Israel Intelligence: ಡೊನಾಲ್ಡ್ ಟ್ರಂಪ್ ಹತ್ಯೆ ಮಾಡಲು ಇರಾನ್ ಸಂಚು ರೂಪಿಸುತ್ತಿದೆ ಎಂಬ ಹೊಸ ಇಂಟೆಲಿಜೆನ್ಸ್ ವರದಿಯನ್ನು ಇಸ್ರೇಲ್ ಅಮೆರಿಕದ ರಕ್ಷಣಾ ಇಲಾಖೆ (ಪೆಂಟಗನ್) ಜೊತೆ ಹಂಚಿಕೊಂಡಿದೆ. ಸಿಎನ್‌ಎನ್ ವರದಿಯ ಪ್ರಕಾರ, ಅಮೆರಿಕದ ಗುಪ್ತಚರ ಸಂಸ್ಥೆಗಳಿಗೆ ಈ ಹಿಂದಿನಿಂದಲೂ ಇರಾನ್‌ನ ಇಂತಹ ಆಲೋಚನೆಗಳ ಬಗ್ಗೆ ಸಾಮಾನ್ಯ ಮಾಹಿತಿ ಇತ್ತಾದರೂ, ಇಸ್ರೇಲ್ ನೀಡಿದ ಈ ಹೊಸ ವರದಿ ತೀರಾ ನಿರ್ದಿಷ್ಟ ಮತ್ತು ಗಂಭೀರವಾಗಿದೆ.
ಆದರೆ, ಅಮೆರಿಕದ ಕೆಲವು ಹಿರಿಯ ಅಧಿಕಾರಿಗಳಲ್ಲಿ ಒಂದು ದೊಡ್ಡ ಅನುಮಾನ ಮೂಡಿದೆ. ಇರಾನ್ ಜೊತೆಗಿನ ಯುದ್ಧವನ್ನು ತೀವ್ರಗೊಳಿಸಬೇಕೋ ಅಥವಾ ಕದನ ವಿರಾಮವನ್ನು ಮುಂದುವರಿಸಬೇಕೋ ಎಂದು ಟ್ರಂಪ್ ಆಲೋಚಿಸುತ್ತಿರುವ ಸಂದರ್ಭದಲ್ಲೇ ಇಸ್ರೇಲ್ ಈ ಮಾಹಿತಿ ನೀಡಿದೆ. ಹಾಗಾಗಿ, ಟ್ರಂಪ್ ನಿರ್ಧಾರದ ಮೇಲೆ ಪ್ರಭಾವ ಬೀರಲು ಮತ್ತು ಅವರನ್ನು ಇರಾನ್ ವಿರುದ್ಧ ಯುದ್ಧಕ್ಕೆ ಪ್ರಚೋದಿಸಲು ಇಸ್ರೇಲ್ ಈ ತಂತ್ರ ಹೂಡಿದೆಯೇ ಎಂಬ ಆತಂಕ ಅಮೆರಿಕದ ಅಧಿಕಾರಿಗಳಲ್ಲಿದೆ.
ಟ್ರಂಪ್ ಬೆನ್ನಟ್ಟಿರುವ ಇರಾನ್‌ನ ಹಳೆಯ ಹಗೆತನ
2020ರಲ್ಲಿ ಟ್ರಂಪ್ ಮೊದಲ ಅಧಿಕಾರಾವಧಿಯಲ್ಲಿ ಅಮೆರಿಕ ನಡೆಸಿದ ದಾಳಿಯಲ್ಲಿ ಇರಾನ್‌ನ ಉನ್ನತ ಜನರಲ್ ಖಾಸಿಮ್ ಸುಲೈಮಾನಿ ಹತ್ಯೆಯಾಗಿದ್ದರು. ಅಂದಿನಿಂದಲೂ ಇರಾನ್ ಟ್ರಂಪ್ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿದೆ. ಫೆಬ್ರವರಿ 28 ರಂದು ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಹತರಾದ ಅಲಿ ಖಮೇನಿ ಮತ್ತು ಅವರ ಕುಟುಂಬದವರ ಅಂತ್ಯಕ್ರಿಯೆಯ ಮೆರವಣಿಗೆಯಲ್ಲೂ ಇರಾನ್ ನಾಗರಿಕರು ನಾವು ಟ್ರಂಪ್‌ನನ್ನು ಕೊಲ್ಲುತ್ತೇವೆ ಎಂಬ ಬ್ಯಾನರ್‌ಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವತಃ ಟ್ರಂಪ್ ಅನ್ಕಾರಾದಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ, ಅವರು ಅಮೆರಿಕದ ನಾಯಕನನ್ನು (ನನ್ನನ್ನು) ಮುಗಿಸಲು ಬಯಸಿದ್ದಾರೆ. ನಾನು ಅವರ ಪ್ರತಿ ಹಿಟ್ ಲಿಸ್ಟ್‌ನಲ್ಲಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ.
