ಸೌದಿ ಅರೇಬಿಯಾದ ಮೆಕ್ಕಾ ಮೇಲೆ ಹೌತಿಗಳ ಡ್ರೋನ್ ದಾಳಿ
ಸೌದಿ ಅರೇಬಿಯಾ: ಕಳೆದ ಕೆಲ ತಿಂಗಳುಗಳಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದಾಳಿ ನಡೆಸಿದ್ದ ಹಿನ್ನಲೆ ಜಾಗತಿಕ ಅಶಾಂತಿ ನಿರ್ಮಾಣವಾಗಿತ್ತು. ಈಗ ಸೌದಿ ಅರೇಬಿಯಾನಲ್ಲಿ ಸಂಘರ್ಷದ ಕರಿ ಛಾಯೆ ಕಾಣಿಸುತ್ತಿದೆ.
ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ನಗರವಾದ ಮೆಕ್ಕಾವನ್ನೇ ಗುರಿಯಾಗಿಸಿ ಹೌತಿ ಬಂಡುಕೋರರು (Houthi Attack on Mecca) ನಡೆಸಿದ ವೈಮಾನಿಕ ದಾಳಿಯು ಮಧ್ಯಪ್ರಾಚ್ಯದಲ್ಲಿ ಭಾರಿ ಬಿಕ್ಕಟ್ಟಿಗೆ ಕಾರಣವಾಗಿದೆ. ಮೆಕ್ಕಾ, ಜೈಡ್ ಮತ್ತು ತೈಫ್ ಪ್ರಾಂತ್ಯಗಳಲ್ಲಿ ಕೆಲಕಾಲ ಹೈ ಅಲರ್ಟ್ ಘೋಷಿಸಲಾಗಿದ್ದು, ಇತಿಹಾಸದಲ್ಲಿ ಮೊದಲ ಬಾರಿಗೆ ಮೆಕ್ಕಾದಲ್ಲಿ ಈ ರೀತಿ ಎಚ್ಚರಿಕೆ ಸೈರನ್ ಮೊಳಗಿದೆ.
ಅರಬ್ನ ವಾಯು ಪ್ರದೇಶವನ್ನು ಪ್ರವೇಶಿಸಲು ಯತ್ನಿಸಿದ ಹೌತಿಗಳ ಡ್ರೋನ್ವೊಂದನ್ನು ಸೌದಿ ರಕ್ಷಣಾ ಪಡೆ ಹೊಡೆದುರಳಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಇಸ್ಲಾಂನ ಪವಿತ್ರ ಸ್ಥಳದ ಮೇಲೆ ಹೌತಿಗಳ ಈ ದಾಳಿಗೆ ಸಂಪೂರ್ಣ ಅರಬ್ ಬೆಕ್ಕಸ ಬೆರಗಾಗಿದೆ.
ಪವಿತ್ರ ಮಸೀದಿಗಳೇ ಗಡಿ!
ದಾಳಿಯ ಬಳಿಕ ಕಠಿಣ ಎಚ್ಚರಿಕೆ ನೀಡಿರುವ ಇಸ್ಲಾಮಿಕ್ ಸಹಕಾರ ಸಂಘಟನೆಯ ವಕ್ತಾರ ತುರ್ಕಿ ಅಲ್-ಮಲಿಕಿ, ಎರಡು ಪವಿತ್ರ ಮಸೀದಿಗಳು ಮತ್ತು ಯಾತ್ರಾರ್ಥಿಗಳನ್ನು ಗುರಿಮಾಡಿ ದಾಳಿ ನಡೆಸಬಾರದು, ಈ ಎರಡು ಸಂಗತಿಗಳು ಗಡಿರೇಖೆಯಂತೆ ವರ್ತಿಸಲಿವೆ ಎಂದಿದ್ದಾರೆ.
ಹೌತಿಗಳ ಯಾವುದೇ ದುಸ್ಸಾಹಸವನ್ನು ಸಹಿಸುವುದಿಲ್ಲ ಎಂದಿರುವ ಸೌದಿ ನೇತೃತ್ವದ ಮೈತ್ರಿಕೂಟ, ಮುಂದಿನ ದಿನಗಳಲ್ಲಿ ತಕ್ಕ ತಿರುಗೇಟು ನೀಡಲು ಸಜ್ಜಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಮದೀನಾದ ಪ್ರಿನ್ಸ್ ಮೊಹಮ್ಮದ್ ಬಿನ್ ಅಬ್ದುಲಜೀಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತೆರಳಬೇಕಿದ್ದ ಕೆಲವು ವಿಮಾನಗಳ ಸಂಚಾರವನ್ನು ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಹೌತಿಗಳ ವಾದವೇನು?
