ಮಧ್ಯಪ್ರಾಚ್ಯದ ಯುದ್ಧಕ್ಕೆ ಅಮೆರಿಕ ವ್ಯಯಿಸಿದ್ದು ಎಷ್ಟು? ಇರಾನ್ ಸಮರದ ವೆಚ್ಚ ಮರೆಮಾಚುತ್ತಿದೆಯೇ ಟ್ರಂಪ್ ಸರ್ಕಾರ..?
ವಾಷಿಂಗ್ಟನ್: ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧದ ವೆಚ್ಚದ ಕುರಿತು ಅಮೆರಿಕದ ರಕ್ಷಣಾ ಇಲಾಖೆ (US War Expenses) ನೀಡಿರುವ ಅಂಕಿಅಂಶಗಳು ಈಗ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಬುಧವಾರ ನಡೆದ ಕಾಂಗ್ರೆಷನಲ್ ವಿಚಾರಣೆಯಲ್ಲಿ ಪೆಂಟಗನ್ ಅಧಿಕಾರಿಗಳು ಯುದ್ಧಕ್ಕಾಗಿ ಇದುವರೆಗೆ 25 ಬಿಲಿಯನ್ ಡಾಲರ್ ಖರ್ಚಾಗಿದೆ ಎಂದು ತಿಳಿಸಿದ್ದಾರೆ. ಆದರೆ, ರಕ್ಷಣಾ ತಜ್ಞರು ಮತ್ತು ಸಂಸದರು ಈ ಅಂಕಿಅಂಶವನ್ನು ಕಿರಿದಾದ ಲೆಕ್ಕಾಚಾರ ಎಂದು ಕರೆದಿದ್ದು, ಅಸಲಿ ವೆಚ್ಚ ಇದಕ್ಕಿಂತ ಎಷ್ಟೋ ಪಟ್ಟು ಹೆಚ್ಚಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಪೆಂಟಗನ್ ನೀಡಿರುವ ಈ ಅಂದಾಜು ಪಟ್ಟಿಯಲ್ಲಿ ಯುದ್ಧದ ಹಲವು ಪ್ರಮುಖ ವೆಚ್ಚಗಳನ್ನು ಕೈಬಿಡಲಾಗಿದೆ ಎಂದು ತಜ್ಞರು ವಾದಿಸಿದ್ದಾರೆ.
ಪೆಂಟಗನ್ ಲೆಕ್ಕಾಚಾರದ ಒಳನೋಟ
ಪೆಂಟಗನ್ ಮಾಹಿತಿಯ ಆಧಾರದ ಮೇಲೆ ಬ್ಲೂಮ್‌ಬರ್ಗ್ ನಡೆಸಿದ ವಿಶ್ಲೇಷಣೆಯು ಈ ಕೆಳಗಿನ ಪ್ರಮುಖ ವೆಚ್ಚಗಳನ್ನು ಎತ್ತಿ ತೋರಿಸಿದೆ.
ಶಸ್ತ್ರಾಸ್ತ್ರಗಳು: ಸುಮಾರು 8 ಬಿಲಿಯನ್ ಡಾಲರ್ ಮೊತ್ತದ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆ.
ಸಾಮಗ್ರಿ ಬದಲಾವಣೆ: ಯುದ್ಧದಲ್ಲಿ ಹಾನಿಗೊಳಗಾದ ವಿಮಾನಗಳು ಮತ್ತು ಇತರ ಮಿಲಿಟರಿ ಉಪಕರಣಗಳನ್ನು ಬದಲಿಸಲು 5 ಬಿಲಿಯನ್ ಡಾಲರ್ ವ್ಯಯಿಸಲಾಗಿದೆ.
ನೌಕಾಪಡೆ ಕಾರ್ಯಾಚರಣೆ: ಫೆಬ್ರವರಿ 28 ರಿಂದ ಈ ಪ್ರದೇಶದಲ್ಲಿ ನಿಯೋಜಿಸಲಾದ ವಿಮಾನವಾಹಕ ನೌಕೆಗಳು ಮತ್ತು 16 ಡಿಸ್ಟ್ರೋಯರ್‌ಗಳ ಕಾರ್ಯಾಚರಣೆಗೆ ಸುಮಾರು 1 ಬಿಲಿಯನ್ ಡಾಲರ್ ಖರ್ಚಾಗಿದೆ.
ಆದರೆ, ಈ 25 ಬಿಲಿಯನ್ ಡಾಲರ್ ಲೆಕ್ಕಾಚಾರದಲ್ಲಿ ಪಶ್ಚಿಮ ಏಷ್ಯಾದಲ್ಲಿ ಹಾನಿಗೊಳಗಾದ ಅಮೆರಿಕದ ಮಿಲಿಟರಿ ನೆಲೆಗಳ ದುರಸ್ತಿ ವೆಚ್ಚ, ಫೆಬ್ರವರಿ 28ಕ್ಕಿಂತ ಮೊದಲು ನಡೆದ ಕಾರ್ಯಾಚರಣೆಯ ವೆಚ್ಚಗಳು ಮತ್ತು ಪ್ರಸ್ತುತ ನಡೆಯುತ್ತಿರುವ ನೌಕಾ ದಿಗ್ಬಂಧನದ ವೆಚ್ಚಗಳನ್ನು ಸೇರಿಸಲಾಗಿಲ್ಲ ಎಂಬುದು ವಿಶ್ಲೇಷಕರ ಗಂಭೀರ ಆರೋಪವಾಗಿದೆ.