ಇರಾನ್ ಯುದ್ಧದ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವಿನ ಸಂಬಂಧ ಇತ್ತೀಚೆಗೆ ತಣ್ಣಗಾಗಿತ್ತು. ನೆತನ್ಯಾಹು ಇರಾನ್ ವಿರುದ್ಧ ಯುದ್ಧ ಮುಂದುವರಿಸಿ ತನ್ನ ಗುರಿ ಸಾಧಿಸಲು ಹಠ ಹಿಡಿದಿದ್ದರೆ, ಟ್ರಂಪ್ ಮಾತ್ರ ಈ ಯುದ್ಧದಿಂದ ಜಾಗತಿಕ ಆರ್ಥಿಕತೆ ಕುಸಿಯಬಹುದು ಎಂಬ ಆತಂಕದಿಂದ ಯುದ್ಧದಿಂದ ಹೊರಬರಲು ಯತ್ನಿಸುತ್ತಿದ್ದರು. ಇದರ ಫಲವಾಗಿಯೇ ಕಳೆದ ತಿಂಗಳು ಅಮೆರಿಕ-ಇರಾನ್ ನಡುವೆ ಒಂದು ದುರ್ಬಲ ಕದನ ವಿರಾಮ ಏರ್ಪಟ್ಟಿತ್ತು. ಆದರೆ, ಗುರುವಾರ ಟ್ರಂಪ್ ಮತ್ತು ನೆತನ್ಯಾಹು ನಡುವೆ ಮತ್ತೆ ಮಾತುಕತೆ ನಡೆದಿದ್ದು, ಇಬ್ಬರು ನಾಯಕರು ಗಲ್ಫ್ ಪ್ರದೇಶದ ರಕ್ಷಣಾ ನೀತಿಗಳ ಕುರಿತು ಪರಸ್ಪರ ಸಮನ್ವಯತೆಯಿಂದ ಮುಂದುವರಿಯಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಇದು ಇಸ್ರೇಲ್‌ನ ರಾಜತಾಂತ್ರಿಕ ಗೆಲುವನ್ನು ಸೂಚಿಸುತ್ತದೆ.
ಇಸ್ರೇಲ್ ನೀಡಿದ ಈ ಒಂದು ಗುಪ್ತಚರ ಮಾಹಿತಿ ಇಡೀ ಮಧ್ಯಪ್ರಾಚ್ಯದ ಚಿತ್ರಣವನ್ನೇ ಬದಲಿಸಿದೆ. ಕದನ ವಿರಾಮದ ಮೂಲಕ ಶಾಂತಿ ಬಯಸಿದ್ದ ಟ್ರಂಪ್, ಈಗ ತಮ್ಮದೇ ಜೀವಕ್ಕೆ ಕುತ್ತು ಬಂದಿರುವುದನ್ನು ಅರಿತು ಇರಾನ್ ಮೇಲೆ ಮತ್ತೆ ದಾಳಿ ಮಾಡಲು ಆದೇಶಿಸಿದ್ದಾರೆ. ಇದು ಇರಾನ್ ಅನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದ್ದು, ಇಸ್ರೇಲ್ ತಾನು ಅಂದುಕೊಂಡಂತೆ ಅಮೆರಿಕವನ್ನು ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿ ನಿಲ್ಲಿಸುವಲ್ಲಿ ಯಶಸ್ವಿಯಾದಂತೆ ಕಾಣುತ್ತಿದೆ(ಏಜೆನ್ಸೀಸ್).