ಸೌದಿ ಅರೇಬಿಯಾದ ಈ ಗಂಭೀರ ಆರೋಪವನ್ನು ಹೌತಿ ಬಂಡುಕೋರರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಮೆಕ್ಕಾವನ್ನು ಗುರಿಯಾಗಿಸುತ್ತಿದ್ದೇವೆ ಎಂಬುದು ಶುದ್ಧ ಸುಳ್ಳು. ನಮ್ಮ ಮೇಲೆ ಅಪಪ್ರಚಾರ ಮಾಡಲು ಈ ಹಿಂದೆಯೂ ಇಂತಹ ಸುಳ್ಳುಗಳನ್ನು ಹೇಳಲಾಗಿದೆ ಎಂದು ಹೌತಿ ರಾಜಕೀಯ ಬ್ಯೂರೋದ ಹಜೆಮ್ ಅಲ್-ಅಸದ್ ಎಕ್ಸ್ (X) ನಲ್ಲಿ ಬರೆದುಕೊಂಡಿದ್ದಾರೆ.
ಕೆಂಪು ಸಮುದ್ರದಲ್ಲಿ ಉದ್ವಿಗ್ನತೆ ಮತ್ತು ಕತಾರ್ ಎಚ್ಚರಿಕೆ
ಯೆಮೆನ್ ಅಂತರ್ಯುದ್ಧ ತೀವ್ರಗೊಂಡ ಬಳಿಕ ಹೌತಿಗಳು ಸೌದಿ ಅರೇಬಿಯಾದ ತೈಲ ಸ್ಥಾವರಗಳ ಮೇಲೆ ನಿರಂತರ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ಮುಂದುವರಿಸಿದ್ದಾರೆ. ಕೆಂಪು ಸಮುದ್ರದಲ್ಲಿ ಸೌದಿ ಹಡಗುಗಳನ್ನು ಗುರಿಯಾಗಿಸುತ್ತಿರುವ ಬಂಡುಕೋರರು, ರಿಯಾದ್ ವಿರುದ್ಧ ನೌಕಾ ದಿಗ್ಬಂಧನವನ್ನೂ ಘೋಷಿಸಿದ್ದಾರೆ. ಪ್ರಮುಖ ಜಲಮಾರ್ಗವಾದ ಬಾಬ್ ಅಲ್-ಮಂಡಬ್ ಜಲಸಂಧಿಯನ್ನು ಮುಚ್ಚಿದರೆ ಅದು ಇಡೀ ಜಗತ್ತಿಗೇ ವಿನಾಶಕಾರಿಯಾಗಲಿದೆ ಎಂದು ಕತಾರ್ ಗಂಭೀರ ಎಚ್ಚರಿಕೆ ನೀಡಿದೆ.
ಮಧ್ಯಪ್ರಾಚ್ಯದಲ್ಲಿ ದಿನದಿಂದ ದಿನಕ್ಕೆ ಸಂಘರ್ಷಗಳು ಹೆಚ್ಚಾದಂತೆ ಜಾಗತಿಕ ಮಟ್ಟದಲ್ಲೂ ತಳಮಳ ಸೃಷ್ಟಿಸಿದೆ. ತೈಲ ಮಾರುಕಟ್ಟೆಯ ಪ್ರಮುಖ ಕೊಂಡಿಯಾಗಿರುವ ಅರಬ್ ದೇಶಗಳು ಹೀಗೆ ಒಬ್ಬರ ಮೇಲೊಬ್ಬರು ದಾಳಿ ಮಾಡುತ್ತಿದ್ದರೆ, ಮುಂದಿನ ದಿನಗಳಲ್ಲಿ ತೈಲ ಮಾರುಕಟ್ಟೆಯಲ್ಲಿ ಭಾರಿ ತಲ್ಲಣವಾಗಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಸೌದಿ ನಾಯಕರು ಮುಂದಿನ ದಿನಗಳಲ್ಲಿ ಯಾವ ರೀತಿಯ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ, (ಏಜೆನ್ಸೀಸ್).