ಇದು ಕಣ್ಣೊರೆಸುವ ತಂತ್ರ: ತಜ್ಞರ ಕಿಡಿ
ಸ್ಟಿಮ್ಸನ್ ಸೆಂಟರ್‌ನ ಹಿರಿಯ ಸದಸ್ಯೆ ಕೆಲ್ಲಿ ಗ್ರೀಕೋ ಅವರು ಪೆಂಟಗನ್ ಅಂಕಿಅಂಶವನ್ನು ಅಸಮರ್ಪಕ ಎಂದು ಕರೆದಿದ್ದಾರೆ. ನೆಲೆಗಳಿಗೆ ಸಂಭವಿಸಿದ ಹಾನಿ, ಹೆಚ್ಚುತ್ತಿರುವ ಇಂಧನ ವೆಚ್ಚ ಮತ್ತು ಒಟ್ಟಾರೆ ಕಾರ್ಯಾಚರಣೆಯ ವೆಚ್ಚಗಳನ್ನು ಪೆಂಟಗನ್ ಹೊರಗಿಟ್ಟಿದೆ. ಇದು ಕೇವಲ ಯುದ್ಧದ ಒಂದು ಸಣ್ಣ ಭಾಗದ ಲೆಕ್ಕಾಚಾರವಷ್ಟೇ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನೊಂದೆಡೆ, ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಇಂಟರ್ನ್ಯಾಷನಲ್ ಸ್ಟಡೀಸ್ ಸಂಸ್ಥೆಯು ಕೇವಲ ಶಸ್ತ್ರಾಸ್ತ್ರಗಳ ವೆಚ್ಚವೇ 25 ಬಿಲಿಯನ್ ಡಾಲರ್ ತಲುಪಬಹುದು ಎಂದು ಅಂದಾಜಿಸಿದೆ. ಸೆನೆಟರ್ ರಿಚರ್ಡ್ ಬ್ಲೂಮೆಂಥಾಲ್ ಅವರು ಯುದ್ಧಕ್ಕೆ ದಿನವೊಂದಕ್ಕೆ ಸುಮಾರು 2 ಬಿಲಿಯನ್ ಡಾಲರ್ ಖರ್ಚಾಗುತ್ತಿದೆ ಎಂಬ ಮಾಹಿತಿಯನ್ನು ಈ ಹಿಂದೆ ತಮಗೆ ನೀಡಲಾಗಿತ್ತು ಎಂದು ಹೇಳಿದ್ದು, ಈಗಿನ 25 ಬಿಲಿಯನ್ ಡಾಲರ್ ಮೊತ್ತವು ತೀರಾ ಕಡಿಮೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ವಿಚಾರಣೆಯಲ್ಲಿ ಪೀಟ್ ಹೆಗ್ಸೆತ್‌ಗೆ ತರಾಟೆ
ಯುದ್ಧ ಆರಂಭವಾದ ನಂತರ ಮೊದಲ ಬಾರಿಗೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಹೌಸ್ ಆರ್ಮ್ಡ್ ಸರ್ವಿಸಸ್ ಸಮಿತಿಯ ಮುಂದೆ ಹಾಜರಾದರು. ಏಪ್ರಿಲ್ 29 ರಂದು ನಡೆದ ಆರು ಗಂಟೆಗಳ ಸುದೀರ್ಘ ವಿಚಾರಣೆಯಲ್ಲಿ ಹೆಗ್ಸೆತ್ ಅವರು ಸಂಸದರ ಕಠಿಣ ಪ್ರಶ್ನೆಗಳನ್ನು ಎದುರಿಸಬೇಕಾಯಿತು. ಟ್ರಂಪ್ ಸರ್ಕಾರದ 1.5 ಟ್ರಿಲಿಯನ್ ಡಾಲರ್ ರಕ್ಷಣಾ ಬಜೆಟ್ ಮತ್ತು ಯುದ್ಧದಿಂದ ಅಮೆರಿಕದ ಶಸ್ತ್ರಾಸ್ತ್ರಗಳ ಸಂಗ್ರಹದ ಮೇಲಾಗುತ್ತಿರುವ ಪರಿಣಾಮದ ಬಗ್ಗೆ ಡೆಮೋಕ್ರಾಟ್ ಮತ್ತು ಕೆಲವು ರಿಪಬ್ಲಿಕನ್ ಸದಸ್ಯರು ಆತಂಕ ವ್ಯಕ್ತಪಡಿಸಿದರು.
ಯುದ್ಧ ಎಷ್ಟು ದಿನ ಮುಂದುವರಿಯಬಹುದು ಅಥವಾ ಮುಂದಿನ ವೆಚ್ಚಗಳೇನು ಎಂಬ ಪ್ರಶ್ನೆಗಳಿಗೆ ಹೆಗ್ಸೆತ್ ನಿಖರ ಉತ್ತರ ನೀಡಲು ನಿರಾಕರಿಸಿದರು. ಅಲ್ಲದೆ, ಇರಾನ್‌ನ ಮಿನಾಬ್‌ನಲ್ಲಿರುವ ಪ್ರಾಥಮಿಕ ಶಾಲೆಯ ಮೇಲೆ ನಡೆದ ದಾಳಿಯಲ್ಲಿ 150 ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟ ಘಟನೆಯ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು. ಏಪ್ರಿಲ್ 30 ರಂದು ಹೆಗ್ಸೆತ್ ಅವರು ಎರಡನೇ ದಿನದ ವಿಚಾರಣೆಗೆ ಹಾಜರಾಗಲಿದ್ದಾರೆ.
ಅಮೆರಿಕದ ತೆರಿಗೆದಾರರ ಹಣವು ಇರಾನ್ ಯುದ್ಧದ ಹೆಸರಿನಲ್ಲಿ ಎಷ್ಟು ಪಾಲಾಗುತ್ತಿದೆ ಎಂಬುದು ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ,(ಏಜೆನ್ಸೀಸ್).