮಾನವು ಪರ್ಷಿಯನ್ ಕೊಲ್ಲಿಯ ಆಕಾಶದಲ್ಲಿ ಗಸ್ತು ತಿರುಗುತ್ತಿದ್ದಾಗ ಹಠಾತ್ ತಾಂತ್ರಿಕ ದೋಷಕ್ಕೀಡಾಯಿತು. ಫ್ಲೈಟ್‌ರಾಡಾರ್24 ಅಂಕಿಅಂಶಗಳ ಪ್ರಕಾರ, 50,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ಡ್ರೋನ್ ಇದ್ದಕ್ಕಿದ್ದಂತೆ 'ಕೋಡ್ 7700' (ತುರ್ತು ಪರಿಸ್ಥಿತಿ) ಸಂಕೇತವನ್ನು ರವಾನಿಸಿ, ಕೇವಲ 15 ನಿಮಿಷಗಳಲ್ಲಿ ಸಮುದ್ರದೊಳಗೆ ನಾಪತ್ತೆಯಾಗಿದೆ. ಈ ಘಟನೆಯನ್ನು ಅಮೆರಿಕ ನೌಕಾಪಡೆಯ ಸುರಕ್ಷತಾ ಕಮಾಂಡ್ ಕ್ಲಾಸ್ ಎ ಮ್ಯಾಪ್ ಎಂದು ವರ್ಗೀಕರಿಸಿದೆ.

ಯುದ್ಧ ವಿಮಾನಗಳಿಗಿಂತಲೂ ದುಬಾರಿ!

ವಿಶೇಷವೆಂದರೆ, ಈ ಒಂದು ಡ್ರೋನ್‌ನ ಬೆಲೆ ಎರಡು F-35 ಸ್ಟೆಲ್ತ್ ಫೈಟರ್ ಜೆಟ್‌ಗಳಿಗಿಂತಲೂ ಹೆಚ್ಚುಗಿದ್ದು. ಅಮೆರಿಕ ಈಗಾಗಲೇ ಯುದ್ಧದಲ್ಲಿ ಹಲವು ವಿಮಾನಗಳನ್ನು ಕಳೆದುಕೊಂಡಿದ್ದರೂ, ಟ್ರೈಟಾನ್ ನಷ್ಟವು ಆರ್ಥಿಕವಾಗಿ ಮತ್ತು ತಾಂತ್ರಿಕವಾಗಿ ದೊಡ್ಡ ಹೊಡೆತ ನೀಡಿದೆ.

MQ-4C ಟ್ರೈಟಾನ್‌ನ ವಿಶೇಷತೆಗಳು

ದೀರ್ಘಕಾಲದ ಹಾರಾಟ: ಇದು ನಿರಂತರವಾಗಿ 24 ಗಂಟೆಗಳಿಗೂ ಹೆಚ್ಚು ಕಾಲ ಹಾರಬಲ್ಲದು.
ವ್ಯಾಪ್ತಿ: ಒಂದೇ ಹಾರಾಟದಲ್ಲಿ ಸುಮಾರು 7,400 ನಾಟಿಕಲ್ ಮೈಲಿ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ.
ಹೈ-ಟೆಕ್ ಸೆನ್ಸಾರ್: 360 ಡಿಗ್ರಿ ಮಲ್ಟಿ-ಇಂಟೆಲಿಜೆನ್ಸ್ ಸೆನ್ಸಾರ್ ಹೊಂದಿದ್ದು, ಶತ್ರುಗಳ ಸಣ್ಣ ಚಟುವಟಿಕೆಯನ್ನೂ ಪತ್ತೆ ಮಾಡುತ್ತದೆ.
ಕಾರ್ಯಕ್ಷಮತೆ: ಸಮುದ್ರ ಮಟ್ಟದಿಂದ 50,000 ಅಡಿ ಎತ್ತರದಲ್ಲಿ ಹಾರುತ್ತಾ ಏಕಕಾಲದಲ್ಲಿ ಸಾವಿರಾರು ಗುರಿಗಳನ್ನು ಗಮನಿಸಬಲ್ಲದು.

ಇರಾನ್ ಪಾತ್ರವೇನು..?

ಡ್ರೋನ್ ಕಣ್ಮರೆಯಾದ ಸ್ಥಳವು ಇರಾನ್‌ನ ಸಮೀಪವಿರುವ ಹಾರ್ಮುಜ್ ಜಲಸಂಧಿಯಾಗಿದೆ. ಇದು ಇರಾನ್‌ನಿಂದ ಹೊಡೆದುರುಳಿಸಲ್ಪಟ್ಟಿದೆಯೇ ಅಥವಾ ತಾಂತ್ರಿಕ ದೋಷದಿಂದ ಬಿದ್ದಿದೆಯೇ ಎಂಬ ಬಗ್ಗೆ ಅಮೆರಿಕದ ರಕ್ಷಣಾ ಇಲಾಖೆ ತನಿಖೆ ನಡೆಸುತ್ತಿದೆ. ಸದ್ಯಕ್ಕೆ ಇದು ಅಪಘಾತ ಎಂದು ಅಮೆರಿಕ ಹೇಳುತ್ತಿದ್ದರೂ, ಯುದ್ಧದ ವಾತಾವರಣದಲ್ಲಿ ಈ ನಷ್ಟವು ಅಮೆರಿಕದ ಕಣ್ಗಾವಲು ವ್ಯವಸ್ಥೆಯನ್ನು ದುರ್ಬಲಗೊಳಿಸುವ ಸಾಧ್ಯತೆಯಿದೆ.
ಈ ನಷ್ಟವು ಅಮೆರಿಕಕ್ಕೆ ಕೇವಲ ಹಣಕಾಸಿನ ನಷ್ಟವಲ್ಲ, ಬದಲಾಗಿ ಶತ್ರುಗಳ ಮೇಲೆ ನಿಗಾ ಇಡುವ ಅದರ ಕಣ್ಣುಗಳನ್ನು ತಾತ್ಕಾಲಿಕವಾಗಿ ಮುಚ್ಚಿದಂತಾಗಿದೆ,(ಏಜೆನ್ಸೀಸ್).